ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ ನಾಳೆ (ಸೋಮವಾರ) ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಮಧ್ಯಾಹ್ನ 2:30 ರವರೆಗೆ ಆಸ್ಪತ್ರೆಯಲ್ಲಿನ ಓಪಿಡಿ ಸೇವೆಗಳನ್ನು ಮುಚ್ಚುವ ನಿರ್ಧಾರದಲ್ಲಿದ್ದ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ತನ್ನ ನಿರ್ಧಾರವನ್ನು ಹಿಂಪಡೆದಿದ್ದು ಓಪಿಡಿ ಸೇವೆಗೆಳು ನಿರಂತರವಾಗಿ ನಡೆಯಲಿದೆ ಎಂದು ಹೇಳಿದೆ.
ದೆಹಲಿ ಏಮ್ಸ್ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಸುತ್ತೋಲೆ ಹೊರಡಿಸಿದ್ದು, ಸಂಸ್ಥೆಯ ಹೊರರೋಗಿ ವಿಭಾಗವು ಜನವರಿ 22 ರಂದು ನಿಯಮಿತ ಸಮಯದ ಪ್ರಕಾರ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ. ಈ ದಿನದಂದು ಅಪಾಯಿಂಟ್‌ಮೆಂಟ್ ತೆಗೆದುಕೊಳ್ಳುವ ರೋಗಿಗಳು ಒಪಿಡಿಯಲ್ಲಿ ಸೇವೆಯನ್ನು ಪಡೆಯುತ್ತಾರೆ. ಎಲ್ಲಾ ಕ್ಲಿನಿಕಲ್ ಕೇರ್ ಸೇವೆಗಳು ಲಭ್ಯವಿರುತ್ತವೆ. ಈ ಬಗ್ಗೆ ಎಲ್ಲಾ ಇಲಾಖೆಗಳ ಎಚ್‌ಒಡಿಗಳು ಮತ್ತು ಕೇಂದ್ರಗಳ ಮುಖ್ಯಸ್ಥರು ತಮ್ಮ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭವನ್ನು ಆಚರಿಸಲು ಶನಿವಾರದಂದು ದೆಹಲಿ ಏಮ್ಸ್ ಆಸ್ಪತ್ರೆಯನ್ನು ಮಧ್ಯಾಹ್ನ 2:30 ರವರೆಗೆ ರಜೆ ಘೋಷಿಸಿತ್ತು. ಆದರೆ ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಪ್ರತಿ ದಿನದಂತೆ ಸೋಮವಾರವೂ ತುರ್ತು ಸೇವೆಗಳು ಮುಂದುವರಿಯಲಿವೆ ಎಂದು ಏಮ್ಸ್ ತನ್ನ ಆದೇಶದಲ್ಲಿ ತಿಳಿಸಿದೆ. ಇದರಿಂದ ತುರ್ತು ರೋಗಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಕೂಡ ಇದೇ ಆದೇಶದಲ್ಲಿ ಜನವರಿ 22 ರಂದು ಸಂಸ್ಥೆಯಲ್ಲಿ ಒಪಿಡಿ ನೋಂದಣಿ ಕೌಂಟರ್‌ಗಳು ಮಧ್ಯಾಹ್ನ 1:30 ರ ನಂತರ ತೆರೆಯುತ್ತದೆ ಎಂದು ಹೇಳಿದೆ. ಸದ್ಯ ಈ ಸಂಬಂಧ ಆರ್‌ಎಂಎಲ್‌ನಿಂದ ಯಾವುದೇ ಹೊಸ ಆದೇಶ ಬಂದಿಲ್ಲ.
ಇದನ್ನೂ ಓದಿ: ಮದುವೆಯಾದ 1 ವರ್ಷಕ್ಕೆ ಪತ್ನಿಯನ್ನು ಕೊಂದು ಅಪಘಾತ ಎಂದು ಬಿಂಬಿಸಿದ ಗೋವಾದ ಹೋಟೆಲ್ ಮ್ಯಾನೇಜರ್