2008ರ ಜು.26ರಂದು ಅಹ್ಮದಾಬಾದ್‌ನಲ್ಲಿ 70 ನಿಮಿಷಗಳ ಕಾಲಾವಧಿಯಲ್ಲಿ 19 ಬಾಂಬ್‌ಗಳು ಒಂದರ ಮೇಲೊಂದರಂತೆ ಸ್ಫೋಟಿಸಿದ್ದವು. 56 ಮಂದಿಯ ಸಾವು ಮತ್ತು 200 ಮಂದಿಗೆ ಗಂಭೀರ ಗಾಯಗಳುಂಟಾಗಿದ್ದ ಈ ಸ್ಫೋಟ ಪ್ರಕರಣವನ್ನು ಎಂದಿಗೂ ಮರೆಯುವಂತಿಲ್ಲ. ಈ ಸ್ಫೋಟಕ್ಕೆ ಕಾರಣವಾಗಿದ್ದ 49 ಅಪರಾಧಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಇದರಲ್ಲಿ 38 ಮಂದಿಗೆ ಗಲ್ಲು ಶಿಕ್ಷೆ ಮತ್ತು 11 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಜೀವಾವಧಿ ಶಿಕ್ಷೆ ಪಡೆದವರೆಲ್ಲರೂ ತಾವು ಸಾಯುವವರೆಗೂ ಜೈಲಿನಲ್ಲೇ ಇರಬೇಕಾಗುತ್ತದೆ.
49 ಅಪರಾಧಿಗಳಲ್ಲಿ ಸಿಮಿ ಸಂಘಟನೆಯ ನಾಯಕ ಸಫಾªರ್ ನಗೋರಿ ಕೂಡ ಸೇರಿದ್ದಾನೆ. ಅಯಾಜ್ ಸಯ್ಯದ್ ಎಂಬಾತನೊಬ್ಬ ಅಪ್ರೂವರ್ ಆಗಿದ್ದರಿಂದ ಈತನಿಗೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಒಟ್ಟಾರೆ 28 ಮಂದಿಯನ್ನು ನಿರಪರಾಧಿಗಳು ಎಂದೂ ಘೋಷಿಸಿಕೋರ್ಟ್ ಫೆ.8ರಂದು ತೀರ್ಪು ನೀಡಿತ್ತು.
ಭಾರತೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಏಕಕಾಲದಲ್ಲಿ 38 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ವಿಶೇಷ. ಇದುವರೆಗೆ ಯಾವ ಕೋರ್ಟ್ ಕೂಡ ಇಷ್ಟೊಂದು ಮಂದಿಗೆ ಏಕಕಾಲದಲ್ಲಿ ಗಲ್ಲು ಶಿಕ್ಷೆ ವಿಧಿಸಿರಲಿಲ್ಲ. ಅಲ್ಲದೆ 56 ಮಂದಿಯ ಸಾವಿಗೆ ಕಾರಣವಾಗಿರುವ ಇಷ್ಟು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಉತ್ತಮ ನಿರ್ಧಾರವೂ ಹೌದು. ಆದರೆ ಈ ಎಲ್ಲ ಅಪರಾಧಿಗಳಿಗೆ ಯಾವಾಗ ಗಲ್ಲು ಶಿಕ್ಷೆ ನೀಡಲಾಗುತ್ತದೆ ಎಂಬುದು ಮಾತ್ರ ಬಗೆಹರಿಯದ ಗೊಂದಲವಾಗಿದೆ.
ಸದ್ಯ ದೇಶದಲ್ಲಿ ಗಲ್ಲುಶಿಕ್ಷೆ ತೀರ್ಪಿಗೆ ಒಳಗಾಗಿರುವ 403 ಮಂದಿ ಇದ್ದಾರೆ. ಇದಕ್ಕೆ ಈಗಿನ 38 ಸೇರಿಸಿದರೆ 441 ಮಂದಿಯಾಗುತ್ತಾರೆ. ಈ 38 ಮಂದಿಗೆ ಗಲ್ಲು ಶಿಕ್ಷೆ ವಿಧಿಸುವ ಮುನ್ನ, 403 ಮಂದಿಗೆ ಗಲ್ಲು ಶಿಕ್ಷೆ ನೀಡಬೇಕಾಗುತ್ತದೆ. 2020ರಲ್ಲಿ ನಿರ್ಭಯಾ ಪ್ರಕರಣದ 4 ಅಪರಾಧಿಗಳಿಗೆ ಏಕಕಾಲದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದ್ದೇ ಹೆಚ್ಚು. ಅಲ್ಲದೆ ಈಗಿರುವ ಸನ್ನಿವೇಶದಲ್ಲಿ ವರ್ಷಕ್ಕೆ ಒಬ್ಬರನ್ನೂ ಗಲ್ಲುಶಿಕ್ಷೆಗೆ ಗುರಿ ಮಾಡುವುದಿಲ್ಲ.
ಅಹ್ಮದಾಬಾದ್ ಸ್ಫೋಟ ಸಂಭವಿಸಿ ಆಗಲೇ 13 ವರ್ಷಗಳಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ತೀರ್ಪು ಬಂದಿದೆ. ಇದಾದ ಮೇಲೆ ಅಪರಾಧಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಾರೆ. ಇಲ್ಲಿಯೂ ತೀರ್ಪು ಬಂದ ಮೇಲೆ ಸುಪ್ರೀಂ ಕೋರ್ಟ್‌ಗೆ ಹೋಗುತ್ತಾರೆ. ಅಲ್ಲಿಯೂ ವಿಶೇಷ ಕೋರ್ಟ್ ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದರೆ, ಕಡೆಯ ಅಸ್ತ್ರವೆಂಬಂತೆ ರಾಷ್ಟ್ರಪತಿ ಬಳಿಕೆ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಈ ಎಲ್ಲ ಪ್ರಕ್ರಿಯೆಗಳು ಇಂದು-ನಾಳೆ ಮುಗಿಯುವಂಥದ್ದಲ್ಲ.
ಈಗ ಈ ಎಲ್ಲ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಿರುವುದು ಸರಿಯಾಗಿದ್ದರೂ ಹಿಂದಿನ ಅಪರಾಧಿಗಳಿಗೆ ಯಾವಾಗ ಗಲ್ಲು ಶಿಕ್ಷೆ ನೀಡಲಾಗುತ್ತದೆ ಎಂಬುದೇ ಈಗ ಕೌತುಕದ ವಿಚಾರವಾಗಿದೆ. ಜತೆಗೆ ಇಂಥ ಪ್ರಕರಣಗಳಲ್ಲಿ ಭಾಗಿಯಾಗುವ ಜನರಿಗೆ ಸರಿಯಾದ ಸಂದೇಶ ರವಾನಿಸಬೇಕಾದರೆ ಗಲ್ಲು ಶಿಕ್ಷೆ ಜಾರಿ ಮಾಡಲೇಬೇಕು. ಆದರೆ ಯಾವಾಗ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿರುವುದು ಒಂದು ರೀತಿಯಲ್ಲಿ ಹಿನ್ನಡೆಯಾದಂತೆ ಆಗುತ್ತದೆ. ಅಹ್ಮದಾಬಾದ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ನಿಜವಾದ ನ್ಯಾಯ ಸಿಗಬೇಕು ಎಂತಾದರೆ, ಅಪರಾಧಿಗಳಿಗೆ ಬೇಗನೇ ಶಿಕ್ಷೆ ಜಾರಿಯಾಗಬೇಕು. ಇಂಥ ಕೃತ್ಯ ಎಸಗಿದವರಿಗೆ ಕ್ಷಮೆ ಇಲ್ಲ ಎಂಬುದನ್ನು ನಾಗರಿಕ ಜಗತ್ತಿಗೆ ತೋರಿಸಬೇಕಾದ ಅನಿವಾರ್ಯತೆಯೂ ಸರಕಾರದ ಮುಂದೆ ಇದೆ.