ಹುಮನಾಬಾದ: ಏಡ್ಸ್ ಕಾಯಿಲೆ ಬಂದ ನಂತರ ಚಿಕಿತ್ಸೆಗಾಗಿ ಪರದಾಡುವ ಬದಲು ಬಾರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧಿಧೀಶ ರಾಜೇಶ ಕಮತೆ ಹೇಳಿದರು.ಹುಡಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಏಡ್ಸ್ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾರಣಾಂತಿಕ ಏಡ್ಸ್ ಕಾಯಿಲೆ ತಾನಾಗಿ ಬರದೇ ನಮ್ಮ ದುರ್ವ್ಯಸನಗಳಿಂದ ನಾವಾಗಿ ಬರಿಸಿಕೊಳ್ಳುವ ಕಾಯಿಲೆ ಎಂದರು.
ಈವರೆಗೆ ಈ ಕಾಯಿಲೆಗೆ ಚಿಕಿತ್ಸೆ ಸೌಲಭ್ಯ ಇರಲಿಲ್ಲ. ಇದೀಗ ಪ್ರಾನ್ಸ್ ದೇಶದ ಜೋಸ್ ಗಾಲ್ಲೆನ್ನೊ ನೇತೃತ್ವದ ಆರೋಗ್ಯ ವಿಜ್ಞಾನಿಗಳ ತಂಡ ಕೃತಕ ಅಣುಗಳನ್ನು ವಿನ್ಯಾಸಗೊಳಿಸಿದ್ದಾರೆ. ಅಂದರೆ ಸಿಂಥೆಟಿಕ್ ಮಾಲಿಕ್ಯುಲ್ ಎಂಬ ಅಣುಗಳನ್ನು ಕಂಡು ಹಿಡಿದಿದ್ದಾರೆ. ಈ ಅಣುಗಳು ಎಚ್‌ಐವಿ ವೈರಸ್ ಪಡಿಯಚ್ಚು ತಡೆಯುತ್ತದೆ. ಇದರಿಂದ ಸೋಂಕು ಇತರೆ ಜೀವಕೋಶಗಳಿಗೆ ಹರಡುವುದನ್ನು ನಿಯಂತ್ರಿಸಬಹುದು. ಇದರಿಂದ ಕಾಯಿಲೆ ನಿಯಂತ್ರಣ ಸಾಧ್ಯ ಎಂಬುದನ್ನು ಫ್ರಾನ್ಸ್ ಆರೋಗ್ಯ ವಿಜ್ಞಾನಿಗಳೂ ದೃಢಪಡಿಸಿದ್ದಾರೆ. ಏನೆಲ್ಲ ಸೌಲಭ್ಯ ಬಂದರೂ ಸಹ ಈ ಕಾಯಿಲೆಯನ್ನು ಯಾವುದೇ ಕಾರಣಕ್ಕೂ ಕೇವಲವಾಗಿ ಭಾವಿಸದೇ ಬಾರದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಆಶೆಪ್ಪ ಬಿ.ಸಣ್ಮನಿ ಮಾತನಾಡಿ, ಎಚ್‌ವಿಐ ಸೋಂಕಿತರಿಗಾಗಿ ಬಳಸಿದ ಸಿರಿಂಜ್, ಕ್ಷೌರಕ್ಕಾಗಿ ಬಳಸುವ ಬ್ಲೇಡ್ ಮರುಬಳಕೆ ಮಾಡಿದಲ್ಲಿ ಈ ಕಾಯಿಲೆ ಅನ್ಯರಿಗೆ ಹರಡುವ ಸಾಧ್ಯತೆಗಳಿವುದನ್ನು ತಜ್ಞ ವೈದ್ಯರ ಸಮೀಕ್ಷೆ ತಿಳಿಸುತ್ತದೆ. ಇದನ್ನು ಹೊರತುಪಡಿಸಿ, ಏಡ್ಸ್ ಸೋಂಕಿತರು ಸೇವಿಸಿದ ತಟ್ಟೆಗೆ ರಕ್ತ ತಾಕಿದ್ದರಿಂದ, ಬೀದಿಬದಿ ಪಾನಿಪುರಿ ಸೇವಿಸುವುದರಿಂದಲೂ ಈ ಕಾಯಿಲೆ ಬಂದಿರುವ ನಿದರ್ಶನಗಳಿವೆ. ಯಾವುದಕ್ಕೂ ಜಾಗೃತರಾಗಿರಬೇಕು ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ| ವಿಜಯಕುಮಾರ ಸೂರ್ಯವಂಶಿ ಮಾತನಾಡಿ, ಏಡ್ಸ್ ರೋಗದ ಹುಟ್ಟು, ಹರಡಿದ್ದರ ಕುರಿತು ವಿವರಿಸಿ, ಜ್ವರ, ತಲೆನೋವು, ಕೀಲು ನೋವು, ಆಯಾಸ, ಬಾಯಿ ಮತ್ತು ಗಂಟಲಲ್ಲಿ ಹುಣ್ಣುಗಳು, ಚರ್ಮದ ತುರಿಕೆ ಇತ್ಯಾದಿ ಈ ಕಾಯಿಲೆಯ ಲಕ್ಷಣಗಳು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಶಂಭುಲಿಂಗ ಧುಮ್ಮಸೂರೆ, ಉಪಾಧ್ಯಕ್ಷ ಈಶ್ವರ ಸೋನಕೇರಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಜೋತಗೊಂಡ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯ ಅಧಿಕಾರಿ ಅಶೋಕ ಮೈಲಾರಿ ಮಾತನಾಡಿ, ಕಾಂಡೊಮ್ ಬಳಸಿ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದಲ್ಲಿ ಮಾತ್ರ ಕಾಯಿಲೆ ಬಾರದಂತೆ ತಡೆಯಲು ಸಾಧ್ಯ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕ ಗಂಗಪ್ಪ ಪಾಟೀಲ, ನ್ಯಾಯಾಲಯ ಸಿಬ್ಬಂದಿ ಉಮೇಶ ಮಠದ ಮತ್ತಿತರರು ಇದ್ದರು. ಸಿದ್ದಯ್ಯ ಸ್ವಾಗತಿಸಿ, ನಿರೂಪಿಸಿದರು. ಶ್ರೀನಿವಾಸರೆಡ್ಡಿ ವಂದಿಸಿದರು.