Advertisement

ಬದುಕಿನ ಗುರಿ ಸ್ಪಷ್ಟವಾಗಿರಲಿ

01:20 PM Dec 03, 2018 | |

ಪ್ರತಿಯೊಬ್ಬರಿಗೂ ಅವರ ಬದುಕನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಇದ್ದೇ ಇದೆ. ಗೊತ್ತುಗುರಿ ಇಲ್ಲದೆ ಬದುಕು ಸಾಗುತ್ತಿದ್ದರೆ ಅದಕ್ಕೆ ವಿಧಿಯನ್ನು ದೂಷಿಸಿ ಪ್ರಯೋಜನವಿಲ್ಲ. ಅದರ ಹಿಂದಿರಬಹುದಾದ ದೌರ್ಬಲ್ಯಗಳನ್ನು ಗುರುತಿಸಿ ಯಶಸ್ಸಿಗೆ ಅಗತ್ಯವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು.

Advertisement

ಪ್ರತಿಯೊಬ್ಬನೂ ಒಂದು ಶಕ್ತಿಕೇಂದ್ರವಿದ್ದಂತೆ. ಅಂತಹ ಸುಪ್ತಶಕ್ತಿ ಪ್ರಕಟವಾಗುವಂತಾಗಲು ಕ್ರಿಯಾಶೀಲರಾಗಬೇಕು. ನಾವು ಏನಾಗಬಯಸುತ್ತೇವೆ, ಗುರಿಗಳೇನು ಎನ್ನುವುದನ್ನು ನಮ್ಮ ಕನಸುಗಳು ತಿಳಿಸುತ್ತವೆ. ಅದಕ್ಕಾಗಿಯೇ ಮಾಜಿ ರಾಷ್ಟ್ರಪತಿ ಡಾ| ಅಬ್ದುಲ್‌ ಕಲಾಂ ಅವರು ‘ಕನಸು ಕಾಣಿರಿ ಮಕ್ಕಳೇ’ ಎಂದಿದ್ದರು. ಗೊತ್ತುಗುರಿಗಳಿಲ್ಲದ ಬದುಕು ಹರಿಗೋಲಿಲ್ಲದ ದೋಣಿಯಂತೆ. ಕನಸು ಕಾಣದಿದ್ದರೆ ಬದುಕಿಗೊಂದು ನಿರ್ದಿಷ್ಟ ಗುರಿ ಇಲ್ಲ. ಗುರಿ ಇಲ್ಲದೆ ಸಾಗುವ ಬದುಕಿಗೆ ಅರ್ಥವಿಲ್ಲ. ಆದ್ದರಿಂದ ನಮ್ಮ ಸಾಮರ್ಥ್ಯ ಅರಿತು ನಾವೇ ಗುರಿ ನಿಗದಿಪಡಿಸಬೇಕು.

ಶಿಸ್ತು, ಸಹನೆ ಅಗತ್ಯ
ಜೀವನದಲ್ಲಿ ಪ್ರತಿಯೋರ್ವರೂ ಶಿಸ್ತು, ಸಹನೆ ಮತ್ತು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಂಡಾಗ ಮಾತ್ರ ಗುರಿ ಸಾಧಿಸಲು ಸಾಧ್ಯ. ಗುರಿ ತಲುಪಲು ಏಕಾಗ್ರತೆ ಬಹಳ ಮುಖ್ಯ. ಸಿನೆಮಾವನ್ನು ಹೇಗೆ ತದೇಕಚಿತ್ತದಿಂದ ವೀಕ್ಷಿಸುತ್ತೇವೆಯೋ ಅದೇ ರೀತಿ ಮಾಡುವ ಎಲ್ಲ ಕೆಲಸಗಳಲ್ಲೂ ಶ್ರದ್ಧೆ, ಏಕಾಗ್ರತೆ ಇರಬೇಕು. ದೈಹಿಕ, ಮಾನಸಿಕ, ಆರ್ಥಿಕ ಮತ್ತು ಆಧ್ಯಾತ್ಮಿಕ ಸ್ವಾವಲಂಬನೆ ಪಡೆಯುವುದೇ ಪರಿಪೂರ್ಣ ವ್ಯಕ್ತಿತ್ವದ ಗುರಿ. ಆ ನಿಟ್ಟಿನಲ್ಲಿ ನಮ್ಮ ಸಾಧನೆ ಇರಬೇಕು. ಗುರಿ ನಿರ್ಧಾರವಾದ ಮೇಲೆ ಅದನ್ನು ಹೇಗೆ ಸಾಧಿಸಬೇಕೆಂಬುದನ್ನು ಪ್ರಾಯೋಗಿಕ ನೆಲೆಯಲ್ಲಿ ನಿರ್ಧರಿಸಿ, ಛಲದಿಂದ ಮುಂದುವರಿಯಬೇಕು. ಯಾವುದೇ ಗುರಿಯನ್ನು ಇದ್ದಕ್ಕಿದ್ದಂತೆ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಹಲವಾರು ವರ್ಷಗಳ ನಿರಂತರ ಪರಿಶ್ರಮ ಅಗತ್ಯ. ಸಾಧನೆಯ ಹಾದಿಯ ರೂಪರೇಖೆ ಸಿದ್ಧಪಡಿಸಿಕೊಳ್ಳಬೇಕು.

ಕಲ್ಪನಾ ಶಕ್ತಿಗೆ ಆದ್ಯತೆ ನೀಡಿ
ಋಣಾತ್ಮಕ ಚಿಂತನೆ ಬಿಟ್ಟು ಕಲ್ಪನಾ ಶಕ್ತಿಯನ್ನು ಬಳಸಿಕೊಂಡು ಗುರಿಯನ್ನು ತಲುಪಿಯೇ ತಲುಪುತ್ತೇನೆ ಎಂದು ಪಣತೊಡಿ. ಆಗ ಸಾಧನೆ ಸುಲಭವಾಗುತ್ತದೆ. ಕಂಡ ಕನಸು ನನಸಾಗುವವರೆಗೂ ನಿರಂತರ ಪ್ರಯತ್ನ ಜಾರಿಯಲ್ಲಿದ್ದರೆ, ಯಾವುದೇ ಸನ್ನಿವೇಶವು ನಿಮ್ಮನ್ನು ಗುರಿಯಿಂದ ವಿಮುಖರಾಗಿಸಲು ಸಾಧ್ಯವಿಲ್ಲ. ದಿನವೂ ನಿಮ್ಮಷ್ಟಕ್ಕೆ ನೀವೇ ಇದು ನನ್ನಿಂದ ಸಾಧ್ಯ ಎಂದು ಹೇಳಿಕೊಳ್ಳಿ. ಇದು ನಿಮ್ಮನ್ನು ಹೆಚ್ಚು ಶಕ್ತಿವಂತರನ್ನಾಗಿಸುತ್ತದೆ. ಸಾಧನೆಗೆ ಪ್ರಯತ್ನಿಸಲು ಒಳ್ಳೆಯ ಸಮಯ ಬರಲಿ ಎಂದು ಕಾಯಬೇಡಿ. ಅಂಥ ಸಮಯ ಎಂದೂ ಬಾರದು. ಸಮಸ್ಯೆಗಳಿಗೆ ಹೆದರದೇ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಪರಿಹಾರ ಹುಡುಕಿಕೊಳ್ಳಬೇಕು. ಹಲವು ಬಾರಿ ಗೊತ್ತಿಲ್ಲದಂತೆ ಮಹತ್ವವಲ್ಲದ ವಿಷಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾ ಪ್ರಮುಖವಾದ ವಿಷಯಗಳತ್ತ ಚಿಂತಿಸದೆ ಮರೆತೇ ಬಿಡುತ್ತೇವೆ.

ವೇಳಾ ಪಟ್ಟಿ ತಯಾರಿಸಿ
ದೈನಂದಿನ ಒತ್ತಡದ ಬದುಕಿನಲ್ಲಿ ಇಂದು ಗುರಿ ಸಾಧನೆ ಎಂಬುದು ಬಹಳ ಕಷ್ಟ. ಹಾಗಾಗಿ ಪ್ರತಿದಿನದ ಚಟುವಟಿಕೆಗಳ ಜತೆಗೆ ಗುರಿ ಈಡೇರಿಸುವ ನಿಟ್ಟಿನಲ್ಲಿ ಒಂದಷ್ಟು ಸಮಯ ಮೀಸಲಿಡಬೇಕು. ಅದಕ್ಕಾಗಿ ವೇಳಾಪಟ್ಟಿ ತಯಾರಿಸಿ ದಿನದ ಪ್ರತಿಯೊಂದು ಕೆಲಸಕ್ಕೂ ಸಮಯ ನಿಗದಿಪಡಿಸಿ ಹಾಗೂ ಅದನ್ನು ತಪ್ಪದೆ ಪಾಲಿಸಿ. ಪ್ರತಿದಿನ ರಾತ್ರಿ ಸಾಧನೆಯ ಹಾದಿಯಲ್ಲಿ ಎಷ್ಟು ದೂರ ಸಾಗಿದ್ದೇವೆ ಎಂದು ಪರಿಶೀಲಿಸಿ. ಸೋಲಿನ ಬಗ್ಗೆ ಯೋಚಿಸದೆ ನಾವಿಡುವ ಹೆಜ್ಜೆಯ ಕಡೆಗೆ ಗಮನ ಹರಿಸಬೇಕು. ಸಾಧನೆಯ ಹಾದಿಯಲ್ಲಿ ಎತ್ತರದ ಬೆಟ್ಟಗಳನ್ನು ಏರಿದಂತೆ ಎದುರಿನ ಇನ್ನೊಂದು ಬೆಟ್ಟ ಗೋಚರಿಸುತ್ತದೆ. ಸೃಜನಶೀಲ ಗುಣ, ಸಾಮರ್ಥ್ಯ ಬಳಸಿಕೊಂಡು ಗುರಿ ತಲುಪಲು ಬೇಕಾದ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ. ಅಲ್ಲದೆ ದಿನನಿತ್ಯ ಸ್ವಲ್ಪ ಸ್ವಲ್ಪವೇ ಪೂರ್ತಿಗೊಳಿಸಲು ಪ್ರಯತ್ನಿಸುವುದು ಉತ್ತಮ.

Advertisement

ಅವಕಾಶ ಬಳಸಿಕೊಳ್ಳಿ
ಸೋಲಿನ ನೆರಳಿಗೆ ಹೆದರಿ ಓಡದೇ; ಸೋಲನ್ನೇ ಓಡಿಸಲು ಪ್ರಯತ್ನಿಸಿ. ಸೋಲು ನಿಮ್ಮನ್ನು ಮತ್ತಷ್ಟು ಗಟ್ಟಿಯಾಗಿಸಿ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಯಶಸ್ವಿಯಾಗಿ ಗುರಿ ಮುಟ್ಟುವ ಆತ್ಮವಿಶ್ವಾಸ ತುಂಬುತ್ತದೆ. ಹಾಗಾಗಿ ಅವಕಾಶಗಳನ್ನು ಬಳಸಿಕೊಂಡು ಮುನ್ನುಗ್ಗಬೇಕು. 

ಅರ್ಥಪೂರ್ಣ
ಹೆತ್ತವರ ಶ್ರಮ, ತ್ಯಾಗ ಹಾಗೂ ನಮ್ಮ ಸಮಯವನ್ನು ಒಂದಿಷ್ಟೂ ವ್ಯರ್ಥವಾಗಲು ಬಿಡಬಾರದು. ಬದುಕಿನ ಗುರಿ ಸ್ಪಷ್ಟವಾಗಿದ್ದರೆ ಏಕಾಗ್ರತೆ, ಶಿಸ್ತು ತನ್ನಿಂತಾನೇ ರೂಪುಗೊಳ್ಳುತ್ತದೆ. ಜ್ಞಾನದ ಸರಿಯಾದ ಬಳಕೆಯೇ ನಮ್ಮ ಶಕ್ತಿ. ವಿಜ್ಞಾನ ಸುಖ ನೀಡಿದರೆ, ಅಧ್ಯಾತ್ಮ ಸಂತೋಷ ಉಂಟು ಮಾಡುತ್ತದೆ. ಇವೆರಡರ ಸಂಗಮವಾದರೆ ಬದುಕು ಅರ್ಥಪೂರ್ಣವಾಗುತ್ತದೆ.

ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next