ಕಲಬುರಗಿ : ಎಐಸಿಸಿ ಅಧ್ಯಕ್ಷರಾಗಿ ಮೊದಲ ಬಾರಿಗೆ ತವರಿಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶನಿವಾರ ಅಭೂತಪೂರ್ವ ಸ್ವಾಗತ ನೀಡಲಾಯಿತು. ನಗರೇಶ್ವರ ಶಾಲೆಯಿಂದ ಸಮಾರಂಭ ನಡೆದ ಮೈದಾನದತ್ತ ಸಾಗಿದ ಮೆರವಣಿಗೆಯಲ್ಲಿ 6 ಕಡೆಗಳಲ್ಲಿ ಕ್ರೇನ್ ಗಳಿಂದ ಹೂವಿನ ಹಾರ, ಹೂವಿನ ಮಳೆ ಮತ್ತು ಸೇಬಿನ ಹಾರ ಹಾಕಿ ತೆರದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಕಲಬುರಗಿ ಏರ್‌ಪೋರ್ಟ್‌ಗೆ ಆಗಮಿಸಿದ ಖರ್ಗೆ ಅವರಿಗೆ ಕೆಪಿಸಿಸಿ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ನಾಯಕರು ಅದ್ದೂರಿ ಸ್ವಾಗತ ನೀಡಿದರು.
ಕಲ್ಯಾಣ ಕರ್ನಾಟಕ ಕ್ರಾಂತಿ ಸಮಾವೇಶಕ್ಕೆ ಆಗಮಿಸಿದ ಡಾ. ಖರ್ಗೆ ಅವರು ವೇದಿಕೆ ಏರುವ ಮುನ್ನ ಕಾಂಗ್ರೆಸ್ ಸೇವಾ ದಳದಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ವೇದಿಕೆ ಹತ್ತಿ ಸೇರಿದ ಜನಸ್ತೋಮದತ್ತ ಕೈ ಬೀಸಿದರು.
ಎಐಸಿಸಿ ರಾಜ್ಯದ ಉಸ್ತುವಾರಿ ರಣದೀಪಸಿಂಗ್ ಸುರ್ಜಿವಾಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಣರಾದ ಈಶ್ವರ ಖಂಡ್ರೆ , ದೃವನಾರಾಯಣ, ಸಲಿ ಅಹ್ಮದ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಅಲ್ಲಮ ವೀರಭದ್ರಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಸಮಾರಂಭದಲ್ಲಿ ಮೊದಲಿಗೆ ವಂದೇ ಮಾತರಂ ಹಾಗೂ ನಾಡಗೀತೆ ಹಾಡಲಾಯಿತು. ಸಮಾರಂಭಕ್ಕೆ ಖರ್ಗೆ ಬೆಂಬಲಿಗರು ಮತ್ತು ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಹರಿದು ಬಂದಿದ್ದಾರೆ.