ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಎಐಎಡಿಎಂಕೆಯ ಎರಡೂ ಬಣಗಳು ವಿಲೀನಗೊಳ್ಳಲಿದೆ ಎಂಬ ವಿದ್ಯಮಾನದ ನಡುವೆಯೇ ಇದೀಗ ಎರಡೂ ಬಣ ಒಂದಾಗಬೇಕಿದ್ದರೆ, ವಿಕೆ ಶಶಿಕಲಾ ಹಾಗೂ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬುದಾಗಿ ಮಾಜಿ ಸಿಂ ಪಳನಿಸ್ವಾಮಿ ಷರತ್ತನ್ನು ಮುಂದಿಟ್ಟಿದ್ದಾರೆ.
ಚೆನ್ನೈನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪನ್ನೀರ್ ಸೆಲ್ವಂ, ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷವನ್ನು ಉಳಿಸಬೇಕಿದ್ದರೆ ಮನ್ನಾರ್ ಗುಡಿ ಕುಟುಂಬವನ್ನು ದೂರ ಇಡಬೇಕು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಮಾಜಿ ಸಿಎಂ ಜೆ.ಜಯಲಲಿತಾ ಅವರ ಸಾವಿನ ತನಿಖೆ ನಡೆಸಬೇಕು. ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾಗೆ ನೀಡಿರುವ ಚಿಕಿತ್ಸೆಯ ವಿವರವನ್ನು ಬಹಿರಂಗೊಳಿಸಬೇಕು ಎಂಬ ಷರತ್ತು ಒಪಿಎಸ್ ಅವರದ್ದಾಗಿದೆ.
ಶಶಿಕಲಾ ಅಮ್ಮ(ಜಯಲಲಿತಾಗೆ) ಅವರಿಗೆ ವಿಶ್ವಾಸದ್ರೋಹ ಎಸಗಿದ್ದಾರೆ. ಅಮ್ಮ ಅವರಿಗೆ ನೀಡಲಾಗಿರುವ ಚಿಕಿತ್ಸೆ ಮತ್ತು ಔಷಧಗಳ ಮಾಹಿತಿಯನ್ನು ಬಹಿರಂಗಗೊಳಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಅಮ್ಮ ಸಾವು ಮತ್ತು ಚಿಕಿತ್ಸೆ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ ರಾತ್ರೋರಾತ್ರಿ ಎಐಎಡಿಎಂಕೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮಾಜಿ ಸಿಎಂ ಪನ್ನೀರ್ ಸೆಲ್ವಂ ಹಾಗೂ ಹಾಲಿ ಸಿಎಂ ಪಳನಿಸ್ವಾಮಿ ಪರಸ್ಪರ ಕೈಜೋಡಿಸಲಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.