ಮುಂಬಯಿ, ಆ. 1: ಮುಲುಂಡ್ ಬಂಟ್ಸ್ ಇದರ ವಾರ್ಷಿಕ ಶೈಕ್ಷಣಿಕ ನಿಧಿ ವಿತರಣೆ ಸಮಾರಂಭವು ಆ. 4 ರಂದು ಬೆಳಗ್ಗೆ 9.30ರಿಂದ ಮುಲುಂಡ್ ಪೂರ್ವದ, ಮಹಾತ್ಮ ಫುಲೆ ರೋಡ್, ಬಾನ್ಸೂರಿ ಹೊಟೇಲ್ನ ಗೀತಾವಾಲಾ ಬಿಲ್ಡಿಂಗ್, ಸಿಂಪೋನಿಯಾ ಪ್ರೈಡ್ ಸಭಾಗೃಹದಲ್ಲಿ ನಡೆಯಲಿದೆ.
ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ಪಲಿಮಾರು ವಸಂತ್ ಎನ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿ ಎಸ್. ಎಂ.ಶೆಟ್ಟಿ ಶಿಕ್ಷಣ ಸಂಕುಲದ ಕಾರ್ಯಾಧ್ಯಕ್ಷ ಸಿಎ ಶಂಕರ್ ಬಿ. ಶೆಟ್ಟಿ, ವಾಶಿಯ ಸುಪ್ರೀ ಹೆರಿಟೇಜ್ ಹೊಟೇಲ್ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಶಿವರಾಮ ಜಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.
ನಗರದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿರುವ ಮುಲುಂಡ್ ಬಂಟ್ಸ್ ಸ್ಥಳೀಯ ಸಮಾಜ ಬಾಂಧವರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸ್ಥಾಪನೆಗೊಂಡಿತು. ಸಂಘವು ಸ್ಥಾಪನೆಯ ದಿನದಿಂದ ಹಿಡಿದು ಇಲ್ಲಿಯವರೆಗೆ ಸಮಾಜಪರ ಕಾರ್ಯಕ್ರಮಗಳೊಂದಿಗೆ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ವೈದ್ಯಕೀಯ ಇನ್ನಿತರ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆ ಮಾಡುತ್ತಿದೆ. ಸಂಸ್ಥೆಯ ಮಾಜಿ ಅಧ್ಯಕ್ಷರು ಮತ್ತು ಟ್ರಸ್ಟಿಗಳಾದ ಎನ್. ವಿವೇಕ್ ಶೆಟ್ಟಿ, ರಮೇಶ್ ಎಸ್. ಶೆಟ್ಟಿ ಡಾ| ಸತ್ಯಪ್ರಕಾಶ್ ಶೆಟ್ಟಿ, ಸುರೇಶ್ ಬಿ. ಶೆಟ್ಟಿ, ಎಚ್. ಪ್ರಕಾಶ್ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಕಣ್ಣೀರೊರೆಸುವ ಕಾರ್ಯದಲ್ಲಿ ತೊಡಗಿ ಯಶಸ್ವಿಯಾಗಿದ್ದು, ಪ್ರಸ್ತುತ ಅಧ್ಯಕ್ಷ ವಸಂತ್ ಎನ್. ಶೆಟ್ಟಿ ಪಲಿಮಾರು ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯು ಅಭಿವೃದ್ಧಿಯ ಪಥದತ್ತ ಮುನ್ನುಗುತ್ತಿದೆ.
ಸಂಸ್ಥೆಯು ಸಮಾಜಪರ ಕಾರ್ಯಗಳೊಂದಿಗೆ ಶೈಕ್ಷಣಿ ನೆರವು ವಿತರಣೆ, ಶೈಕ್ಷಣಿಕ ದತ್ತು ಸ್ವೀಕಾರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಆರೋಗ್ಯ ಮಾಹಿತಿ ಶಿಬಿರ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸಮ್ಮಾನ, ನಾಟಕ, ಯಕ್ಷಗಾನ ಪ್ರದರ್ಶನ ಅಲ್ಲದೆ ನಾಡಿನ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ-ಬೆಳೆಸುವ ದೃಷ್ಟಿಯಿಂದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಪರಿಸರದ ಸಮಾಜ ಬಾಂಧವರು ಮನೆ-ಮನಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯು ಮಹಿಳಾ ವಿಭಾಗ, ಯುವ ವಿಭಾಗ ಇನ್ನಿತರ ಉಪಸಮಿತಿಗಳನ್ನು ಸ್ಥಾಪಿಸಿಕೊಂಡು ವಿವಿಧ ಯೋಜನೆಗಳ ಯಶಸ್ಸಿಗೆ ಶ್ರಮಿಸುತ್ತಿವೆ.
ಸಂಸ್ಥೆಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಎಂ. ಅಡ್ಯಂತಾಯ, ಮುಲುಂಡ್ ಬಂಟ್ಸ್‌ನ ಉಪಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಬಿ. ಶ್ರೀನಿವಾಸ ಶೆಟ್ಟಿ, ಗೌರವ ಕೋಶಾಧಿಕಾರಿ ರತ್ನಾಕರ ವೈ. ಶೆಟ್ಟಿ, ಜತೆ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿ ವೇಣುಗೋಪಾಲ್ ಎಂ. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಆರ್. ಚೌಟ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಶ್ರುತಿಕಾ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸಮಾರಂಭವು ಜರಗಲಿದ್ದು, ಸದಸ್ಯ ಬಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಮುಲುಂಡ್ ಬಂಟ್ಸ್‌ನ ಪ್ರಕಟನೆ ತಿಳಿಸಿದೆ.