Advertisement

ಗುಡಿಸಲು ಮುಕ್ತ ತಾಲೂಕು ನಿರ್ಮಾಣ ಗುರಿ

03:11 PM Jun 12, 2018 | Team Udayavani |

ಸಂಡೂರು: ಇಡೀ ತಾಲೂಕನ್ನು ಗುಡಿಸಲುಮುಕ್ತ ಹಾಗೂ ಬಯಲು ಶೌಚ ಮುಕ್ತ ಮಾಡುವ ಗುರಿ ಹೊಂದಿರುವುದಾಗಿ ಶಾಸಕ ಈ. ತುಕಾರಾಮ ಹೇಳಿದರು. ಪಟ್ಟಣದ ತಾಪಂ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುವ ಮೂಲಕ ಗುರಿ ತಲುಪಲು ಯೋಜನೆ ರೂಪಿಸಬೇಕು ಎಂದರು.

Advertisement

ಕಳೆದ 10 ವರ್ಷಗಳ ಅವಧಿಯಲ್ಲಿ ನಿರ್ದಿಷ್ಟ ಯೋಜನೆ ರೂಪಿಸಿ ಗುರಿ ತಲುಪಿದ್ದೇನೆ. ಮುಂದಿನ 5 ವರ್ಷಗಳ ಯೋಜನೆ ಸಿದ್ಧಪಡಿಸಿರುವೆ. ಅಧಿಕಾರಿಗಳು ನಿರ್ದಿಷ್ಟ ಯೋಜನೆ ರೂಪಿಸಿ ಸಿದ್ಧರಾಗಬೇಕು. ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬೇಕಾಬಿಟ್ಟಿಯಾಗಿ ಸ್ಥಾಪಿಸಿರುವ ಚಿಕನ್‌ ಸೆಂಟರ್‌ ನಿಲ್ಲಿಸಬೇಕು, ನಿರ್ದಿಷ್ಟವಾಗಿ ಎಪಿಎಂಸಿಯಲ್ಲಿ ಸ್ಥಾಪಿಸಿದ ಕೇಂದ್ರದಲ್ಲಿ ಮಾತ್ರ ಮಾರಾಟ ಮಾಡುವಂತೆ ಸೂಚಿಸಿದರು.
 
ಈ ಸಂದರ್ಭದಲ್ಲಿ ಇಲಾಖೆವಾರು ಚರ್ಚೆ ನಡೆಸಿ ಕೃಷಿ ಇಲಾಖೆ ಬಗ್ಗೆ ಚರ್ಚಿಸಿ ಕೃಷಿ ಹೊಂಡಗಳಲ್ಲಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮೀನುಗಾರಿಕೆ ಮಾಡಲು ಅವಕಾಶವಿದೆ. ಯೋಜನೆ ರೂಪಿಸಿ. ಕೃಷಿ ಹೊಂಡಗಳಲ್ಲಿ ನೀರು ನಿಲ್ಲುತ್ತಿಲ್ಲ ಎಂಬ ದೂರುಗಳಿದ್ದು, ಅವುಗಳನ್ನು ಸರಿಪಡಿಸುವಂತೆ ಸೂಚಿಸಿದರು.

ಮುಂಗಾರು ಪ್ರವೇಶಿಸಿದ್ದು, ತಾಲೂಕಿಗೆ ಉತ್ತಮ ಬೀಜ, ಗೊಬ್ಬರ ಒದಗಿಸಬೇಕು. ಬಂಡ್ರಿಯಲ್ಲಿ ತಾತ್ಕಾಲಿಕ ಗೊಬ್ಬರ ಬೀಜ ವಿತರಣೆ ಕೇಂದ್ರ ಆರಂಭಿಸಿ. ಕಳಪೆ ಬೀಜ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದರು. 

ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ರಾಘಾಪುರ ಫಾರಂ ಅನ್ನು ನೂತನ ತರಬೇತಿ ಕೇಂದ್ರ ಮಾಡಲು ನಿರ್ಧರಿಸಿದ್ದು, ತಕ್ಷಣ ಕ್ರಿಯಾಯೋಜನೆ ಸಿದ್ಧಪಡಿಸಿ. ಪ್ರಮುಖವಾಗಿ ರೈತರಿಗೆ ತರಬೇತಿ, ಶಿಕ್ಷಕರ ಕೊಠಡಿ, ಉತ್ತಮ ತಳಿಗಳ ಅಭಿವೃದ್ಧಿ, ಅತಿಥಿಗೃಹ ಸೇರಿದಂತೆ ಸಕಲ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಿ. ಬೆಳೆ ವಿಮೆಯನ್ನು ರೈತರಿಗೆ ಸಮರ್ಪಕವಾಗಿ ವಿತರಿಸಲು ಸೂಚಿಸಿದರು.

ತಾಲೂಕಿನ 61,128 ದನಕರುಗಳಿಗೆ ಕಾಲುಬಾಯಿ ಲಸಿಕೆಯನ್ನು ಮನೆ ಮನೆಗೆ ತೆರಳಿ ಹಾಕುತ್ತಿದ್ದು 6 ಜನರ
ತಂಡ ರಚನೆ ಮಾಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಅಲ್ಲದೆ ಇನ್ನೂ ಹೆಚ್ಚಿನ ಹಸು ಸಾಕಾಣೆಗೆ ರೈತರಿಗೆ ಮಾಹಿತಿ ನೀಡುತ್ತಿರುವುದಾಗಿ ಎಂದು ವೈದ್ಯ ವಲಿಭಾಷಾ ತಿಳಿಸಿದರು.

Advertisement

ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಶಿಕ್ಷಕರು ಕಡ್ಡಾಯವಾಗಿ ಪಾಠ ಮಾಡಬೇಕು. ಎಲ್ಲ ಅಧಿಕಾರಿಗಳು, ಶಿಕ್ಷಕರು ತಮ್ಮ ಮೂಮೆಂಟರ್‌ ರಿಜಿಸ್ಟರ್‌ ಇಡಬೇಕು, ಇಲ್ಲವಾದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಲೂಕಿನ 55 ಕಿರಿಯ, 100 ಪ್ರಾಥಮಿಕ, 36 ಪ್ರೌಢಶಾಲೆಗಳಿದ್ದು ಉತ್ತಮ ಕಟ್ಟಡ, ಅಧುನಿಕ ಬೋಧನೆ, ಗ್ರಾಮ ಪಂಚಾಯಿತಿಗೆ ಒಂದು 4 ಎಕರೆ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಿ ತಕ್ಷಣ ಕ್ರಮ ವಹಿಸಬೇಕು. ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕು. ಅಗತ್ಯವಿರುವ ಶಾಲೆಗಳಲ್ಲಿ ಆರ್‌.ಓ.ಪ್ಲಾಂಟ್‌ ಸ್ಥಾಪಿಸಲು ಸೂಚಿಸಿದರು. ಶಿಕ್ಷಕರ ಕೊರತೆ ಬಗ್ಗೆ ಗಮನಹರಿಸಲಾಗುವುದು ಎಂದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ 5 ಪಿಎಚ್‌ಸಿ ಕೇಂದ್ರಗಳಿದ್ದು, ಸಿಬ್ಬಂದಿ ಕೊರತೆ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆ್ಯಂಬುಲನ್ಸ್‌ ಹಾಗೂ ಪಟ್ಟಣದ ಅಸ್ಪತ್ರೆಗೆ ಐಸಿಯು ಕೇಂದ್ರ ತೆರೆಯಲಾಗಿದೆ, ಡಯಾಲಿಸಸ್‌ ಸೆಂಟರ್‌ ತಕ್ಷಣ ಆರಂಭಿಸುವಂತೆ ಸೂಚನೆ ನೀಡಿದರು.

ತಾಲೂಕಿನ ಕೆರೆ, ರಸ್ತೆಗಳ ಅಭಿವೃದ್ಧಿ, ಎಲ್ಲ ಗ್ರಾಮಗಳಿಗೆ ಬಸ್‌ ವ್ಯವಸ್ಥೆ, ಮಕ್ಕಳಿಗೆ ಕಡ್ಡಾಯವಾಗಿ ಹಾಸ್ಟೆಲ್‌ ವ್ಯವಸ್ಥೆಗೆ ಸೂಚಿಸಿದರು. ತಹಶೀಲ್ದಾರ್‌ ಎಚ್‌. ಎಂ. ರಮೇಶ್‌, ಕಾರ್ಯನಿರ್ವಾಹಕ ಅಧಿಕಾರಿ ಸತೀಶ್‌ ರಡ್ಡಿ, ತಾಪಂ ಅಧ್ಯಕ್ಷೆ ಫರ್ಜಾನ್‌ಗೌಸ್‌ ಅಜಂ, ಉಪಾಧ್ಯಕ್ಷೆ ಗಂಗೂಬಾಯಿ ಚಂದ್ರನಾಯ್ಕ, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next