ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಕಸ ವಿಲೇವಾರಿಯದ್ದೇ ದೊಡ್ಡ ಸಮಸ್ಯೆವಾಗಿದೆ. ಸ್ಥಳದ ಕೊರತೆಯಿಂದ 15 ದಿನಗಳಿಂದ ವಿಲೇವಾರಿಯಾಗದೇ ನಗರದಲ್ಲಿ ಟನ್‌ಗಟ್ಟಲೆ ರಾಶಿ ಬಿದ್ದಿದ್ದ ಕಸವನ್ನು ಪೌರಕಾರ್ಮಿಕರು ಹಗಲು-ರಾತ್ರಿ ಸ್ವಚ್ಛ ಗೊಳಿಸಲಾರಂಭಿಸಿದ್ದಾರೆ.
ನಗರಸಭೆಗೆ ಚುನಾವಣೆ ನಡೆದು ಜನಪ್ರತಿನಿಧಿಗಳ ಆಯ್ಕೆಯಾಗಬೇಕಾಗಿದೆ. ಕೌನ್ಸಿಲರ್‌ಗಳ ಅನುಪಸ್ಥಿತಿಯಲ್ಲಿ ಸ್ಥಳೀಯ ಶಾಸಕರು, ಸಂಸದರು ಈ ಸಮಸ್ಯೆಯ ಬಗ್ಗೆ ಕಾಳಜಿವಹಿಸಬೇಕಿತ್ತು. ಆದರೆ, ದುರಾದೃಷ್ಠವಶಾತ್ ಅವರು ನಿರ್ಲಪ್ತರಾಗಿದ್ದಾರೆ. ಹೀಗಾಗಿ ಎಲ್ಲಾ ಹೊಣೆ ನಗರಸಭೆಯ ಅಧಿಕಾರಿಗಳ ಹೆಗಲಿಗೇರಿದೆ. ಕೆಲವು ಖಾಸಗಿ ವ್ಯಕ್ತಿಗಳು ಒಪ್ಪಿಗೆ ಸೂಚಿಸಿದ್ದರು, ಕಸ ವಿಲೇವಾರಿ ನಡೆಯುತ್ತಿತ್ತು. ಆದರೆ, ಸದರಿ ಖಾಸಗಿ ವ್ಯಕ್ತಿಗಳು ಕೈಚೆಲ್ಲಿದ್ದರಿಂದ, ಮತ್ತೆ ಸಮಸ್ಯೆ ಉದ್ಬವಿಸಿದೆ. ಸುಮಾರು 15 ದಿನಗಳಿಂದ ಕಸ ವಿಲೇವಾರಿಯಾಗದೆ ನಗರದ ಪ್ರತಿ ರಸ್ತೆಯಲ್ಲೂ ಕಸ ಶೇಖರಣೆ ಆಗಿದೆ.
ಪೌರ ಕಾರ್ಮಿಕರಿಂದ ಕಸ ವಿಲೇವಾರಿ: ಜನಪರ ಕಾಳಜಿ ಇರುವ ವ್ಯಕ್ತಿಯೊಬ್ಬರು ಇದೀಗ ಪರ್ಯಾಯ ಸ್ಥಳವನ್ನು ಸೂಚಿಸಿರುವುದರಿಂದ ಅಲ್ಲಿ ಕಸ ವಿಲೇವಾರಿ ಆರಂಭವಾಗಿದೆ. ನಾಲ್ಕೈದು ದಿನಗಳಿಂದ ಪೌರ ಕಾರ್ಮಿಕರು ಹಗಲು-ರಾತ್ರಿಯನ್ನದೇ ನಗರದ ರಸ್ತೆಗಳಿಂದ ತ್ಯಾಜ್ಯವನ್ನು ತೆಗೆಯುತ್ತಿದ್ದಾರೆ. ಜೆಸಿಬಿ ಯಂತ್ರ, ಲಾರಿ ಮುಂತಾದ ವಾಹನಗಳಲ್ಲಿ ಕಸ ತುಂಬಿ ಕಳುಹಿಸುವ ಕೆಲಸವಾಗುತ್ತಿದೆ. ಗಬ್ಬೆದ್ದು ನಾರುತ್ತಿದ್ದ, ರೋಗ-ರುಜಿನುಗಳೀಗೆ ಆಹ್ವಾನ ನೀಡುತ್ತಿದ್ದ ಕಸವನ್ನು ತೆಗೆಯುತ್ತಿರುವ ಪೌರ ಕಾರ್ಮಿಕರ ಬಗ್ಗೆ ನಗರದ ನಾಗರಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.
ಗಣೇಶ ಚತುರ್ಥಿ ಹಬ್ಬ ಸಮೀಪಿಸುತ್ತಿದ್ದು, ಊರೆಲ್ಲ ಕಸ ತುಂಬಿಕೊಂಡಿದ್ದರೆ ಹಬ್ಬದ ಸಂಭ್ರಮ ಸಾಧ್ಯವಿಲ್ಲ ಎಂದು ಕಾಳಜಿ ವಹಿಸಿದ ನಗರಸಭೆಯ ಆಯುಕ್ತರಾದ ಶುಭಾ ಮತ್ತು ಅಧಿಕಾರಿಗಳು, ತತ್ಕಾಲಿಕವಾಗಿ ಪರ್ಯಾಯ ಸ್ಥಳ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಸಕರ ಬಗ್ಗೆ ಅಸಮಾಧಾನ: ರಾಮನಗರ ಮತ್ತು ಚನ್ನಪಟ್ಟಣ ನಗರಸಭಾ ವ್ಯಾಪ್ತಿಯ ಕಸ ವಿಲೇವಾರಿಗೆ ಕಣ್ವ ಗ್ರಾಮದ ಬಳಿ 50 ಎಕರೆ ಭೂಮಿಯನ್ನು ಜಿಲ್ಲಾಡಳಿತ ಗುರುತಿಸಿತ್ತು. ಎರಡೂ ನಗರಸಭೆಗಳು ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದಿದ್ದರಿಂದ ಗ್ರಾಮಸ್ಥರು ಹೋರಾಟ ನಡೆಸಿ, ವಿಲೇವಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಸಮಸ್ಯೆ ಉದ್ಬವಿಸಿದೆ.
ಕಸ ವಿಲೇವಾರಿಗೆ ಪರ್ಯಾಯ ಸ್ಥಳ ಗುರುತಿಸಲು ಸ್ಪಂದಿಸುತ್ತಾರೆ ಎಂದು ಕ್ಷೇತ್ರದ ಶಾಸಕರ ಬಗ್ಗೆ ನಗರದ ನಾಗರೀರು ಇಟ್ಟಿದ್ದ ವಿಶ್ವಾಸ ಕಮರಿ ಹೋಗಿದೆ. ಶಾಸಕರ ಬಗ್ಗೆ ಜನರಲ್ಲಿ ಅಸಮಾಧಾನ ಮೂಡಿದೆ.