ಬೆಂಗಳೂರು: ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ರಾಜೀ ನಾಮೆ ಸಲ್ಲಿಸಿರುವುದರಿಂದ ಉಂಟಾಗಿರುವ ಗೊಂದಲ ನಿವಾರಣೆ ಹಾಗೂ ಹೊಸ ನಾಯಕರ ಆಯ್ಕೆ ಕುರಿತಂತೆ ಹಿರಿಯ ನಾಯಕರೊಂದಿಗೆ ಚರ್ಚಿಸಲು ಗುರುವಾರ ಎಐಸಿಸಿ ವೀಕ್ಷಕರ ತಂಡ ರಾಜ್ಯಕ್ಕೆ ಆಗಮಿಸಲಿದೆ. ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಮಧುಸೂದನ ಮಿಸ್ತ್ರಿ ಹಾಗೂ ಕಾರ್ಯದರ್ಶಿ ಭಕ್ತ ಚರಣದಾಸ್ ಗುರುವಾರ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕ, ಪ್ರತಿಪಕ್ಷದ ನಾಯಕ ಸೇರಿ ರಾಜ್ಯ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಉಪ ಚುನಾವಣೆ ಸೋಲಿನಿಂದ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿರುವುದರಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲ ಉಂಟಾಗಿದೆ. ಅಲ್ಲದೇ ಅವರನ್ನೇ ಹಾಲಿ ಹುದ್ದೆಗಳಲ್ಲಿ ಮುಂದುವರಿಸುವಂತೆ ಕಾಂಗ್ರೆಸ್ ಒಂದು ವರ್ಗ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದೆ. ಇನ್ನೊಂದೆಡೆ ಇಬ್ಬರೂ ನಾಯಕರ ರಾಜೀನಾಮೆ ಅಂಗೀಕರಿಸಿ ನೂತನ ನಾಯಕರನ್ನು ಆಯ್ಕೆ ಮಾಡಬೇಕೆಂಬ ಆಗ್ರಹ ಹಿರಿಯ ನಾಯಕರಿಂದ ಕೇಳಿ ಬಂದಿದೆ.
ಇನ್ನೊಂದೆಡೆ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಮುಂದುವರೆಸಿ, ಶಾಸಕಾಂಗ ಪಕ್ಷದ ನಾಯ ಕನ ಸ್ಥಾನವನ್ನು ಯಾರಾದರೂ ಹಿರಿಯ ನಾಯಕರಿಗೆ ನೀಡ ಬೇಕೆಂಬ ಬೇಡಿಕೆಯೂ ಇದೆ. ಇದರ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿರುವ ಅನೇಕ ಆಕಾಂಕ್ಷಿಗಳು, ತಮ್ಮದೇ ಆದ ರೀತಿಯಲ್ಲಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ್, ಎಂ.ಬಿ. ಪಾಟೀಲ್, ಡಿ.ಕೆ.ಶಿವಕುಮಾರ್, ಈಶ್ವರ್ ಖಂಡ್ರೆ, ಡಾ.ಜಿ. ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಹೆಸರು ಕೇಳಿ ಬರುತ್ತಿವೆ. ಇನ್ನೊಂದೆಡೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಕೂಗು ಕೇಳಿ ಬರುತ್ತಿದೆ.
ಪ್ರತಿಪಕ್ಷದ ನಾಯಕ ಹಾಗೂ ಶಾಸಕಾಂಗ ಪಕ್ಷದ ನಾಯಕನ ಹುದ್ದೆಗಳನ್ನು ಪ್ರತ್ಯೇಕಗೊಳಿಸಲು ಹೈಕಮಾಂಡ್ ತೀರ್ಮಾನಿಸಿದರೆ, ಎರಡೂ ಹುದ್ದೆಗಳ ಮೇಲೆ ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್ ಕಣ್ಣಿಟ್ಟು ಕುಳಿತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗುರುವಾರ ನಗರಕ್ಕೆ ಆಗಮಿಸುವ ವೀಕ್ಷಕರು, ಹಿರಿಯ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿ, ಎಐಸಿಸಿ ಅಧ್ಯಕ್ಷರಿಗೆ ನೀಡಲಿದ್ದು ನಂತರ ಸೋನಿಯಾ ಗಾಂಧಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಮೂಲಗಳ ಪ್ರಕಾರ ಸಂಕ್ರಾಂತಿಗೆ ಕೆಪಿಸಿಸಿ ನೂತನ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸಿದ್ದು ಆಗಮನ ಅನುಮಾನ: ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ಸಮಸ್ಯೆಯಿಂದ ವೈದ್ಯರ ಸಲಹೆ ಮೇರೆಗೆ ಅಜ್ಞಾತ ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ತೆರಳಿರುವುದರಿಂದ ಗುರುವಾರ ನಡೆಯುವ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹ ಸಭೆಗೆ ಹಾಜರಾಗುವುದು ಅನುಮಾನ ಎಂದು ಹೇಳಲಾಗಿದೆ. ಆದರೆ, ರಾಜ್ಯಕ್ಕೆ ಆಗಮಿಸುವ ವೀಕ್ಷಕರೇ ಅವರು ವಿಶ್ರಾಂತಿ ಪಡೆಯುತ್ತಿರುವ ಸ್ಥಳಕ್ಕೆ ತೆರಳಿ ಆರೋಗ್ಯ ವಿಚಾರಿಸುವುದರೊಂದಿಗೆ ಅವರ ಅಭಿಪ್ರಾಯ ಪಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.