ಭುವನೇಶ್ವರ/ಮುಂಬಯಿ: ದೇಶದಲ್ಲಿ ಈರುಳ್ಳಿ ಬೆಲೆ ಸ್ಥಿರಗೊಳಿಸಲು ಅದರ ರಫ್ತು ಮೇಲೆ ಶೇ.40 ತೆರಿಗೆ ವಿಧಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖ ಈರುಳ್ಳಿ ಮಾರುಕಟ್ಟೆಯಾಗಿರುವ ಅಹ್ಮದ್‌ನಗರ ಜಿಲ್ಲೆಯ ರಾಹುರಿ ತಾಲೂಕಿನ ಮಾರುಕಟ್ಟೆಯಲ್ಲಿ ರೈತರು ಈರುಳ್ಳಿಯ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ. ಕೇಂದ್ರ ಸರಕಾರದ ನಿರ್ಧಾರ ರೈತ ವಿರೋಧಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರಸಕ್ತ ವರ್ಷ ಮಹಾರಾಷ್ಟ್ರದಲ್ಲಿ ಉತ್ತಮ ಬೆಳೆಯಾಗಿದೆ. ರಫ್ತಿನ ಮೇಲೆ ನಿಷೇಧ ಹೇರಿದ್ದರಿಂದ ನಮಗೆ ಲಾಭ ಸಿಗಲಾರದು ಎಂದಿದ್ದಾರೆ.
ಪ್ರತೀ ಕೆ.ಜಿ.ಗೆ 35 ರೂ.: ಒಡಿಶಾದ ಭುವನೇಶ್ವರದಲ್ಲಿ 12 ದಿನಗಳ ಹಿಂದೆ ಕೆಜಿಗೆ 25 ರೂ. ಇದ್ದ ಬೆಲೆ, ಪ್ರಸ್ತುತ 35 ರೂ.ಗೇರಿದೆ! ಕಟಕ್‌ನ ಛತ್ರಬಾರ್ ಮಾರುಕಟ್ಟೆಯಲ್ಲೂ ಇಂತಹದ್ದೇ ಸ್ಥಿತಿಯಿದೆ. ಹೀಗೆಯೇ ಹೋದರೆ ಬೆಲೆ 80 ಕೆಜಿಗೂ ಮುಟ್ಟಬಹುದು ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕೆಜಿಗೆ 25 ರೂ. ಇದ್ದಿದ್ದು ಕೆಲವೇ ದಿನಗಳಲ್ಲಿ 10 ರೂ. ಹೆಚ್ಚಾಗಿದೆ. ಈರುಳ್ಳಿಯ ಪೂರೈಕೆಯಲ್ಲಿ ಕೊರತೆಯಿರುವುದೇ ಈ ಸ್ಥಿತಿಗೆ ಕಾರಣ.
ರೈತರ ಆಗ್ರಹ: ರೈತರಿಗೆ ಉತ್ತಮ ಬೆಲೆ ಸಿಗುವ ಸಮಯದಲ್ಲಿಯೇ ಸರಕಾರ ನಿರ್ಬಂಧ ಹೇರಿರು ವುದರಿಂದ ನಮಗೆ ಸಿಗುವ ಆದಾಯಕ್ಕೆ ಪೆಟ್ಟಾಗಿದೆ. ಜನರಿಗೆ ಸಮಸ್ಯೆಯಾಗುತ್ತದೆ ಎಂದು ನಮಗೆ ಅನ್ಯಾಯ ಮಾಡಿರುವುದು ಸರಿಯಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ರೈತರು ಆಗ್ರಹಿಸಿದ್ದಾರೆ.