Advertisement
ಜಯಲಲಿತಾ ನಿಧನದ ನಂತರ ರಾಜಕೀಯ ವಲಯದಲ್ಲಿ ಕೇಳಿಬಂದ ಮೊಟ್ಟ ಮೊದಲ ಪ್ರಶ್ನೆ ಮುಂದೆ “ಎಐಡಿಎಂಕೆ’ ಪಕ್ಷದ ಕಥೆ ಏನಾಗಬಹುದು? ತಮಿಳುನಾಡಿನ ರಾಜಕಾರಣ ಬಲ್ಲವರಲ್ಲಿ ಇಂತದ್ದೊಂದು ಪ್ರಶ್ನೆ ಮೂಡಿದ್ದು ಸಹಜ. ಸದ್ಯ ಅಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಆ ಪ್ರಶ್ನೆಗೆ ಉತ್ತರ ನೀಡುವಂತಿದೆ. ಅಲ್ಲಿನ ರಾಜಕೀಯ “ಹೈಡ್ರಾಮಾ’ ರಾಷ್ಟ್ರದ ಗಮನ ಸೆಳೆದಿರುವುದಂತೂ ಹೌದು.
Related Articles
Advertisement
ಈ ಹಂತದಲ್ಲಿ ರಾಜ್ಯಪಾಲರಿಗಾದರೂ ಉಳಿದಿರುವ ಮಾರ್ಗ ಎಂದರೆ ಒಂದು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಶಶಿಕಲಾ ಅವರಿಗೆ ಸರ್ಕಾರ ರಚಿಸಲು ಆಹ್ವಾನ ಕೊಡುವುದು. ಸದ್ಯ ಅವರು ಶಾಸಕಿಯಲ್ಲವಾದರೂ ಆರು ತಿಂಗಳಲ್ಲಿ ವಿಧಾನಸಭೆಗೆ ಆರಿಸಿಬರುವ ಅವಕಾಶವಿದೆ. ಆದರೆ, ಶಶಿಕಲಾ ಅವರು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ನಂತರದ ಬೆಳವಣಿಗೆ, ಶಾಸಕರ “ಜಂಪಿಂಗ್’ ಪ್ರಹಸನ ಹಿನ್ನೆಲೆಯಲ್ಲಿ ಅಂತಹ ತೀರ್ಮಾನ ಕೈಗೊಳ್ಳುವುದು ಕಷ್ಟ. ಏಕೆಂದರೆ ಒಂದು ದಿನ ಶಶಿಕಲಾ ಕೈ ಮೇಲು ಎಂಬಂತೆ ಕಂಡುಬಂದರೆ ಇನ್ನೊಂದು ದಿನ ಸೆಲ್ವಂ ಪರ ಬೆಂಬಲ ಹೆಚ್ಚು ಎಂಬಂತೆ ಕಾಣಿಸುತ್ತಿದೆ. ಹೀಗಾಗಿ, ಕೇಂದ್ರಕ್ಕೆ ರಾಜ್ಯದ ಪರಿಸ್ಥಿತಿ ಕುರಿತು ವರದಿ ಸಲ್ಲಿಸಿ ಕಾಯುವುದು ಅವರಿಗಿರುವ ಎರಡನೇ ಹಾಗೂ ಸುರಕ್ಷಿತ ಮಾರ್ಗ.
ಇನ್ನು ಕೇಂದ್ರ ಸರ್ಕಾರಕ್ಕಿರುವ ಮಾರ್ಗ ಎಂದರೆ ಕುದುರೆ ವ್ಯಾಪಾರದ ಲಕ್ಷಣ ಇರುವುದರಿಂದ, ಬಿಕ್ಕಟ್ಟು ಬಗೆಹರಿಯುವವರೆಗೆ ತಾತ್ಕಾಲಿಕವಾಗಿ ಕೆಲಕಾಲ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಶಿಫಾರಸು ಮಾಡುವುದು ಎಂಬುದು ಕಾನೂನು ಪಂಡಿತರ ಅಭಿಪ್ರಾಯ, ಹೀಗಾಗಿ, ರಾಜ್ಯಪಾಲರು ಕೇಂದ್ರಕ್ಕೆ ನೀಡುವ ವರದಿ ಹಾಗೂ ಕೇಂದ್ರ ಸರ್ಕಾರ ಕೈಗೊಳ್ಳುವ ತೀರ್ಮಾನದ ಮೇಲೆ ಪನ್ನೀರ್‌ಸೆಲ್ವಂ ಹಾಗೂ ಶಶಿಕಲಾ ಭವಿಷ್ಯ ನಿರ್ಧಾರವಾಗಲಿದೆ.
ಸದ್ಯಕ್ಕೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳಿಗೂ ತನಗೂ ಸಂಬಂಧವಿಲ್ಲ. ರಾಜ್ಯಪಾಲರ ವರದಿ ಬರಲಿ ಆಮೇಲೆ ನೋಡೋಣ ಎಂಬಂತೆ ಕೇಂದ್ರ ಸರ್ಕಾರ ತೋರ್ಪಡಿಸಿಕೊಳ್ಳುತ್ತಿದೆ. ಆದರೆ, ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ತಂತ್ರಗಾರಿಕೆಯೇ ಬೇರೆ ಇದೆ. ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸಲು ಸಕಾಲಕ್ಕಾಗಿ ಕಾಯುತ್ತಿರುವ ಬಿಜೆಪಿ, ತಮಿಳುನಾಡಿನಲ್ಲಿ ಒದಗಿಬಂದಿರುವ ಅವಕಾಶ ಕೈಚೆಲ್ಲುವುದೇ? ಅತ್ತ ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ತಮಿಳುನಾಡು ವಿದ್ಯಮಾನಗಳಲ್ಲಿ ಕೈ ಹಾಕಿದರೆ ಬೇರೆ ರೀತಿಯ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕೆ ಮೌನ ವಹಿಸಿದೆ ಅಷ್ಟೆ.
ಈ ನಡುವೆ, “ಕಬಾಲಿ’ ಖ್ಯಾತಿಯ ಸೂಪರ್‌ಸ್ಟಾರ್ ರಜನೀಕಾಂತ್ ಹೊಸ ಪಕ್ಷ ಸ್ಥಾಪಿಸುವ ಮಾತುಗಳು ಕೇಳಿಬರುತ್ತಿರುವುದು. ಆರ್‌ಎಸ್‌ಎಸ್ ಚಿಂತಕರ ಜತೆ ಸಮಾಲೋಚನೆ ನಡೆಸಿರುವುದು ಏನೋ ಘಟಿಸಲಿದೆ ಎಂಬುದರ ಮುನ್ಸೂಚನೆಯೇ ಎಂಬ ಚರ್ಚೆಯೂ ಆರಂಭವಾಗಿದೆ.
ಇದರ ನಡುವೆ, ಎಐಡಿಎಂಕೆಯ ಕಡು ವಿರೋಧಿ ಡಿಎಂಕೆ ಸಹ ತನ್ನದೇ ಆದ ಮಾರ್ಗದಲ್ಲಿ ರಾಜಕೀಯ ದಾಳ ಉರುಳಿಸುತ್ತಿದ್ದು, ಅರ್ಧಕ್ಕಿಂತ ಹೆಚ್ಚು ಶಾಸಕರನ್ನು ಸೆಳೆದರೆ ಸರ್ಕಾರ ರಚಿಸಲು ಬಾಹ್ಯ ಬೆಂಬಲದ ಆಶ್ವಾಸನೆಯನ್ನೂ ಪನ್ನೀರ್‌ಸೆಲ್ವಂಗೆ ನೀಡಿ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದೆ.
“ಕಲೈಂಜರ್’ ಕರುಣಾನಿಧಿ ಮನೆಯಲ್ಲೇ ಕುಳಿತು ಡಿಎಂಕೆ ಕಾರ್ಯಾಧ್ಯಕ್ಷ ಆಗಿರುವ ಪುತ್ರ ಸ್ಟಾಲಿನ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರ ಸೂಚನೆ ಮೇರೆಗೆ ಪನ್ನೀರ್‌ಸೆಲ್ವಂ ಅವರನ್ನು ಸ್ಟಾಲಿನ್ ಭೇಟಿಯಾಗಿದ್ದು. ಪನ್ನೀರ್‌ಸೆಲ್ವಂ “ಆಟ’ ನಿಜವಾಗಿಯೂ ಆರಂಭವಾಗಿದ್ದೇ ಸ್ಟಾಲಿನ್ ಭೇಟಿಯ ನಂತರ ಎಂಬುದು ಗಮನಾರ್ಹ.
ತಮಿಳುನಾಡು ವಿಧಾನಸಭೆಯಲ್ಲಿ ಎಐಡಿಎಂಕೆಗೆ ದೊಡ್ಡ ಮಟ್ಟದ ಬಹುಮತ ಏನೂ ಇಲ್ಲ. 235 ಬಲದ ವಿಧಾನಸಭೆಯಲ್ಲಿ ಎಐಡಿಎಂಕೆ 134 ಸ್ಥಾನ ಹೊಂದಿದ್ದರೆ ಡಿಎಂಕೆ 89, ಕಾಂಗ್ರೆಸ್ 8 ಸೇರಿ ಪ್ರತಿಪಕ್ಷಗಳದು 100 ಸ್ಥಾನಗಳಿವೆ. ಹೀಗಾಗಿ, ರಾಜಕೀಯದಲ್ಲಿ ಏನಾದರೂ ಆಗಬಹುದು. ಆದರೆ, ಎಲ್ಲರೂ ಲಾಭದ ದೃಷ್ಟಿಯಿಂದಲೇ ವ್ಯವಹರಿಸುವುದು.
ಪನ್ನೀರ್‌ಸೆಲ್ವಂ ಪರ ನಟ ಕಮಲಹಾಸನ್, ನಟಿ ಗೌತಮಿ, ಇನ್ನೊಬ್ಬ ನಟ ಆಲ್ ಇಂಡಿಯಾ ಸಮಥುವಾ ಮಕ್ಕಳ್ ಕಚ್ಚಿ ಅಧ್ಯಕ್ಷ ಶರತ್‌ಕುಮಾರ್ ಬೆಂಬಲಕ್ಕೆ ನಿಂತಿರುವುದು, ಜನಸಮುದಾಯದಿಂದಲೂ ಬೆಂಬಲದ ಮಹಾಪೂರ ಹರಿಯುತ್ತಿರುವುದು ಶಶಿಕಲಾ ಅವರಲ್ಲಿ ದಿಗಿಲು ಹುಟ್ಟಿಸಿರುವುದಂತೂ ಹೌದು. ಇವೆಲ್ಲ ನೋಡಿದರೆ ಶಶಿಕಲಾ ರಾಜಕೀಯ ಹೆಜ್ಜೆ ಸ್ವಲ್ಪ ಆತುರದ್ದಾಗಿತ್ತು ಎಂದು ಅನಿಸತೊಡಗಿದೆ. ಹೀಗಾಗಿಯೇ ತಮ್ಮ ಬದಲು ಬೇರೊಬ್ಬರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕುಳ್ಳಿರಿಸಿ ತಾವು ಕಿಂಗ್‌ಮೇಕರ್ ಆಗುವ ಯೋಚನೆಯನ್ನೂ ಶಶಿಕಲಾ ಮಾಡತೊಡಗಿದ್ದಾರೆ.
ಜಯಲಲಿತಾ ನಿಧನ ಸುದ್ದಿ ಅಧಿಕೃತವಾಗಿ ಪ್ರಕಟವಾದ ನಂತರ ತಮಿಳುನಾಡಿನಲ್ಲಿ ಅದರಲ್ಲೂ ಆಡಳಿತಾರೂಢ ಎಐಡಿಎಂಕೆ ಪಕ್ಷದಲ್ಲಿ ನಡೆದ ಪ್ರತಿ ವಿದ್ಯಮಾನ ಮೇಲ್ನೋಟಕ್ಕೆ ಎಲ್ಲವೂ ಸುಸೂತ್ರ, ಸುಗಮ ಎಂದು ಕಂಡರೂ ಆಗಿದ್ದೇ ಬೇರೆ. ಬೂದಿ ಮುಚ್ಚಿದ ಕೆಂಡದಂತಿದ್ದ ಎಐಡಿಎಂಕೆ ಆಂತರಿಕ ಬೇಗುದಿ ಪನ್ನೀರ್‌ಸೆಲ್ವಂ, ಜಯಲಲಿತಾ ಸಮಾಧಿ ಮುಂದೆ “ಧ್ಯಾನ’ ಮಾಡಿದ ನಂತರ ಸ್ಫೋಟಗೊಂಡಿತು.
ಪನ್ನೀರ್‌ಸೆಲ್ವಂ ಜಯಲಲಿತಾ ನಂಬಿಕಸ್ತ ಬಂಟ ಎಂಬುದು ತಮಿಳುನಾಡಿನಲ್ಲಿ ಜಗಜ್ಜಾಹೀರಾಗಿರುವ ವಿಷಯ. ಅಕ್ರಮ ಆಸ್ತಿ ಪ್ರಕರಣ ಸೇರಿದಂತೆ ಅಮ್ಮನಿಗೆ ಸಂಕಷ್ಟ ಸಮಯ ಎದುರಾದಾಗಲೆಲ್ಲಾ ಮುಖ್ಯಮಂತ್ರಿ ಗಾದಿಗೆ ತಾತ್ಕಾಲಿಕ ಆಯ್ಕೆ ಪನ್ನೀರ್‌ಸೆಲ್ವಂ. ಹೀಗಾಗಿ, ತಮಿಳುನಾಡಿನ ಜನರಲ್ಲೂ ಜಯಲಲಿತಾ ನಿಧನ ನಂತರ ಪನ್ನೀರ್‌ಸೆಲ್ವಂ ಮುಖ್ಯಮಂತ್ರಿಯಾಗಿದ್ದು ಸಮಾಧಾನ ತಂದಿತ್ತು.
ಆದರೆ, ಪಕ್ಷದ ಹಿಡಿತ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮೊದಲಿನಿಂದಲೂ ಸಮಯ ಕಾಯುತ್ತಿದ್ದ ಚಿನ್ನಮ್ಮ “ಮನ್ನಾರ್‌ಗುಡಿ’ ಶಶಿಕಲಾನಟರಾಜನ್, ಅಮ್ಮ ನಿಧನದ ಮೂವತ್ತು ದಿನಗಳೊಳಗೆ ಪಕ್ಷದ ಪ್ರಧಾನಕಾರ್ಯದರ್ಶಿ ಪಟ್ಟಕ್ಕೇರಿ, 60 ದಿನಗಳಲ್ಲಿ ಎಐಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯೂ ಆಗಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಜ್ಜಾಗಿಯೇ ಬಿಟ್ಟರು. ಅಮ್ಮನಿಗಾಗಿ ತ್ಯಾಗ ಮಾಡಿದಂತೆ ಪನ್ನೀರ್‌ಸೆಲ್ವಂ ಚಿನ್ನಮ್ಮನಿಗಾಗಿ ತ್ಯಾಗ ಮಾಡಿದ್ದಾರೆ. ಚಿನ್ನಮ್ಮ ಮಾತ್ರ ಪಕ್ಷ, ಸರ್ಕಾರ ನಡೆಸಲು ಸಮಥೆì ಎಂದು ಬಿಂಬಿಸಿಕೊಳ್ಳುವ ಯತ್ನವೂ ಆಯಿತು.
ರಾಜಕೀಯವಾಗಿ ತುಳಿತಕ್ಕೊಳಗಾದವರು ಅಧಿಕಾರ ಪಡೆಯಲು ಕಾರಣರಾದ ಪೆರಿಯಾರ್ ರಾಮಸ್ವಾಮಿ, ಅಣ್ಣಾದೊರೈ, ಕಾಮರಾಜ್‌ರಂತಹ ನಾಯಕರ ಹೋರಾಟ ಕಂಡಿದ್ದ ತಮಿಳುನಾಡಿನಲ್ಲಿ ಪನ್ನೀರ್‌ಸೆಲ್ವಂ ನಡೆಯೂ ಅಚ್ಚರಿಯನ್ನೂ ಮೂಡಿಸಿತ್ತು.ಆದರೆ, “ಅಧಿಕಾರದ ವ್ಯಾಮೋಹ’ದಲ್ಲಿ ತೋರುವ ಆತುರ ಬಹಳ ದಿನ ಸಂತಸ ಉಳಿಸುವುದಿಲ್ಲ ಎಂಬ ಮಾತು ಶಶಿಕಲಾ ವಿಚಾರದಲ್ಲಿ ನಿಜವಾಯಿತು. ತಮಿಳುನಾಡಿನಲ್ಲಿ ತಲೈವರ್ ಎಂಜಿಆರ್ ಹಾಗೂ ಪುರುಚ್ಚಿತಲೈವಿ ಜಯಲಲಿತಾ ಕಟ್ಟಿ ಬೆಳೆಸಿದ “ಎಐಡಿಎಂಕೆ’ ಕಥೆ ಏನು ಎಂದರೆ “ತೆರಿಯಾದ್ ಪೋಯ’ ಎಂಬಂತಾಗಿದೆ. ಎಸ್.ಲಕ್ಷ್ಮಿನಾರಾಯಣ