ನವದೆಹಲಿ/ಚೆನ್ನೈ:ತಮಿಳುನಾಡಿನ ಮುಖ್ಯಮಂತ್ರಿ ಗದ್ದುಗೆ ಮೇಲೆ ಕೂರಲು ಶಶಿಕಲಾ ನಟರಾಜನ್ ರಾಜಕೀಯ ಚದುರಂಗದಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಶಶಿಕಲಾ ಪದಗ್ರಹಣ ತಡೆಯುವ ನಿಟ್ಟಿನಲ್ಲಿ ಶಶಿಕಲಾ ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ತುರ್ತಾಗಿ ನಡೆಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇನ್ನೊಂದೆಡೆ ಎಐಎಡಿಎಂಕೆ ಶಾಸಕರನ್ನು ಶಶಿಕಲಾ ಅಕ್ರಮವಾಗಿ ಕೂಡಿ ಹಾಕಿದ್ದಾರೆಂದು ದಾಖಲಾದ ದೂರಿನ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಈ ಕುರಿತು ತನಿಖೆ ನಡೆಸಿ ಅಫಿಡವಿಟ್ ಸಲ್ಲಿಸುವಂತೆ ಚೆನ್ನೈ ಪೊಲೀಸರಿಗೆ ಆದೇಶ ನೀಡಿದೆ.
ಸುಪ್ರೀಂನಲ್ಲಿ ಸ್ವಲ್ವ ರಿಲೀಫ್:
ಅಕ್ರಮ ಆಸ್ತಿ ಗಳಿಕೆಯ ಆರೋಪ ಹೊತ್ತಿರುವ ಶಶಿಕಲಾ ನಟರಾಜನ್ ಅವರು ಸಿಎಂ ಆಗಿ ಅಧಿಕಾರ ಸ್ವೀಕರಿಸುವುದು ಅಸಾಂವಿಧಾನಿಕ ಕ್ರಮವಾಗಿದೆ. ಹಾಗಾಗಿ ಶಶಿಕಲಾ ನಟರಾಜನ್ ವಿರುದ್ದದ ಪ್ರಕರಣದ ವಿಚಾರಣೆ ನಡೆಸಿ ಶೀಘ್ರವೇ ತೀರ್ಪು ನೀಡಬೇಕೆಂದು ಕೋರಿ ವಕೀಲ ಜಿಎಸ್ ಮಣಿ ಅವರು ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ತುರ್ತು ವಿಚಾರಣೆಗೆ ನಿರಾಕರಿಸಿ, ನಿಗದಿಯಂತೆ ಫೆ.17ರಂದೇ ವಿಚಾರಣೆ ನಡೆಸಿ ತೀರ್ಪು ನೀಡುವುದಾಗಿ ಸ್ಪಷ್ಟಪಡಿಸಿದೆ. ಇದರಿಂದಾಗಿ ಶಶಿಕಲಾಗೆ ಸ್ವಲ್ವ ರಿಲೀಫ್ ಸಿಕ್ಕಂತಾಗಿದೆ.
ಮದ್ರಾಸ್ ಹೈಕೋರ್ಟ್ ನಲ್ಲಿ ಶಶಿಕಲಾಗೆ ಶಾಕ್!
ಎಐಎಡಿಎಂಕೆ ಶಾಸಕರನ್ನು ಶಶಿಕಲಾ ಅವರು ಬೆದರಿಸಿ ಕಾಂಚಿಪುರಂನಲ್ಲಿರುವ 2 ರೆಸಾರ್ಟ್ ಗಳಲ್ಲಿ ಕೂಡಿಹಾಕಿದ್ದಾರೆಂದು ಆರೋಪಿಸಿ ದಾಖಲಿಸಿದ ದೂರಿನ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಈ ಬಗ್ಗೆ ತನಿಖೆ ನಡೆಸಿ ಅಫಿಡವಿಟ್ ಸಲ್ಲಿಸುವಂತೆ ತಮಿಳುನಾಡು ಪೊಲೀಸರಿಗೆ ಶುಕ್ರವಾರ ಸೂಚನೆ ನೀಡಿದೆ.
ಇದೀಗ ಶಾಸಕರು ರೆಸಾರ್ಟ್ ಬದಲಾಯಿಸುತ್ತಿದ್ದು, ಕಾಂಚಿಪುರಂನಿಂದ ಮಹಾಬಲಿಪುರಂ ಸಮೀಪದ ಕೂವತ್ತೂರ್ ಬೀಚ್ ರೆಸಾರ್ಟ್ ನಲ್ಲಿ 90ಕ್ಕೂ ಅಧಿಕ ಶಾಸಕ ಆಗಮಿಸುತ್ತಿದ್ದರೆ. 30ಕ್ಕೂ ಅಧಿಕ ಶಾಸಕರು ಕಲ್ಪಾಕಂ ಸಮೀಪದ ಪೂನತ್ತಾಂಡಾಳಂ ಸಾರ್ಟ್ ನತ್ತ ತೆರಳುತ್ತಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.