ಬೆಂಗಳೂರು: ರಾಜ್ಯದಲ್ಲಿ ತುಳಿತಕ್ಕೊಳಗಾದ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಹೊಸ ಪರ್ವ ಆರಂಭಿಸಿ, ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಟ್ರಂಪ್ ಕಾರ್ಡ್ ಬಳಸಿಯೇ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅಧಿಕಾರದಲ್ಲಿ ಆ ವರ್ಗಕ್ಕೆ ಬಜೆಟ್‌ನಲ್ಲಿ ಯೋಜನೆಗಳ ಮಹಾಪೂರವೇ ಹರಿದಿವೆ. ಆದರೆ, ಘೋಷಣೆಯಾದ ಯೋಜನೆಗಳನ್ನು ತಲುಪಿಸುವಲ್ಲಿ ಸರ್ಕಾರ ವಿಫಲವಾಗಿರುವುದು ಎದ್ದು ಕಾಣುತ್ತಿದೆ.
ಅಹಿಂದ ವರ್ಗದ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ಪ್ರಮುಖ ಮೂರು ಇಲಾಖೆಗಳಾದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗಳಲ್ಲಿ 2016-17ನೇ ಸಾಲಿನಲ್ಲಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನದ ಶೇ. 45ರಷ್ಟು ಕೂಡ ಬಳಕೆಯಾಗದೇ ಇರುವುದು ಬೆಳಕಿಗೆ ಬಂದಿದೆ.
ಅದರಲ್ಲೂ ಸಮಾಜ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ “ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಉಪ ಯೋಜನೆ’ (ಎಸ್‌ಸಿಪಿ, ಟಿಎಸ್ಪಿ) ಅಡಿ ಎಲ್ಲಾ ಇಲಾಖೆಗಳಲ್ಲಿ ಮೀಸಲಿಟ್ಟಿರುವ ಹಣ ಸಮರ್ಪಕವಾಗಿ ಬಳಕೆಯಾಗದೆ. ಸರ್ಕಾರ ತನ್ನ ಕಾನೂನನ್ನು ತಾನೇ ಪಾಲಿಸದಿರುವುದು ಕಂಡುಬಂದಿದೆ.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಕುರಿತಂತೆ ಕಾಯ್ದೆ ರೂಪಿಸಿದ್ದ ಸರ್ಕಾರ, ಈ ಯೋಜನೆಯಡಿ ಕಳೆದ ಮೂರು ವರ್ಷದಲ್ಲಿ 19,465 ಕೋಟಿ ರೂ. ಮೀಸಲಿಟ್ಟಿದೆ. ಮೀಸಲಿಟ್ಟ ಅನುದಾನ ಆಯಾ ಆರ್ಥಿಕ ವರ್ಷದಲ್ಲಿ ಕಡ್ಡಾಯವಾಗಿ ಖರ್ಚು ಮಾಡಬೇಕು ಎಂದು ಹೇಳಿದ್ದ ಸರ್ಕಾರ ಹಣ ಖರ್ಚು ಮಾಡದಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲೂ ಅವಕಾಶ ಕಲ್ಪಿಸಿತ್ತು. ಆದರೆ, ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಮತ್ತು ಸಮಾಜ ಕಲ್ಯಾಣ ಸಚಿವರ ದೂರ ದೃಷ್ಟಿಯ ಕೊರತೆಯಿಂದಾಗಿ ಈ ಯೋಜನೆ ಸರ್ಕಾರದ ಹಿಡಿತಕ್ಕೆ ಸಿಗದಂತಾಗಿದೆ.
ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಅನುಷ್ಠಾನಗೊಳಿಸಿದ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿರುವ ಬಗ್ಗೆ ಸೋಷಿಯಲ್ ಆಡಿಟ್ ಕೋಶ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದ ಸರ್ಕಾರ, ವರ್ಷ ಕಳೆದರೂ ಅದನ್ನು ಜಾರಿಗೆ ತರುವ ಗೋಜಿಗೆ ಹೋಗಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ ವಿದೇಶಿ ವಿವಿಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಪ. ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಶುಚಿ ಕಿಟ್ ನೀಡುವುದು, ಪ. ಜಾತಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹೊಸ
ವಿದ್ಯಾರ್ಥಿ ನಿಲಯಗಳ ಮಂಜೂರಾತಿ, ಪಾಲಿಟೆಕ್ನಿಕ್ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದು ಮುಂತಾದ ಎಲ್ಲವೂ ಘೋಷಣೆಯಾದಷ್ಟು ಅಬ್ಬರದಲ್ಲಿ ಅನುಷ್ಠಾನಗೊಳ್ಳದೆ ಬಜೆಟ್ ಪುಸ್ತಕದಲ್ಲಿಯೇ ಅಡಗಿ ಕುಳಿತಿವೆ.
2016-17ನೇ ಸಾಲಿನ ಬಜೆಟ್‌ನಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 125ನೇ ಜನ್ಮ ದಿನಾಚರಣೆ ವರ್ಷಪೂರ್ತಿ ಹಮ್ಮಿಕೊಳ್ಳುವುದು. ಬೆಂಗಳೂರಿನಲ್ಲಿ ಡಾ.ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆ ಸ್ಥಾಪನೆ, ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ ದಿ.ಎಲ್.ಜಿ.ಹಾವನೂರ ಅವರ ಸ್ಮಾರಕ ನಿರ್ಮಾಣ, ಆದಿವಾಸಿ ಸಮುದಾಯಗಳಾದ ಕೊರಗರು, ಮಲೆಕುಡಿಯ, ಸೋಲಿಗ, ಜೇನು ಕುರುಬ, ಇರುಳಿಗ ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ಸ್ಥಾಪನೆಯ ಕುರಿತು ಘೋಷಣೆ ಮಾಡಲಾಗಿತ್ತು. ಈ ಪೈಕಿ ಅಂಬೇಡ್ಕರ್ ಜನ್ಮ ವರ್ಷಾಚರಣೆ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತಾದರೂ ಉಳಿದ ಘೋಷಣೆಗಳು ಅನುಷ್ಠಾನದ ಭಾಗ್ಯ ಪಡೆಯಲೇ ಇಲ್ಲ.