Advertisement

Israel-Hamas War ನಿರಾಶ್ರಿತರಿಗೆ ನೆರವು: ಜಗತ್ತು ಮಾನವೀಯತೆ ಮೆರೆಯಲಿ

12:06 AM Oct 23, 2023 | Team Udayavani |

ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಯುದ್ಧ ಹದಿನೈದು ದಿನಗಳನ್ನು ಮೀರಿ ಮುಂದುವರಿದಿದೆ. ಗಾಜಾ ಪಟ್ಟಿಯಲ್ಲಿ ಈಗ ಎಲ್ಲಿ ನೋಡಿದರೂ ನೀರು, ಆಹಾರ, ವೈದ್ಯಕೀಯ ಅಗತ್ಯಗಳಿಗಾಗಿ ಹಾಹಾಕಾರ ಎದ್ದಿದೆ. ಅದಕ್ಕಾಗಿ ಶನಿವಾರದಿಂದ ಆರಂಭಿಕ ಪ್ರಯತ್ನಗಳನ್ನು ಮಾಡಲಾಗಿದೆ. ಮೊದಲ ಹಂತದಲ್ಲಿ 20 ಟ್ರಕ್‌ಗಳಲ್ಲಿ ನೀರು, ಆಹಾರ, ವೈದ್ಯಕೀಯ ನೆರವಿನ ಸಾಮಗ್ರಿಗಳನ್ನು ರಾಫಾ ಗಡಿ ಮೂಲಕ ನೀಡುವ ಮೊದಲ ಪ್ರಯತ್ನಗಳನ್ನು ಮಾಡಲಾಗಿದೆ.

Advertisement

ಅದಕ್ಕೆ ಪೂರಕವಾಗಿ ದೇಶದಿಂದಲೂ ಗಾಜಾ ಪಟ್ಟಿಯಲ್ಲಿ ನೊಂದವರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಭಾರತ ಸರಕಾರ‌ ವಿಶೇಷ ನೆರವು ಕಳುಹಿಸಿಕೊಟ್ಟಿದೆ. ಒಟ್ಟು 6.5 ಟನ್‌ ವೈದ್ಯಕೀಯ ನೆರವು, 32 ಟನ್‌ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗಿದೆ. ಜಗತ್ತಿನಲ್ಲಿ ನೊಂದವರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಭಾರತ ಯಾವತ್ತೂ ಮುಂದಾಗುತ್ತಿರುವುದು ಸ್ತುತ್ಯರ್ಹದ ಕೆಲಸವೇ ಆಗಿದೆ. ಹಮಾಸ್‌ ಉಗ್ರರ ದಾಳಿಗೆ ತುತ್ತಾಗಿ ರುವ ಇಸ್ರೇಲ್‌ನಿಂದ ಭಾರತೀಯರನ್ನು ಕರೆದು ತರುವ “ಆಪರೇಷನ್‌ ಅಜಯ್‌’ ಕಾರ್ಯಾಚರಣೆಯಲ್ಲಿ 12 ಮಂದಿ ನೇಪಾಲ ಪ್ರಜೆಗಳನ್ನೂ ಕರೆತರ ಲಾಗಿದೆ. ಇಸ್ರೇಲ್‌ ಗಾಜಾ ಪಟ್ಟಿಯಲ್ಲಿ, ನೆರೆಯ ಲೆಬನಾನ್‌ನಲ್ಲಿ ಉಗ್ರರ ವಿರುದ್ಧ ಕೈಗೊಂಡಿರುವ ವೈಮಾನಿಕ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಕೆಲವು ರಾಷ್ಟ್ರಗಳು ನಮ್ಮ ದೇಶದ ಕ್ರಮವನ್ನು ಅನುಸರಿಸಬೇಕಾಗಿದೆ.

ಇನ್ನು ಯುದ್ಧದ ವಿಚಾರಕ್ಕೆ ಬರುವುದಿದ್ದರೆ, ಯಾವುದೇ ವಿಚಾರವನ್ನು ಬಗೆಹರಿಸುವುದಿದ್ದರೆ ಸಂಘರ್ಷ ಮತ್ತು ಕಾಳಗದ ಮೂಲಕ ಅಲ್ಲ ಎನ್ನುವುದನ್ನು ಇಸ್ರೇಲ್‌ ಹಾಗೂ ಹಮಾಸ್‌ ಉಗ್ರ ಸಂಘಟನೆ ಅರಿತುಕೊಳ್ಳಬೇಕಾಗಿದೆ. ಅ.7ರ ಬಳಿಕ ಇಸ್ರೇಲ್‌, ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆ ಪ್ರದೇಶದಲ್ಲಿ ವೈಮಾನಿಕ ದಾಳಿ, ಗುಂಡಿನ ಕಾಳಗದಲ್ಲಿ ಅಸುನೀಗಿದವರ ಸಂಖ್ಯೆ ಸರಿಸುಮಾರು 6,500ನ್ನು ದಾಟಿದೆ. ನೆಗಡಿ ಬಂದಿದೆ ಎಂದ ಮಾತ್ರಕ್ಕೆ ಆ ಸಮಸ್ಯೆಯನ್ನು ಶಾಶ್ವತವಾಗಿ ನಿವಾ ರಿಸಿ ಕೊಳ್ಳಬೇಕು ಎನ್ನುವ ರಭಸದಲ್ಲಿ ಮೂಗನ್ನೇ ಕೊಯ್ದುಕೊಳ್ಳಬಾರದು. ಗಾಜಾ ಪಟ್ಟಿ, ಪಶ್ಚಿಮ ಏಷ್ಯಾದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವ ವಿಚಾರದಲ್ಲಿ ಯಾರೂ ಕೂಡ ಅವಸರದ ತೀರ್ಮಾನ ಕೈಗೊಳ್ಳಲೇಬಾರದು. ಅ.7ರಂದು ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ನುಗ್ಗಿ ದಾಳಿ ನಡೆಸಿದ್ದರಿಂದ ಸದರಿ ಅಲ್ಲಿ, ಸರಣಿ ದಾಳಿ, ಗುಂಡು ಹಾರಾಟ, ಅಮಾಯಕರ ಸಾವಿನ ಪ್ರಕರಣಗಳು ನಡೆಯುತ್ತಿವೆ.

ಹಮಾಸ್‌ ಉಗ್ರರಿಗೆ ಇಸ್ರೇಲ್‌ ಮೇಲಿನ ದಾಳಿಗೆ ತಾಂತ್ರಿಕ ನೆರವು, ಶಸ್ತ್ರಾಸ್ತ್ರ ನೀಡಿ ಕುಮ್ಮಕ್ಕು ನೀಡಿದ್ದು ಯಾರೇ ಆಗಿರಲಿ ಖಂಡನೀಯ. ಅದರ ಪ್ರತೀಕೂಲ ಪರಿಣಾಮವನ್ನು ಉಣ್ಣುವುದು ಪಶ್ಚಿಮ ದಂಡೆ, ಗಾಜಾ ಪಟ್ಟಿ, ಇಸ್ರೇಲ್‌ನಲ್ಲಿ ಇರುವ ಸಾಮಾನ್ಯ ಜನರು. ವಿಶ್ವಸಂಸ್ಥೆ ರವಿವಾರ ನೀಡಿರುವ ಹೊಸ ಮಾಹಿತಿ ಪ್ರಕಾರ ಗಾಜಾ ಪಟ್ಟಿಯಲ್ಲಿ ಇರುವ ಹಲವು ಆಸ್ಪತ್ರೆಗಳ ಇನ್‌ಕ್ಯುಬೇಟರ್‌ಗಳಲ್ಲಿ ಇರುವ 120ಕ್ಕೂ ಅಧಿಕ ನವಜಾತ ಶಿಶುಗಳು ಜೀವನ್ಮರಣ ಸ್ಥಿತಿಯಲ್ಲಿವೆ.

ಸದ್ಯದ ಅಗತ್ಯವೇನೆಂದರೆ, ಸಂಘರ್ಷದಲ್ಲಿ ನಿರತಾಗಿರುವವರೆಲ್ಲರೂ ಕೂಡ ತಮ್ಮ ತಮ್ಮ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡು ನೊಂದವರಿಗೆ ನೀರು, ಆಹಾರ, ಔಷಧ ಪೂರೈಕೆ ಮಾಡುವತ್ತ ಮನಸ್ಸು ಮಾಡಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next