Advertisement
ನಾವು ಎಲ್ಲಿಗಾದರೂ ಹೋಗಬೇಕು ಎಂದು ಮೊದಲು ನಿರ್ಧರಿಸುತ್ತೇವೆ. ಆ ನಂತರ ಹೋಗುವ ದಾರಿ ಯಾವುದು ಎಂದು ನೋಡುತ್ತೇವೆ. ಯಾವ ದಾರಿಯಲ್ಲಿ ಹೋದರೆ ಸುಲಭವಾಗಿ ಹೋಗಬಹುದು, ಬೇಗ ಹೋಗಬಹುದು ಎಂಬುದನ್ನೆಲ್ಲಾ ಲೆಕ್ಕ ಹಾಕುತ್ತೆವೆ. ಅದು ಬಿಟ್ಟು, ಎಲ್ಲಿಗೆ ಹೋಗಬೇಕು ಎನ್ನುವುದೇ ಗೊತ್ತಿಲ್ಲದಿದ್ದರೆ, ನಮಗೆ ಯಾವ ದಾರಿಯಾದರೂ ಸರಿ. ಆಗ ಗುರಿ ಮುಟ್ಟುವ ಖಚಿತತೆ ಇರುವುದಿಲ್ಲ.
Related Articles
Advertisement
ಕಷ್ಟ ಬಂದಾಗ ದೇವರು ಕಾಪಾಡುತ್ತಾನೆ ಬಿಡು ಎಂದು ದುಡ್ಡಿದ್ದಾಗ ಉಳಿಸದಿದ್ದರೆ; ಯಾವ ದೇವರೂ ಕಾಪಾಡಲಾರ. ನಮ್ಮ ಸಂಪಾದನೆಯಲ್ಲಿ ಉಳಿಸಬೇಕೆಂದಿರುವ ಹಣವನ್ನು ಮೊದಲು ಕಳೆದ ನಂತರವೇ ಖರ್ಚು ಮಾಡಬೇಕು. ಮುಂದೆ ದುಡ್ಡು ಬರುತ್ತೆ; ಏನೂ ತೊಂದರೆ ಇಲ್ಲ ಬಿಡು ಎನ್ನುವುದು ಹಲವರ ನಿರಾಳತೆಯ ಮಾತು. ಮುಂದೆ ದುಡ್ಡು ಬರುತ್ತೋ ಇಲ್ಲವೋ ಅದಿನ್ನೂ ಕೈಗೆ ಸಿಗಲಿಲ್ಲ.
ಕಣ್ಣಿಗೆ ಕಾಣುವುದೂ ಇಲ್ಲ. ಹೀಗಿರುವಾಗ ಮುಂದಿನ ಬಗೆಗೆ ಯೋಚಿಸುವುದು ಏಕೆ? ಮಕ್ಕಳು ಹುಟ್ಟಿದ ತಕ್ಷಣ ಒಬ್ಬೊಬ್ಬರು ಒಂದೊಂದು ಸಲಹೆ ಕೊಡುತ್ತಾರೆ. ನಮ್ಮ ಪರಿಚಿತರೊಬ್ಬರು ಮಗು ಹುಟ್ಟಿದ ತಕ್ಷಣದ ತಿಂಗಳಿನಿಂದ ಮಗುವಿನ ಹೆಸರಿನಲ್ಲಿ500 ರೂಪಾಯಿ ಆರ್.ಡಿ. ಕಟ್ಟಲು ಆರಂಭಿಸಿದರು. ಮಗುವಿನ ಹುಟ್ಟು ಹಬ್ಬಕ್ಕೆ ಹಣ ವ್ಯಯಿಸಲಿಲ್ಲ. ಅವರು ಕಟ್ಟುತ್ತ ಬಂದ ಹಣ ಮುಂದೆ ಅವರ ಮಗುವಿನ ಉನ್ನತ ವಿದ್ಯಾಭ್ಯಾಸಕ್ಕೆ ಆಯಿತು.
ಇದನ್ನು ಗಮನಿಸಿದ ನಂತರವೂ ಒಬ್ಬರು ಕೇಳಿದರು “ಹೀಗೆಲ್ಲಾ ಯಾಕೆ ಉಳಿಸಬೇಕು? ಈ ಪ್ರಶ್ನೆ ಹೇಗಿದೆ ಎಂದರೆ ಬೆಳಗ್ಗೆಯವರೆಗೆ ರಾಮಾಯಣ ಕೇಳಿ ನಂತರ ರಾಮನಿಗೆ ಸೀತೆ ಏನಾಗಬೇಕು ಅಂದ ಹಾಗಾಯಿತು. ಆದರೂ ನಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಾಗಲೇ ನಾವು ಅದನ್ನು ಅನುಸರಿಸುತ್ತೇವೆ. ಪಾಲಿಸುತ್ತೇವೆ.
ಪ್ರತಿ ನಿತ್ಯವೂ ಏರುವ ಬೆಲೆಗಳಿಂದ ಪಾರಾಗುವುದಕ್ಕೆ, ಇವತ್ತು ಇದ್ದ ನೂರು ರೂಪಾಯಿಯ ಬೆಲೆ ಮುಂದಿನ ವರ್ಷಕ್ಕೆ ಇನ್ನಷ್ಟು ಕುಸಿಯುವುದೆಂಬ ಸತ್ಯದ ಅರಿವಿರುವ ಎಲ್ಲರೂ ಉಳಿತಾಯ ಮಾಡಲೇ ಬೇಕು. ಹಣದುಬ್ಬರದಿಂದ ನಮ್ಮ ಜೀವನದ ಗುಣಮಟ್ಟ ಕುಸಿಯದ ಹಾಗೆ ನೋಡಿಕೊಳ್ಳಬೇಕೆಂದರೆ, ಉಳಿತಾಯವೇ ಆದಾಯ ಆಗಬೇಕು.
* ಸುಧಾಶರ್ಮ ಚವತ್ತಿ