ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮರಣೋತ್ತರ ಮತ್ತು ಒಳಾಂಗಗಳ ಪರೀಕ್ಷೆಯ ಮರು ಮೌಲ್ಯಮಾಪನ ಮಾಡುತ್ತಿದ್ದ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ತಂಡವು ತನ್ನ ವರದಿಯನ್ನು ಸಿಬಿಐಗೆ ಸಲ್ಲಿಸಿದೆ.
ಸೋಮವಾರ ಸಂಜೆ ಏಮ್ಸ್ ತನ್ನ ವರದಿಯನ್ನು ಸಿಬಿಐಗೆ ಹಸ್ತಾಂತರಿಸಿದೆ. ಈ ವರದಿಯಿಂದ ನಟನ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ನಿರ್ಧರಿಸಲು ಪೂರಕ ಅಂಶಗಳು ಲಭ್ಯವಾಗಲಿದೆ.
ಸುಶಾಂತ್ ಸಿಂಗ್ ರಜಪೂತ್ ಕೊಲ್ಲಲ್ಪಟ್ಟಿದ್ದಾರೆಯೇ ಅಥವಾ ಇದು ಆತ್ಮಹತ್ಯೆಯೇ ಎಂದು ನಿರ್ಧರಿಸಲು ಸಿಬಿಐ ತನಗೆ ಇದುವರೆಗೆ ಲಭ್ಯವಾಗಿರುವ ಇತರ ಸಾಕ್ಷಿ ಪುರಾವೆಗಳೊಂದಿಗೆ ಈ ವರದಿಯನ್ನು ತುಲನೆ ಮಾಡಿ ವಿಶ್ಲೇಷಣೆ ಮಾಡಲಿದೆ.
ಈ ಹಿಂದಿನ ಏಮ್ಸ್ ವರದಿಯ ಪ್ರಕಾರ ಸುಶಾಂತ್ ಸಿಂಗ್ ಅವರನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ವಕೀಲ ವಿಕಾಸ್ ಸಿಂಗ್ ಆರೋಪಿಸಿದ್ದರು. ಆದರೆ ಇದನ್ನು ಅಲ್ಲಗಳೆದಿರುವ ಏಮ್ಸ್ ವೈದ್ಯ ಸುಧೀರ್ ಗುಪ್ತಾ, ಇದು ತಪ್ಪು ಆರೋಪ ಎಂದಿದ್ದಾರೆ.
ಜೂನ್ 14ರಂದು ಸುಶಾಂತ್ ಸಿಂಗ್ ತನ್ನ ಮುಂಬೈ ನಿವಾಸದಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣವೀಗ ಹಲವು ಕಾರಣಗಳಿಂದ ಸುದ್ದಿಯಾಗಿದ್ದು, ಇದರ ಸುಳಿವಿನಿಂದಲೇ ಬಾಲಿವುಡ್ ಡ್ರಗ್ ಮಾಫಿಯಾದ ಮುಖಗಳು ಹೊರಗೆ ಬರುತ್ತಿದೆ.