ಕನಕಪುರ: ಅರಣ್ಯವಾಸಿಗಳ ಇರುವಿಕೆಯ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮರಳವಾಡಿ ಹೋಬಳಿ ಬುಡಗಯ್ಯನದೊಡ್ಡಿ ಗ್ರಾಮ ಸಮೀಪದ ಅರಣ್ಯ ಪ್ರದೇಶಕ್ಕೆ ಬಂದಿದ್ದ ಅಧಿಕಾರಿಗಳನ್ನು ತಡೆದು ಆದಿವಾಸಿ ಇರುಳಿಗ ಸಮುದಾಯ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಜಿಲ್ಲಾ ವಿಭಾಗಾಧಿಕಾರಿಗಳೆ ಸ್ಥಳಕ್ಕೆ ಬರಬೇಕುಎಂದು ಒತ್ತಾಯಿಸಿ ಗುರುವಾರದಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಪವಿಭಾಗಧಿಕಾರಿ ದ್ರಾಕ್ಷಾಯಿಣಿ ಆದಿವಾಸಿಗಳೊಂದಿಗೆ ಮಾತನಾಡಿ,ಅರಣ್ಯ ಇಲಾಖೆ ಸಿದ್ದಪಡಿಸಿರುವ ವರದಿಯನ್ನು ಕಂದಾಯ ಇಲಾಖೆಗೆ ಕಳಿಸಬೇಕಾಗಿದೆ. ನಂತರ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಿಲಾಗುವುದು ಎಂದು ಭರವಸೆ ನೀಡಿದರೂ ಪ್ರತಿಭಟನಾಕಾರರು ಧರಣಿ ಮುಂದುರೆಸಿದ್ದಾರೆ.
ತಾಲೂಕಿನ ಮರಳವಾಡಿ ಹೋಬಳಿ ಬುಡಗಯ್ಯನದೊಡ್ಡಿ ಗ್ರಾಮ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯ ಭೂಮಿಯಲ್ಲಿ ನಾವು ಹಲವು ವರ್ಷಗಳಿಂದ ಅರಣ್ಯವಾಸಿಗಳಾಗಿ ವಾಸವಿಸುತ್ತಿದ್ದೆವು. ನಮ್ಮನ್ನು ಬಲವಂತವಾಗಿ ಇಲ್ಲಿಂದ ಒಕ್ಕಲೆಬ್ಬಿಸಲಾಯಿತು. ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ನಮಗೆ ಭೂಮಿ ಕೊಡುವುದಾಗಿ 93 ಮಂದಿಯಿಂದ ಅಧಿಕಾರಿಗಳು ಅರ್ಜಿಯನ್ನು ಪಡೆದಿದ್ದರು. ಆದರೆ ಇಲ್ಲಿಯವರೆಗೂ ಭೂಮಿ ಕೊಟ್ಟಿಲ್ಲ ಎಂದು ಆದಿವಾಸಿಗಳು ಆರೋಪಿಸಿದ್ದಾರೆ.
2017 ರಲ್ಲಿ ಇಲ್ಲಿನ ಕುರುಹುಗಳನ್ನು ಆಧರಿಸಿ ಸರ್ವೇ ಮಾಡಲಾಗಿತ್ತು. ಆದರೆ ಪದೇ ಪದೇ ಪರಿಶೀಲನೆ ನೆಪ ಒಡ್ಡಿ ಜಿಲ್ಲಾಡಳಿತ ವಂಚಿಸುತ್ತಲೇ ಬಂದಿದೆ. ಈಗಲೂ ಸುಪ್ರೀಂ ಕೋರ್ಟ್ ಆದೇಶ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಯನ್ನು ನೀಡುವುದಾಗಿ ಮತ್ತೆ ಸರ್ವೇ ಕಾರ್ಯ ಮಾಡುವುದಾಗಿ ಅಧಿಕಾರಿಗಳು ಬಂದಿದ್ದರು. ಜಾಗ ಕೊಡುವುದಾಗಿ ಹೇಳುವ ಸರ್ಕಾರ ನಮ್ಮನ್ನು ಸತಾಯಿಸದೆ ಭೂಮಿ ಕೊಡಬೇಕು. ಇಲ್ಲವೆ ಭೂಮಿ ಕೊಡುವುದಿಲ್ಲವೆಂದು ಹೇಳಬೇಕು. ಸುಮ್ಮನೆ ಪ್ರತಿ ಸಾರಿಯು ಹೊಸದಾಗಿ ಪರಿಶೀಲನೆ ಮಾಡುವುದಾಗಿ ಹೇಳಿ ನಮ್ಮನ್ನು ವಂಚಿಸುತ್ತಿರುವುದು ಸರಿಯಲ್ಲ. ನಮಗೆ ಯಾವುದೆ ಪರಿಶೀಲನೆ ಬೇಕಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶ ನದಂತೆ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಅರ್ಜಿ ಸಲ್ಲಿಸಿರುವ 93 ಅರ್ಜಿದಾರರಿಗೂ ಭೂಮಿ ಕೊಡಬೇಕು ಎಂದರು.
ಈ ಬಾರಿ ನಮ್ಮ ಹೋರಾಟ ಯಶಸ್ವಿಯಾಗುವ ತನಕ ನಮ್ಮ ಈ ಹೋರಾಟ ನಿಲ್ಲಿಸುವುದಿಲ್ಲ. ಸ್ಥಳಕ್ಕೆ ಜಿಲ್ಲಾ ಉಪ ವಿಭಾಗಾಧಿಕಾರಿ ಬಂದು ನಮ್ಮ ಬೇಡಿಕೆಯನ್ನು ಈಡೇರಿಸಬೇಕು. ಅಲ್ಲಿಯವರೆಗೂ ಈ ಅಹೋರಾತ್ರಿ ಹೋರಾಟ ನಿಲ್ಲಿಸುವುದಿಲ್ಲವೆಂದು ಆದಿವಾಸಿಗಳು ಎಚ್ಚರಿಸಿದ್ದಾರೆ. ಆಹೋರಾತ್ರಿ ಧರಣಿಯಲ್ಲಿ 93 ಅರ್ಜಿದಾರರ ಕುಟುಂಬದವರು ಪಾಲ್ಗೊಂಡಿದ್ದು ಅರಣ್ಯದಲ್ಲಿಯೇ ಅಹೋರಾತ್ರಿ ಧರಣಿಯಲ್ಲಿ ನಿರತರಾಗಿದ್ದಾರೆ.