ಇಂಡಿ: ತಾಲೂಕಿನಲ್ಲಿ ವಾಡಿಕೆಯಂತೆ ಹೆಚ್ಚು ಮಳೆಯಾಗುತ್ತಿದೆ. ಇದರಿಂದ ರೈತರ ಮೊಗದಲ್ಲಿ ಸಂತೋಷ ಮೂಡಿದ್ದು ಕೃಷಿ ಚಟುವಟಿಕೆ ಗರಿಗೆದರಿದ್ದು ಭೂಮಿ ಹದಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ವರ್ಷ ಮಾನ್ಸೂನ್ ಆರಂಭಕ್ಕೆ ಮುನ್ನಾ ಸೈಕ್ಲೋನ್ ಪರಿಣಾಮ ಇಂಡಿ ತಾಲೂಕಿನಲ್ಲಿ ಮೇ ತಿಂಗಳಲ್ಲಿ ಮೂರು ದಿನ ಮಳೆಯಾಯಿತು. ಇದರಿಂದಾಗಿ ಕಬ್ಬು ಸೇರಿದಂತೆ ತೋಟಗಾರಿಕೆ ಬೆಳೆಗಳು ಜೀವ ಪಡೆದುಕೊಂಡವು. ಮುಂದಿನ ದಿನಗಳಲ್ಲಿ ಉತ್ತಮ ಮಳೆ ನಿರೀಕ್ಷೆಯಲ್ಲಿರುವ ರೈತರು ತಮ್ಮ ಭೂಮಿ ಹದ ಮಾಡುವ ಕಾರ್ಯಕ್ಕೆ ಮೂರು ನಾಲ್ಕು ದಿನಗಳಲ್ಲಿ ಚಾಲನೆ ನೀಡುವರು.
ಜೂ. 8ರಂದು ತಾಲೂಕಿನಲ್ಲಿ 54 ಮಿ.ಮೀ ಮಳೆಯಾಗಿದೆ. ಇಂಡಿ, ನಾದ, ಅಗರಖೇಡ, ಝಳಕಿ, ಹೋರ್ತಿ ಪ್ರದೇಶಗಳಲ್ಲಿ ಮಳೆಯಾಗಿದ್ದು ರೈತರು ಬಿತ್ತನೆಗೆ ಚಾಲನೆ ನೀಡಿದ್ದಾರೆ.
ಜೂನ್ 8ರವರೆಗೆ 39.8 ಮಿ.ಮೀ, ಮೇ ತಿಂಗಳಲ್ಲಿ 64.5 ಮಿ.ಮೀ. ಮಳೆಯಾಗಿದೆ. ತಾಲೂಕಿನ 30634 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ 84541 ಹೆಕ್ಟೇರ್ ಖುಷ್ಕಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಮುಸುಕಿನ ಜೋಳ 4126 ಹೆ., ಸಜ್ಜೆ 2340, ತೊಗರಿ 86772, ಸೂರ್ಯಕಾಂತಿ 1243, ಹತ್ತಿ 3085 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.
ಈಗಾಗಲೇ 18812 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆ ಮಾಡಲಾಗಿದೆ. ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳ ಪೂರೈಕೆಗೆ ಕೃಷಿ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ. ಹೀಗಾಗಿ ರೈತರು ಈ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜಗಳನ್ನು ಪಡೆಯಲು ಮುಂದಾಗಿದ್ದಾರೆ. ಇನ್ನೂ ರಸಗೊಬ್ಬರ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇದೆ ಎಂದು ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.