ಹೊಸದಿಲ್ಲಿ : 2022ರ ವೇಳೆಗೆ ದೇಶದ ರೈತರ ಆದಾಯ ದುಪ್ಪಟ್ಟು ಮಾಡುವ ಗುರಿ ನಮ್ಮ ಸರ್ಕಾರಕ್ಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
ನಮೋ ಆ್ಯಪ್‌ನಲ್ಲಿ ದೇಶದ ವಿವಿಧ ಭಾಗಗಳ ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ‘ರೈತರ ಆದಾಯ ದುಪ್ಪಟ್ಟು ಮಾಡುವ ಮಹತ್ವದ ಉದ್ದೇಶಕ್ಕಾಗಿ ಕೃಷಿ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ನಾವು 2.12 ಲಕ್ಷ ಕೋಟಿ ರೂಪಾಯಿ ಹಣ ಮೀಸಲಿರಿಸಿದ್ದೇವೆ’ ಎಂದರು.
‘ಎಲ್ಲೆಲ್ಲಾ ನೆರವು ಅಗತ್ಯವಾಗಿದೆ ಅಲ್ಲಿ ನಾವು ನಮ್ಮ ಸಹಾಯ ನೀಡುತ್ತಿದ್ದೇವೆ. ಕೃಷಿಕರಿಗೆ ಎಲ್ಲಾ ರೀತಿಯ ಸಲಹೆಗಳು, ಲಾಭಗಳು ಸಿಗುವಂತೆ ನಾವು ಶ್ರಮ ವಹಿಸುತ್ತಿದ್ದೇವೆ. ನನಗೆ ದೇಶದ ರೈತರಲ್ಲಿ ಭರವಸೆ ಇದೆ’ ಎಂದರು.
‘ಕೃಷಿ ಬೆಳೆಗೆ ವೆಚ್ಚವನ್ನು ಕಡಿತಗೊಳಿಸುವುದು, ಬೆಳೆಗೆ ನ್ಯಾಯೋಚಿತ ಬೆಲೆ ನೀಡುವುದು, ಉತ್ಪನ್ನಗಳನ್ನು ಕೊಳೆಯುವುದು, ಹಾಳಾಗುವುದನ್ನು ತಡೆಗಟ್ಟಿ ಆದಾಯದ ಪರ್ಯಾಯ ಮೂಲಗಳನ್ನು ಕಂಡುಹಿಡಿವುದು ನಮ್ಮ ಗುರಿಯಾಗಿದೆ’ ಎಂದರು.
‘ಮಣ್ಣಿನ ಆರೋಗ್ಯ ಕಾರ್ಡ್, ರೈತರಿಗೆ ಸಕಾಲದಲ್ಲಿ ಸಾಲ ಸಿಗುವಂತೆ ಮಾಡಿದ್ದೇವೆ. ಗುಣಮಟ್ಟದ ಬೀಜಗಳು , ಬೇವು ಲೇಪಿತ ಯೂರಿಯಾ ನೀಡಿದ್ದೇವೆ. ಇ-ನಾಮ್ ಮೂಲಕ ಮಧ್ಯವರ್ತಿಗಳ ಹಾವಳಿಯನ್ನೂ ತಡೆಗಟ್ಟಿದ್ದೇವೆ’ ಎಂದರು.