Advertisement

ಎಐಸಿಸಿ ಅಧ್ಯಕ್ಷ ಚುನಾವಣೆ: ಕ್ಯಾಂಪ್‌ನಲ್ಲೇ ಹಕ್ಕು ಚಲಾಯಿಸಿದ ರಾಹುಲ್

07:24 PM Oct 17, 2022 | Team Udayavani |

ಬಳ್ಳಾರಿ: ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ನಿಮಿತ್ತ ‘ಭಾರತ್ ಜೋಡೋ’ ಪಾದಯಾತ್ರೆಗೆ ಸೋಮವಾರ ಬ್ರೇಕ್ ನೀಡಿರುವ ರಾಹುಲ್ ಗಾಂಧಿಯವರು, ನಗರದ ಕೌಲ್‌ಬಜಾರ್‌ನಲ್ಲಿ ಜೀನ್ಸ್ ಕಾರ್ಮಿಕರನ್ನು ಭೇಟಿಯಾಗಿ, ಅವರ ಸಮಸ್ಯೆಗಳನ್ನು ಆಲಿಸಿದರು.

Advertisement

ತಾಲೂಕಿನ ಸಂಗನಕಲ್ಲು ಗ್ರಾಮದ ಕ್ಯಾಂಪ್‌ನಲ್ಲಿ ಭಾನುವಾರ ತಂಗಿದ್ದ ರಾಹುಲ್ ಗಾಂಧಿಯವರು, ಸೋಮವಾರ ಬೆಳಗ್ಗೆ ಎಐಸಿಸಿ ಅಧ್ಯಕ್ಷ ಸ್ಥಾನ ಚುನಾವಣೆಗೆ ಕ್ಯಾಂಪ್‌ನಲ್ಲೇ ವ್ಯವಸ್ಥೆ ಮಾಡಿದ್ದ ಮತಗಟ್ಟೆಯಲ್ಲೇ ಹಕ್ಕು ಚಲಾಯಿಸಿದರು. ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಂಸದ ಡಿ.ಕೆ.ಸುರೇಶ್ ಸೇರಿ ಒಟ್ಟು 43 ಜನರು ಅಲ್ಲೇ ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಳಿಕ ಅಲ್ಲಿಂದ ನಗರದ ಕೌಲ್‌ಬಜಾರ್ ಇರ್ಷಾದ್ ಅಲಿ ದರ್ಗಾ ಬಳಿಯ ಮನೆಯಲ್ಲೇ ಜೀನ್ಸ್ ಕೆಲಸ ಮಾಡುವ ಕಾರ್ಮಿಕರ ಮನೆಯೊಂದಕ್ಕೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದರು. ನಂತರ ವಾಪಸ್ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿದ್ದ ಮತ್ತೊಬ್ಬ ಜೀನ್ಸ್ ಕಾರ್ಮಿಕ ವಿನೋದ್ ಅವರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.

ಮನೆಯಲ್ಲಿ ಜೀನ್ಸ್ ಹೊಲಿಯುತ್ತಿದ್ದ ಮಹಿಳಾ ಕಾರ್ಮಿಕರನ್ನು ಮಾತನಾಡಿಸಿದ ರಾಹುಲ್ ಗಾಂಧಿಯವರು, ಜೀನ್ಸ್ ಉತ್ಪನ್ನಗಳು ಎಲ್ಲಿಂದ ಬರಲಿವೆ. ಒಂದು ಪ್ಯಾಂಟ್‌ಗೆ ಎಷ್ಟು ಸಿಗಲಿದೆ. ನಿಮಗೆ ಎಷ್ಟು ಉಳಿಯಲಿದೆ. ಪ್ರಸ್ತುತ ದಿನಗಳಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳೇನು? ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಿ, ಅವರ ಸಮಸ್ಯೆಗಳನ್ನು ಆಲಿಸಿ ತೆರಳಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿನೋದ್, ರಾಹುಲ್ ಗಾಂಧಿಯವರು ನಮ್ಮ ಮನೆಗೆ ಬರುವುದು ಗೊತ್ತೇ ಇಲ್ಲ. ಅವರು ಬಂದು ಹೋಗಿರುವುದನ್ನು ನಂಬೋಕೆ ಆಗುತ್ತಿಲ್ಲ. ಈಗಲೂ ನನ್ನ ಕೈ ಕಾಲುಗಳು ನಡುಗುತ್ತಿವೆ ಎಂದು ಅಚ್ಚರಿ ವ್ಯಕ್ತಪಡಿಸುವುದರ ಜತೆಗೆ ಪುಳಕಿತರಾದರು. ಜೀನ್ಸ್ ಮಹಿಳಾ ಕಾರ್ಮಿಕರನ್ನು ಉದ್ಯಮದ ಬಗ್ಗೆ ಕೇಳಿ, ಅವರ ಸಮಸ್ಯೆಗಳನ್ನು ಆಲಿಸಿದರು.

Advertisement

ಬಳಿಕ ಅಲ್ಲಿಂದ ತೆರಳಿದ ರಾಹುಲ್ ಗಾಂಧಿಯವರು, ಸಮೀಪದಲ್ಲೇ ಇರುವ ಮಾರ್ವಾಡಿ ಗಣೇಶ್ ದೇವಸ್ಥಾನ ಎದುರುಗಡೆ ಕಟ್ಟಡದ ಮಹಡಿಯಲ್ಲಿನ ಜೀನ್ಸ್ ಘಟಕಕ್ಕೂ ಭೇಟಿ ನೀಡಿ, ಅಲ್ಲಿಯೂ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ವಾಪಸ್ ತೆರಳುತ್ತಿದ್ದಾಗ ಸ್ವಲ್ಪ ಹೊತ್ತಲ್ಲೇ ರಸ್ತೆಯಲ್ಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಜಮಾಯಿಸಿದ್ದು, ರಾಹುಲ್ ಸರ್ ರಾಹುಲ್ ಸರ್ ಕೂಗಿದರು. ಈ ವೇಳೆ ಭದ್ರತಾ ಸಿಬ್ಬಂದಿಗಳು ಯಾರನ್ನೂ ಮುಂದೆ ಬಿಡದೆ ತಡೆದರಾದರೂ, ಕಾರು ಹತ್ತಲು ಹೋಗುತ್ತಿದ್ದ ರಾಹುಲ್ ಗಾಂಧಿಯವರು, ಕ್ಷಣಾರ್ಧದಲ್ಲಿ ವಾಪಸ್ ಬಂದು ಯುವಕರನ್ನು ಭೇಟಿಯಾಗಿ, ಅವರನ್ನು ಖುಷಿ ಪಡಿಸಿ ತೆರಳಿದರು. ಈ ವೇಳೆ ರಾಹುಲ್ ಗಾಂಧಿ, ಶಾಸಕ ನಾಗೇಂದ್ರ, ಪಾಲಿಕೆ ಸದಸ್ಯ ಆಸೀಫ್ ಅವರಿಗೆ ಜೈಕಾರ ಕೂಗಿದರು. ನಂತರ ಕೌಲ್‌ಬಜಾರ್‌ನಿಂದ ವಾಪಸ್ ಕ್ಯಾಂಪ್‌ಗೆ ತೆರಳಿ ವಿಶ್ರಾಂತಿ ಪಡೆದರು ಎಂದು ಬಲ್ಲ ಮೂಲಗಳು ಖಚಿತ ಪಡಿಸಿವೆ.

ಈ ವೇಳೆ ಶಾಸಕ ಬಿ.ನಾಗೇಂದ್ರ, ಸಂಸದ ಡಿ.ಕೆ.ಸುರೇಶ್, ಯುವಮುಖಂಡರಾದ ಜಗನ್ನಾಥ್, ಮುರಳಿಕೃಷ್ಣ, ಪಾಲಿಕೆ ಸದಸ್ಯ ಆಸೀಫ್ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next