Advertisement

Agumbe ಘಾಟಿಯಲ್ಲಿ ಅಪಘಾತ: ಯುವಕ ಮೃತ್ಯು, ಯುವತಿ ಗಂಭೀರ

12:41 AM Jun 19, 2023 | Team Udayavani |

ಹೆಬ್ರಿ/ತೀರ್ಥಹಳ್ಳಿ/ಬ್ರಹ್ಮಾವರ: ಬೈಕ್‌ ಮತ್ತು ಬಸ್‌ ಮಧ್ಯೆ ಮುಖಾಮುಖೀ ಢಿಕ್ಕಿಯಾಗಿ ಯುವಕ ಸ್ಥಳದಲ್ಲೇ ಮೃತಪಟ್ಟು ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಸಂಭವಿಸಿದೆ.

Advertisement

ಉಡುಪಿ ಜಿಲ್ಲೆ ಬಾರಕೂರು ಮೂಲದ ಶಶಾಂಕ್‌ (28) ಮೃತಪಟ್ಟ ಯುವಕ. ನಿರ್ಮಿತಾ ಎಂಬಾಕೆಗೆ ಗಂಭೀರ ಗಾಯವಾಗಿದೆ. ಶಶಾಂಕ್‌ ಮತ್ತು ನಿರ್ಮಿತಾ ಬೈಕಿನಲ್ಲಿ ತೀರ್ಥಹಳ್ಳಿ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದರು. ಖಾಸಗಿ ಬಸ್‌ ಮಂಗಳೂರಿನಿಂದ ಉಡುಪಿ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಹೆಬ್ರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿವಿಲ್‌ ಎಂಜಿನಿಯರ್‌
ಬಾರಕೂರು ಹೊಸಾಳದ ಶ್ರೀನಿವಾಸ ಮತ್ತು ಕುಸುಮಾ ದಂಪತಿಯ ಮೂವರು ಮಕ್ಕಳಲ್ಲಿ ಶಶಾಂಕ್‌ ಹಿರಿಯವರು. ಸಿವಿಲ್‌ ಎಂಜಿನಿಯರಿಂಗ್‌ ಮುಗಿಸಿ ಕಂಟ್ರಾಕ್ಟರ್‌ ಜತೆಗೆ ಕೆಲಸ ಮಾಡುತ್ತಿದ್ದರು. ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಒಂದೇ ಕುಟುಂಬದ
6 ಮಂದಿ ತೆರಳಿದ್ದರು
ಶಶಾಂಕ್‌ ಸಹಿತ ಒಂದೇ ಕುಟುಂಬದ 6 ಮಂದಿ ಮೂರು ಬೈಕ್‌ನಲ್ಲಿ ರವಿವಾರ ಬೆಳಗ್ಗೆ ಹೊರಟಿದ್ದರು. ಆಗುಂಬೆಯ ಸೂರ್ಯಾಸ್ತಮಾನ ವೀಕ್ಷಣ ಸ್ಥಳಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಘಟನೆ ನಡೆದಿದೆ. ಶಶಾಂಕ್‌ ಅವರ ಜತೆ ಹಿಂಬದಿ ಸವಾರರಾಗಿ ಅಕ್ಕನ ಮಗಳು ನಿರ್ಮಿತಾ ಕುಳಿತಿದ್ದರು. ಅವರು ದ್ವಿತೀಯ ಪಿಯುಸಿ ಮುಗಿಸಿ ಪದವಿ ಕಾಲೇಜಿಗೆ ಸೇರಿದ್ದರು ಎಂದು ತಿಳಿದು ಬಂದಿದೆ.

Advertisement

1 ವಾರದಲ್ಲಿ 3 ಅಪಘಾತ 4 ಸಾವು
ಹಿಂದಿನ ರವಿವಾರ ಇದೇ ಮಾರ್ಗದ ಜಕ್ಕನ್‌ಮಕ್ಕಿ ಎಂಬಲ್ಲಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದರು. ಮತ್ತೆ ಶನಿವಾರ ಇದೇ ಜಾಗದಲ್ಲಿ ಅಪಘಾತ ನಡೆದು ಒಬ್ಬರು ಮೃತಪಟ್ಟಿದ್ದರು. ಇದೀಗ ಮತ್ತೆ ಒಬ್ಬರು ಮೃತಪಟ್ಟಿದ್ದು, ಜನರಲ್ಲಿ ಆತಂಕ ಮೂಡಿದೆ. ಆಗುಂಬೆಯಿಂದ ಹೆಬ್ರಿ ತನಕವೂ ತಿರುವುಗಳು ಜಾಸ್ತಿ ಇದ್ದು ವೇಗವಾಗಿ ಬರುವ ವಾಹನದಿಂದ ಅಪಘಾತಗಳು ಸಂಭವಿಸುತ್ತದೆ. ಈ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವುದರ ಜತೆಗೆ ಅಲ್ಲಲ್ಲಿ ಅಪಘಾತದ ಸೂಚನ ಫ‌ಲಕಗಳನ್ನು ಅಳವಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಸರಿಯಾದ ತುರ್ತು ಚಿಕಿತ್ಸೆ ಸಿಗುತ್ತಿಲ್ಲ
ಆಗುಂಬೆಯಿಂದ ಹೆಬ್ರಿಯ ತನಕ ನಡುವಿನಲ್ಲಿ ನಿರಂತರವಾಗಿ ಅಪಘಾತ ಸಂಭವಿಸುತ್ತಿ¤ದೆ. ಆದರೆ ಹೆಬ್ರಿ ಪರಿಸರದಲ್ಲಿ ತುರ್ತು ಚಿಕಿತ್ಸೆಗೆ ಸರಕಾರಿಯಾಗಲಿ ಖಾಸಗಿಯಾಗಲಿ ಆಸ್ಪತ್ರೆಗಳು ಇಲ್ಲದಿರುವುದು ಸಾವು ನೋವು ಸಂಭವಿಸಲು ಕಾರಣವಾಗಿದೆ. ಈ ಬಗ್ಗೆ ಭಾಗದ ಜನಪ್ರತಿನಿಧಿಗಳು ಹಾಗೂ ಸರಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಹೆಬ್ರಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗ ಬೇಕು ಎಂದು ಸ್ಥಳೀಯರಾದ ವೆಂಕಟೇಶ್‌ ಸೋಮೇಶ್ವರ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next