Advertisement

Agriculture: ಯಡಮೊಗೆ- ಕೃಷಿಯಲ್ಲಿ ಖುಷಿ ಕಂಡ ಉದ್ಯಮಿ

10:28 AM Nov 10, 2023 | Team Udayavani |

ಸಿದ್ದಾಪುರ: ಕೃಷಿ ಎಂದಾಗ ದೂರ ಸರಿಯುವ ಕಾಲಘಟ್ಟದಲ್ಲಿ ಹಡಿಲು ಭೂಮಿಯಲ್ಲಿ ಭತ್ತ ಸಹಿತ ಮಿಶ್ರ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಖುಷಿ ಕಂಡ ಯುವ ಉದ್ಯಮಿ ದೇವಿ ಪ್ರಸಾದ ಶೆಟ್ಟಿ ಸಿದ್ದಾಪುರ.

Advertisement

ಉದ್ಯಮಿಯಾಗಿರುವ ಸಿದ್ದಾಪುರ ಗ್ರಾಮದ ಬಾಳೆಬೇರು ದೇವಿಪ್ರಸಾದ ಶೆಟ್ಟಿ ಅವರು ತನ್ನ ಮನೆಯಿಂದ ಸುಮಾರು 15 ಕಿ.ಮೀ. ದೂರದ ಪಶ್ಚಿಮಘಟ್ಟದ ತಪ್ಪಲಿನ ಕುಗ್ರಾಮವಾದ ಯಡಮೊಗೆ ಗ್ರಾಮದ ವಡ್ನಾಳಿ ಎಂಬಲ್ಲಿ ಹಡಿಲು ಬಿದ್ದ ಸುಮಾರು 8 ಎಕರೆ ಭೂಮಿ ಲೀಸಿಗೆ ತೆಗೆದುಕೊಂಡು, ಉತ್ತಮ ಭತ್ತದ ಕೃಷಿ ಸಹಿತ ಮಿಶ್ರ ಬೆಳೆ ಬೆಳೆಯುವ ಮೂಲಕ ಮಾದರಿ ಕೃಷಿಕ ಎನಿಸಿದ್ದಾರೆ.

ಎಂ4 ತಳಿಯ ಸುಮಾರು 90 ಕೆ.ಜಿ. ಭತ್ತವನ್ನು ಬೀಜೋಪಚಾರ ಮಾಡಿ, 70 ಕ್ವಿಂಟಾಲ್‌ ಭತ್ತದ ಬೆಳೆ ಬೆಳೆದಿದ್ದಾರೆ. ಭತ್ತ ಬೇರ್ಪಡಿಸಿದ ಮೇಲೆ ಸುಮಾರು 6 ಲೋಡು ಒಣ ಹುಲ್ಲು ಕೂಡ ಅವರಿಗೆ ಸಿಕ್ಕಿದೆ. ಭತ್ತ ಬೆಳೆ ಬೆಳೆಯಲು ಸುಮಾರು 1.5 ಲಕ್ಷ ರೂ. ಖರ್ಚು ಮಾಡಿದ್ದಾರೆ. ಹಡಿಲು ಭೂಮಿ ಹದ ಮಾಡಲು ಯಂತ್ರದ ಜತೆಯಲ್ಲಿ ಸ್ಥಳೀಯ ಕಾರ್ಮಿಕರನ್ನು ನೇಮಿಸಿ ಸುಮಾರು 8
ಎಕರೆ ಭೂಮಿಯಲ್ಲಿ ಭತ್ತ ಕೃಷಿ ಸಹಿತ ಇತರ ಉಪ ಬೆಳೆ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಯಡಮೊಗೆಯ ಹೊಸಬಾಳು ಎಂಬಲ್ಲಿ ಖಾಲಿ ಜಾಗ ಖರೀದಿಸಿದ ಅವರು ಅಲ್ಲಿ ಎರಡು ಸಾವಿರ ಅಡಿಕೆ ಗಿಡ, 300 ತೆಂಗಿನ ಗಿಡ ಬೆಳೆಸಿದ್ದಾರೆ. ಅಡಿಕೆ ಹಾಗೂ ತೆಂಗಿನ ಗಿಡಗಳ ನಡುವೆಯಲ್ಲಿ ಫೈನಾಪುಲ್‌ ಹಾಗೂ ಇತರ ಬೆಳೆ ಬೆಳೆದಿದ್ದಾರೆ.

ಸಿದ್ದಾಪುರದ ಬಾಳೆಬೇರು ಎಂಬಲ್ಲಿ 2 ಸಾವಿರ ಅಡಿಕೆ ಗಿಡ, ಅರ್ಧ ಎಕರೆಯಲಿ ಬಾಳೆ ಮತ್ತು ಶುಂಠಿಯ ಬೆಳೆ ಬೆಳೆದಿದ್ದಾರೆ. ಕಳೆದ ವರ್ಷ ಅಡಿಕೆ ತೋಟಗಳ ನಡುವೆ ಉಪ ಬೆಳೆಯಾಗಿ ಸುಮಾರು 3 ಟನ್‌ ಶುಂಠಿ ಬೆಳೆ ಬೆಳೆದಿದ್ದಾರೆ. ಇವುಗಳ ಮಧ್ಯೆ ಉಪ ಬೆಳೆಯಾಗಿ ಮರಗೆಣಸು, ಮಾವು, ಲಿಂಬು, ತರಕಾರಿ ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

Advertisement

ಕಾಡುಪ್ರಾಣಿಗಳು, ಇತರ ಪಕ್ಷಿಗಳ ಹಾವಳಿ, ಕೂಲಿ ಕಾರ್ಮಿಕರ ಕೊರತೆ ನಡುವೆಯೂ ಉತ್ತಮ ಭತ್ತದ ಬೆಳೆ, ಇತರ ಉಪ ಬೆಳೆ ಬೆಳೆದಿದ್ದಾರೆ. ಈ ಬಾರಿ ಭತ್ತದ ನಾಟಿಯ ಸಮಯ ಮಳೆ ಕೊರತೆಯ ನಡುವೆ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಂಡು ಭತ್ತ ಬೆಳೆದಿದ್ದಾರೆ.

ಹಡಿಲು ಭೂಮಿಯಲ್ಲಿ ಉತ್ತಮ ಕೃಷಿ ಮಾಡಿ ಮಾದರಿ ಎನಿಸಿದ್ದರೂ ಇಲಾಖೆಗಳ ಸಹಾಯ ಇಲ್ಲದಿರುವುದು ಕೃಷಿ ಇಲಾಖೆಯ ನಿರ್ಲಕ್ಷ ಎದ್ದು ಕಾಣುತ್ತದೆ. ಇಂತಹ ಮಾದರಿ ಕೃಷಿಕರನ್ನು ಇಲಾಖೆಗಳು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ.

*ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next