Advertisement

ಮಳೆಗಾಲದಲ್ಲಿ ಸಂಚಾರ ಬಂದ್‌ ಭೀತಿ

02:56 AM Mar 28, 2019 | Sriram |

ಹೆಬ್ರಿ: ಉಡುಪಿ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿ ಆರಂಭದ ಮತ್ತು 7ನೇ ತಿರುವಿನಲ್ಲಿ ಭೂಕುಸಿತವಾಗಿ 9 ತಿಂಗಳೂ ಕಳೆದರೂ ಇನ್ನು ದುರಸ್ತಿ ಕಾಮಗಾರಿ ಆರಂಭಿಸದೆ ಗೊಂದಲದ ಗೂಡಾಗಿದೆ.

Advertisement

ಕಳೆದ ಮಳೆಗಾಲದಲ್ಲಿ ಭಾರೀ ಮಳೆಯಿಂದ ಆಗುಂಬೆ ಘಾಟಿಯಲ್ಲಿ ಭೂಕುಸಿತವಾಗಿತ್ತು. ತಾತ್ಕಾಲಿಕವಾಗಿ ಮರಳು ಚೀಲಗಳನ್ನು ಅಳವಸುವ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಈ ಮಳೆಗಾಲದಲ್ಲಿ ಮತ್ತೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ತೀರ್ಥಹಳ್ಳಿ ತಾಲೂಕಿನ ಭಾಗದಲ್ಲಿ 14ನೇ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಗೆ ಬರುವ 7ನೇ ತಿರುವಿ ನವರೆಗೆ ರಸ್ತೆ ದುರಸ್ತಿ ಹಿನ್ನೆಲೆಯಲ್ಲಿ ಮಾ. 1ರಿಂದ 31ರ ವರೆಗೆ ಒಂದು ತಿಂಗಳ ಕಾಲ ಘಾಟಿಯಲ್ಲಿ ವಾಹನ ಸಂಚಾರ ನಿಷೇಧ ಎಂಬ ಆದೇಶ ಹೊರಡಿಸಲಾಗಿತ್ತು. ಮಾ.1ರಿಂದ ದ್ವಿತೀಯ ಪಿಯು ಪರೀಕ್ಷೆ ಇದ್ದು, ಕಾಮಗಾರಿಯನ್ನು ಮಾ.19ರ ವರೆಗೆ ಮುಂದೂಡಲಾಗಿತ್ತು. ಆದರೆ ಮರಗಳ ತೆರವಿಗೆ ಅರಣ್ಯ ಇಲಾಖೆಯ ಅನುಮತಿ ಇಲ್ಲದಿರುವುದರಿಂದ ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ರೋಗಿಗಳಿಗೆ ತೊಂದರೆ
ಕರಾವಳಿ ಮತ್ತು ಮಲೆನಾಡಿನ ಸಂಪರ್ಕ ಕೊಂಡಿಯಾದ ಆಗುಂಬೆ ಘಾಟಿ ಬಂದ್‌ನಿಂದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಿಂದ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಯನ್ನು ಅವಲಂಬಿಸಿರುವ ರೋಗಿಗಳಿಗೆ ತೊಂದರೆಯಾಗಲಿದೆ. ಅಲ್ಲದೆ, ಉಡುಪಿ ಜಿಲ್ಲೆಯ ಬ್ಯಾಂಕ್‌ ಉದ್ಯೋಗಿಗಳು ಮತ್ತು ಶಿಕ್ಷಕರು ನಿತ್ಯ ಆಗುಂಬೆ ಘಾಟಿ ಮೂಲಕ ಸಂಚರಿಸುತ್ತಿದ್ದು, ಒಂದು ವೇಳೆ ಘಾಟಿ ದುರಸ್ತಿಯಾಗದೇ ಮಳೆಗಾಲದಲ್ಲಿ ಬಂದ್‌ ಆದರೆ ಸಮಸ್ಯೆಯಾಗಲಿದೆ.

ನಿರ್ಲಕ್ಷ éದಿಂದ ವಿಳಂಬ
ಘಾಟಿ ಕುಸಿದು 7 ತಿಂಗಳು ಕಳೆದರೂ ದುರಸ್ತಿ ಕಾಮಗಾರಿ ನಡೆಯದೆ ಇರುವುದನ್ನು ಗಮನಿಸಿ ಜ.20ರಂದು “ಉದಯವಾಣಿ’ ವರದಿ ಪ್ರಕಟಿಸಿತ್ತು. ಚುನಾವಣೆ ಘೋಷಣೆ ಬಳಿಕ ಕಾಮಗಾರಿ ನಡೆಸಲಾಗದು; ಅನಂತರ ಮಳೆಗಾಲ ಬರಲಿದೆ ಎಂಬ ವಿಚಾರವನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.

ಅರಣ್ಯ ಇಲಾಖೆ ಅನುಮತಿ ಪಡೆದಿಲ್ಲ
ಘಾಟಿ ದುರಸ್ತಿಯಾಗಲಿರುವ ಪ್ರದೇಶದಲ್ಲಿ ಹಲವಾರು ಬೃಹತ್‌ ಗಾತ್ರದ ಮರಗಳಿದ್ದು ರಕ್ಷಣಾ ತಡೆಗೋಡೆಗಳ ಮರು ನಿರ್ಮಾಣ ಮತ್ತು ದುರಸ್ತಿ ಆರಂಭಿಸಲು ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆಯ ಮೇಲಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೆ ಮಾ.19ರಿಂದ ಕಾಮಗಾರಿಗೆ ಮುಂದಾಗಿದ್ದರಿಂದ ಅರಣ್ಯ ಇಲಾಖೆ ಆಕ್ಷೇಪಿಸಿತ್ತು.

Advertisement

ಅರಣ್ಯ ಇಲಾಖೆಯ ಅನುಮತಿ ಇನ್ನೂ ಸಿಗದೆ ಇರುವ ಕಾರಣ ಘಾಟಿ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅನುಮತಿ ದೊರೆತ ಕೂಡಲೇ ಘಾಟಿ ಸಂಚಾರ ಬಂದ್‌ ಮಾಡಿ ಕಾಮಗಾರಿ ನಡೆಯಲಿದೆ.
– ಕೆ. ದಯಾನಂದ
ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ

ರಸ್ತೆ ವಿಸ್ತರಣೆ /ದುರಸ್ತಿಗೆ ಸಂಬಂಧಿ ಸಿದ ವರದಿಯನ್ನು ವನ್ಯಜೀವಿ ವಿಭಾಗದ ರಾಷ್ಟ್ರೀಯ ಮತ್ತು ರಾಜ್ಯ ಸಮಿತಿಗೆ ಸಲ್ಲಿಸಲಾಗಿದೆ. ಅವರು ಸಭೆ ನಡೆಸಿ ಬಳಿಕ ಸ್ಥಳ ಪರಿಶೀಲಿಸಿ ಮರಗಳ ತೆರವಿಗೆ ಅನುಮತಿ ನೀಡಬೇಕಾಗಿದೆ. ಆದರೆ ಕಾಲಮಿತಿ ಹೇಳಲಾಗದು.
ರುತ್ರೆನ್‌, ಡಿಸಿಎಫ್, ಕುದುರೆಮುಖ
ವನ್ಯಜೀವಿ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next