Advertisement

ಉಗ್ರರ ವಿಧ್ವಂಸಕ ಸಂಚು ವಿಫ‌ಲ

06:00 AM Aug 07, 2018 | |

ಹೊಸದಿಲ್ಲಿ: ಸ್ವಾತಂತ್ರ್ಯ ದಿನ ದಿಲ್ಲಿ ಸಹಿತ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲು ಸಜ್ಜಾಗಿದ್ದ ಉಗ್ರರ ಹೆಡೆಮುರಿ ಕಟ್ಟಿರುವ ಭದ್ರತಾ ಪಡೆಗಳು ಇಬ್ಬರನ್ನು ಬಂಧಿಸಿವೆ. ಜಮ್ಮು-ಕಾಶ್ಮೀರದಲ್ಲಿ ಅನ್ಸಾರ್‌ ಘಝಾತ್‌-ಉಲ್‌-ಹಿಂದ್‌ ಎಂಬ ಉಗ್ರ ಸಂಘಟನೆಯ ಇರ್ಫಾನ್‌ ಹುಸೇನ್‌ ವಾನಿ ಮತ್ತು ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯಬಾದ ಶಂಕಿತ ಉಗ್ರ ಹಬೀಬುರ್‌ ರೆಹಮಾನ್‌ ಅಲಿಯಾಸ್‌ ಹಬೀಬ್‌ನನ್ನು ದಿಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

Advertisement

ಅಲ್‌ ಕಾಯಿದಾ ಜತೆಗೆ ಗುರುತಿಸಿಕೊಂಡ ಅನ್ಸಾರ್‌ ಘಝಾತ್‌-ಉಲ್‌-ಹಿಂದ್‌ ಎಂಬ ಸಂಘಟನೆಯ ಇರ್ಫಾನ್‌ ಹುಸೇನ್‌ ವಾನಿ ಯನ್ನು ಬಂಧಿಸಿ ಎಂಟು ಗ್ರೆನೇಡ್‌, 60 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ಆತ ದಿಲ್ಲಿಯಲ್ಲಿ ಗ್ರೆನೇಡ್‌ಗಳನ್ನು ಹಸ್ತಾಂತರಿಸುವವನಿದ್ದ. ಬಿ.ಎ. ಪದವಿ ಓದುತ್ತಿದ್ದಾತ ಉಗ್ರ ಸಂಘಟನೆಯತ್ತ ಆಕರ್ಷಿತನಾಗಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಐಜಿಪಿ ಎಸ್‌.ಡಿ.ಎಸ್‌. ಜಮಾÌಲ್‌ ತಿಳಿಸಿದ್ದಾರೆ. ಈತ ದಿಲ್ಲಿಯಲ್ಲಿ ಆ. 15ರ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳನ್ನು ಹಾಳು ಮಾಡುವ ದುರುದ್ದೇಶ ಹೊಂದಿದ್ದ ಎನ್ನಲಾಗಿದೆ.  

ಹಣಕಾಸಿನ ನೆರವು ನೀಡುತ್ತಿದ್ದವರ ಬಂಧನ
ಮೂಲತಃ ಒಡಿಶಾದ ಕೇಂದ್ರಪಾರ ಜಿಲ್ಲೆಯ ರೆಹಮಾನ್‌ ಸದ್ಯ ರಿಯಾದ್‌ನ ನಿವಾಸಿ. ಈತ 2007ರಲ್ಲಿ ಪೊಲೀಸರ ವಶದಿಂದ ಪರಾರಿ ಯಾಗಿದ್ದ ಶೇಖ್‌ ಅಬ್ದುಲ್‌ ನಯೀಮ್‌ ಅಲಿಯಾಸ್‌ ನೋಮಿ ಎಂಬಾತನ ನಿಕಟವರ್ತಿ ಯಾಗಿದ್ದ. ಬಾಂಗ್ಲಾದೇಶ ಮೂಲಕ ಇಬ್ಬರು ಪಾಕಿ ಸ್ಥಾನೀಯರು, ಓರ್ವ ಕಾಶ್ಮೀರಿಯನ್ನು ಭಾರತದೊಳಕ್ಕೆ ನುಸುಳಿಸಲು ಕುಮ್ಮಕ್ಕು ನೀಡುತ್ತಿದ್ದ ಹಿನ್ನೆಲೆಯಲ್ಲಿ ನೋಮಿಯನ್ನು ಬಂಧಿಸಲಾಗಿತ್ತು. ನೋಮಿಗೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಹಣಕಾಸಿನ ನೆರವು, ಅಡಗುದಾಣ ಒದಗಿಸಿದ್ದ ಎಂದು ಎನ್‌ಐಎ ಆರೋಪಿಸಿದೆ. ಪಾಕಿಸ್ಥಾನದ ಲಷ್ಕರ್‌ ಉಗ್ರ ಅಜ್ಮದ್‌ ಅಲಿಯಾಸ್‌ ರೆಹಾನ್‌ನ ಸೂಚನೆಯನ್ನು ಪಾಲಿಸುತ್ತಿದ್ದ.

ಕೇರಳದಲ್ಲಿ ಇಬ್ಬರ ಬಂಧನ
ಕಳೆದ ಜನವರಿಯಲ್ಲಿ ಬಿಹಾರದ ಬೋಧ್‌ಗಯಾದಲ್ಲಿರುವ ಮಹಾ ಬೋಧಿ ದೇಗುಲದಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಇರಿಸಿದ ಆರೋಪ  ಸಂಬಂಧ ಎನ್‌ಐಎ ಕೇರಳದಲ್ಲಿ ಪಶ್ಚಿಮ ಬಂಗಾಲದ ಇಬ್ಬರನ್ನು ಬಂಧಿಸಿದೆ. ಅವರಿಬ್ಬರು ಬಾಂಗ್ಲಾದೇಶ ಮತ್ತು ಭಾರತದ ಗಡಿ ಭಾಗದ ಜಮಾತ್‌-ಉಲ್‌- ಮುಜಾಹಿದೀನ್‌ ಬಾಂಗ್ಲಾ ದೇಶ್‌ ಎಂಬ ಸಂಘಟನೆಗೆ ಸೇರಿದವರು.

ಜೈಶ್‌ ಉಗ್ರನ ಸೆರೆ
ಮತ್ತೂಂದು ಬೆಳವಣಿಗೆಯಲ್ಲಿ, ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಮುಜಮ್ಮಿಲ್‌ ಅಹ್ಮದ್‌ ದರ್‌(22)ನನ್ನು ಪೊಲೀಸರು ಬಂಧಿಸಿ ಭಾರೀ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ. ಉಗ್ರ ಕೃತ್ಯ ಎಸಗುವ ಉದ್ದೇಶ ಈತನಿಗಿ ದ್ದಿರಬಹುದು ಎಂದು ಶಂಕಿಸಲಾಗಿದೆ. ಈ ವೇಳೆ ಹ್ಯಾಂಡ್‌ ಗ್ರೆನೇಡ್‌ಗಳು, ಐಇಡಿ, ಚೈನೀಸ್‌ ಗ್ರೆನೇಡ್‌, ಡಿಟೋನೇಟರ್‌ಗಳು, ಮೊಬೈಲ್‌ ಹಾಗೂ ಇತರ ಸ್ಫೋಟಕಗಳು ಈತನ ಬಳಿಯಿದ್ದವು. ಈತ ಜೈಶ್‌ನ ಇತರ ಉಗ್ರರೊಂದಿಗೆ ಸತತ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next