Advertisement

ಜಿಲ್ಲೆಗೆ ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ

12:28 PM Sep 30, 2018 | Team Udayavani |

ಬೆಂಗಳೂರು: ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲಾಡಳಿತ ಹಮ್ಮಿಕೊಂಡಿರುವ ಎರಡು ದಿನಗಳ ಉದ್ಯೋಗ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡಲಾಗುವುದು.

ಈ ಸಂಬಂಧ ವಿಜನ್‌ ಗ್ರೂಪ್‌ ರೂಪಿಸಲಾಗಿದ್ದು, ಇದರಲ್ಲಿ ಸುಮಾರು 43 ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರು ಇದ್ದಾರೆ. ಗ್ರೂಪ್‌ ಅಡಿ 9 ಕ್ಲಸ್ಟರ್‌ಗಳನ್ನು ರಚಿಸಿದ್ದು, ಎಲ್ಲ ಜಿಲ್ಲೆಯಲ್ಲಿ ತಲಾ ಒಂದು ಲಕ್ಷ ಉದ್ಯೋಗ ಸೃಷ್ಟಿಸಲಾಗುವುದು. ಇದು ಸರ್ಕಾರದ ಆದ್ಯತೆ ಮತ್ತು ಕರ್ತವ್ಯವಾಗಿದೆ ಎಂದು ಹೇಳಿದರು. 

ಮನೆ ಬಾಗಿಲಲ್ಲೇ ತರಬೇತಿ!: ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ಅಂಗವಿಕಲರು, ಬುಡಕಟ್ಟು ಜನಾಂಗ ಮತ್ತು ದೂರದ ಹಳ್ಳಿಗಳಲ್ಲಿರುವ ಅಭ್ಯರ್ಥಿಗಳ ಮನೆ ಬಾಗಿಲಿಗೇ ತರಬೇತಿ ನೀಡುವ ದೃಷ್ಟಿಯಿಂದ “ಸ್ಕಿಲ್‌ ಆನ್‌ ವಿಲ್‌’ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಇದಲ್ಲದೆ, ಕೌಶಲ್ಯ ತರಬೇತಿ ಪಡೆದವರಿಗೆ ಯಾವುದೇ ಹಣ ಇಲ್ಲದಿದ್ದರೂ ಖಾತೆ ತೆರೆಯಲು ಅವಕಾಶ ಕಲ್ಪಿಸುವ ಜತೆಗೆ ಎಟಿಎಂ ಕಾರ್ಡ್‌ ಕೂಡ ಪಡೆಯಬಹುದು ಹಾಗೂ ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆ ಕೂಡ ಕಲ್ಪಿಸಲಾಗುವುದು. ಇಂಥ ಯೋಜನೆ ಜಾರಿಯಾಗುತ್ತಿರುವುದು ದೇಶದಲ್ಲಿ ಇದೇ ಮೊದಲು ಎಂದು ಮಾಹಿತಿ ನೀಡಿದರು.

Advertisement

ಕೇಂದ್ರ ಸರ್ಕಾರ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, ಆ ಭರವಸೆ ಈಡೇರಿಲ್ಲ. ಅದೇನೇ ಇರಲಿ, ರಾಜ್ಯ ಸರ್ಕಾರ ಮುಂದಿನ 10-12 ವರ್ಷಗಳಲ್ಲಿ 1.88 ಕೋಟಿ ಅಭ್ಯರ್ಥಿಗಳಿಗೆ ಉದ್ಯೋಗ ಸಂಬಂಧಿ ಕೌಶಲ್ಯ ತರಬೇತಿ ನೀಡಲಾಗುವುದು ಎಂದ ಸಚಿವ ದೇಶಪಾಂಡೆ, ಇಂದು ಮನುಷ್ಯ ಮಾಡುವ ಕೆಲಸವನ್ನು ಯಂತ್ರಗಳು ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ 21ನೇ ಶತಮಾನದ ದೊಡ್ಡ ಸವಾಲಾಗಿದೆ ಎಂದು ಹೇಳಿದರು.

ಸಂಸದ ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಜನತಾ ದರ್ಶನದಲ್ಲಿನ ಮನವಿಗಳು ಕೇವಲ ದರ್ಶನಕ್ಕೆ ಸೀಮಿತವಾಗದೆ, ವ್ಯವಸ್ಥಿತವಾಗಿ ವಿಲೇವಾರಿ ಆಗಬೇಕು. ಈ ನಿಟ್ಟಿನಲ್ಲಿ ಉದ್ಯೋಗಕ್ಕಾಗಿ ಮನವಿ ಸಲ್ಲಿಸಿದವರಿಗಾಗಿಯೇ ಮೇಳ ನಡೆಸುತ್ತಿರುವುದು ಸ್ವಾಗತಾರ್ಹ. ನವೆಂಬರ್‌ 28 ಮತ್ತು 29ರಂದು ಚಿಕ್ಕಬಳ್ಳಾಪುರದಲ್ಲೂ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಶಾಸಕರಾದ ಉದಯ್‌ ಗರುಡಾಚಾರ್‌, ಸೌಮ್ಯಾ ರೆಡ್ಡಿ, ಜಿಲ್ಲಾಧಿಕಾರಿಗಳಾದ ವಿಜಯ್‌ ಶಂಕರ್‌, ಕರಿಗೌಡ ಮತ್ತಿತರರು ಉಪಸ್ಥಿತರಿದ್ದರು. ಮೇಳದ ಮೊದಲ ದಿನ 6000 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಉದ್ಯೋಗ!: “ನಾವು ಕಾಟಾಚಾರಕ್ಕೆ ಉದ್ಯೋಗ ಮೇಳ ನಡೆಸುತ್ತಿಲ್ಲ. ಮೇಳದಲ್ಲಿ ಭಾಗವಹಿಸಿದ ಎಲ್ಲರಿಗೂ ಉದ್ಯೋಗ ದೊರೆಯಲಿದೆ. ಆದರೆ, ಅಭ್ಯರ್ಥಿಗಳಿಗೆ ತಾಳ್ಮೆ ಇರಬೇಕು. ನಿರಾಸೆಯಾಗದೆ ಮರಳಿ ಯತ್ನ ಮಾಡುತ್ತಿರಬೇಕು. ಇಂತಹ ಮೇಳಗಳು ಇನ್ನುಮುಂದೆ ನಿರಂತರವಾಗಿ ನಡೆಯಲಿವೆ,’ ಎಂದು ಸಿಎಂ ಹೇಳಿದರು. 

“ನಾನು ನಡೆಸಿದ ಎರಡು ಜನತಾ ದರ್ಶನದಲ್ಲಿ 12 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಈ ಪೈಕಿ ಮೂರು ಸಾವಿರಕ್ಕೂ ಅಧಿಕ ಹೆಚ್ಚು ಮಂದಿ ಉದ್ಯೋಗ ಬಯಸಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಹೀಗೆ ಮನವಿ ಸಲ್ಲಿಸಿದವರಿಗೆ ಮೇಳಕ್ಕೆ ನೇರ ಪ್ರವೇಶವಿತ್ತು. ಇದರೊಂದಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ಸೇರಿದಂತೆ ನೇರವಾಗಿ ಮೇಳದಲ್ಲಿ ಭಾಗವಹಿಸುವವರಿಗೂ ಅವಕಾಶ ಕಲ್ಪಿಸಲಾಗಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next