ಮಂಗಳೂರು: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯು ಏಳನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಕಯ್ಯಾರ ಕಿಂಞಣ್ಣ ರೈ ಅವರ ಹೆಸರನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಹೇಳಿದ್ದಾರೆ.
ಕರ್ನಾಟಕ ಏಕೀಕರಣ ಹಾಗೂ ಗಡಿ ವಿವಾದಗಳು ಎಂಬ ಪಠ್ಯದಲ್ಲಿ ಹಿಂದೆ ಕಯ್ಯಾರ ಕಿಂಞಣ್ಣ ರೈಗಳು ಕರ್ನಾಟಕ ಏಕೀಕರಣಕ್ಕಾಗಿ ತನ್ನ ಕೊನೆ ಉಸಿರಿನ ತನಕ ಹೋರಾಟ ಮಾಡಿದ್ದರು ಎಂದಿತ್ತು. ಈಗ ಆ ವಾಕ್ಯವನ್ನು ತೆಗೆದು, ಮಂಜೇಶ್ವರ ಗೋವಿಂದ ಪೈಗಳ ಹೆಸರನ್ನು ಸೇರಿಸಲಾಗಿದೆ. ಆದರೆ ಗೋವಿಂದ ಪೈಗಳು 1963 ರಲ್ಲಿ ವೃದ್ಧಾಪ್ಯದಿಂದಾಗಿ ನಿಧನ ಹೊಂದಿದ್ದು, ಅವರಿಗೆ ಏಕೀಕರಣ ವಿಷಯದಲ್ಲಿ ಪರಿಣಾಮಕಾರಿ ಹೋರಾಟ ಮಾಡಲು ಅವಕಾಶ ಸಿಗಲಿಲ್ಲ. 1952ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿದ್ದು, ಆ ಬಳಿಕ ಅವರು ಬದುಕಿದ್ದು ಕೇವಲ 7 ವರ್ಷ ಮಾತ್ರ. ಆಗ ಅವರು ಅಸ್ವಸ್ಥತೆಯಿಂದಿದ್ದು, ತನ್ನ ಜತೆಗೆ ಶಿಷ್ಯ ಕಯ್ಯಾರ ಕಿಂಞಣ್ಣ ರೈಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಅದೇ ಕಯ್ಯಾರ ಕಿಂಞಣ್ಣ ರೈ ಅವರು 2018 ರಲ್ಲಿ ನಿಧನ ಹೊಂದುವವರೆಗೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಬಲವಾಗಿ ಹೇಳುತ್ತಾ ಹೋರಾಟ ಮಾಡಿದ್ದರು. ಅಂಥವರ ಹೆಸರನ್ನು ಪಠ್ಯದಿಂದ ಕೈಬಿಟ್ಟಿರುವುದು ಯಾವುದೇ ಕಾರಣಕ್ಕೂ ಸರಿಯಲ್ಲ.
ಗೋವಿಂದ ಪೈ ಅವರ ಹೆಸರನ್ನು ಸೇರಿಸಿರುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ ಕವಿ ಕಯ್ಯಾರ ಹೆಸರನ್ನು ತೆಗೆದು ಬಂಟ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ಆದ್ದರಿಂದ ಅವರ ಹೆಸರನ್ನು ಕೂಡಲೇ ಪಠ್ಯದಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಐಕಳ ಹರೀಶ್ ಶೆಟ್ಟಿ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ಕಯ್ಯಾರ ಕಿಂಞಣ್ಣ ರೈ ಅವರು ಬಂಟರ ಹೆಮ್ಮೆಯಾಗಿದ್ದು, ಅವರು ಇಡೀ ತುಳುನಾಡಿನ ಪ್ರತೀಕವೂ ಆಗಿದ್ದಾರೆ. ಆದ್ದರಿಂದ ಅವರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಮಾಡುವ ಯಾವುದೇ ಅವಮಾನವು ಇಡೀ ಬಂಟ ಸಮುದಾಯ ಹಾಗೂ ಇಡೀ ತುಳುನಾಡಿಗೆ ಮಾಡುವ ಅನ್ಯಾಯವಾಗುತ್ತದೆ. ಆದ್ದರಿಂದ ಅವರ ಹೆಸರನ್ನು ಪಠ್ಯದಲ್ಲಿ ಸೇರಿಸಲೇ ಬೇಕು ಎಂದು ಐಕಳ ಹರೀಶ್ ಶೆಟ್ಟಿ ಆಗ್ರಹಿಸಿದ್ದಾರೆ.
ಜೂನ್ 30 ರಂದು ಬಂಟ್ಸ್ ಹಾಸ್ಟೇಲ್ ನ ಅಮೃತೋತ್ದವ ಕಟ್ಟಡದ ಸಭಾಂಗಣದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲು ಒಕ್ಕೂಟ ತೀರ್ಮಾನಿಸಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಹೆಗ್ಡೆ, ಜೊತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ತಿಳಿಸಿದ್ದಾರೆ.