ವಾಡಿ: ಕೋಲಾರ ಜಿಲ್ಲೆಯ ಮಾಲೂರ ಪಟ್ಟಣದ 10ನೇ ತರಗತಿ ವಿದ್ಯಾರ್ಥಿನಿ ಕೊಲೆ ಹಾಗೂ ಅತ್ಯಾಚಾರಕ್ಕೆ ಯತ್ನ ಘಟನೆ ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (ಎಐಡಿಎಸ್‌ಒ) ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಬಳಿರಾಮ ಚೌಕ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ್ದ ನೂರಾರು ವಿದ್ಯಾರ್ಥಿಗಳು, ಮಾನವ ಸರ್ಪಳಿ ನಿರ್ಮಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಅಧ್ಯಕ್ಷ ಶರಣು ಹೇರೂರ, ದೇಶದಲ್ಲಿ ಕುಸಂಸ್ಕೃತಿ ಹೆಡೆಯಾಡುತ್ತಿದ್ದು, ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ರಕ್ಷಣೆಯಿಲ್ಲವಾಗಿದೆ.
ಅಮಾಯಕ ಬಾಲಕಿಯರು ಕಾಮುಕರ ಕೆಂಗಣ್ಣಿಗೆ ಗುರಿಯಾಗಿ ಸಾವಿನ ಮನೆ ಸೇರುತ್ತಿದ್ದಾರೆ. ದೇಶದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲ ಎಂಬುದು ಸಾಬೀತಾಗಿದೆ. ಈ ಭ್ರಷ್ಟ ವ್ಯವಸ್ಥೆ ಅಪಾರಾಧ ಕೃತ್ಯಗಳ ಜಗತ್ತಾಗಿ ಮಾರ್ಪಟ್ಟಿದೆ ಎಂದು ವಾಗ್ಧಾಳಿ ನಡೆಸಿದರು.
ಎಐಡಿಎಸ್‌ಒ ಕಾರ್ಯದರ್ಶಿ ಮಲ್ಲಿನಾಥ ಹುಂಡೇಕಲ, ಮುಖಂಡರಾದ ಗೌತಮ ಪರತೂರಕರ, ಶಿವುಕುಮಾರ ಆಂದೋಲಾ, ರಾಜು ಒಡೆಯರಾಜ, ಶ್ರೀಶೈಲ ಕೆಂಚಗುಂಡಿ, ಬಸವರಾಜ ನಾಟೀಕಾರ, ಮಂಜುನಾಥ ವಗ್ಗರ ಸೇರಿದಂತೆ ವಿವಿಧ ಶಾಲೆಗಳ ನೂರಾರು ಜನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಮಾನವ ಸರ್ಪಳಿ ನಿರ್ಮಿಸಿದ್ದರಿಂದ 40 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು.