Advertisement

ಮುಂಗಾರು ಮಳೆ : ಕೃಷಿ ಚಟುವಟಿಕೆ ಚುರುಕು, ಭತ್ತದ ನಾಟಿಗೆ ಉಳುಮೆ

04:05 AM May 29, 2018 | Karthik A |

ಬಜಪೆ: ಈ ಬಾರಿ ಕ್ಲಪ್ತ ಸಮಯಕ್ಕೆ ಮುಂಗಾರು ಮಳೆ ಆರಂಭವಾಗುವ ಖುಷಿಯಲ್ಲಿ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗೆ ತಯಾರಾಗುತ್ತಿದ್ದಾರೆ. ಈಗಾಗಲೇ ಕೆಲವೆಡೆ ಸಾಧಾರಣ ಮಳೆಯಾಗಿದ್ದು, ರಾತ್ರಿ ವೇಳೆ ಮಳೆ ಬರಲಾರಂಭಿಸಿದೆ. ನಾಟಿಗಾಗಿ ಮತ್ತು ಬಿತ್ತನೆಗಾಗಿ ಈಗಾಗಲೇ ರೈತರು ರೈತ ಸಂಪರ್ಕ ಕೇಂದ್ರದ ಮೊರೆ ಹೋಗಿದ್ದಾರೆ.

Advertisement

700ರಿಂದ 800 ಹೆಕ್ಟೇರ್‌ನಲ್ಲಿ ಭತ್ತದ ನಾಟಿ
ಸುರತ್ಕಲ್‌ ಹೋಬಳಿಯ  28 ಗ್ರಾಮಗಳಲ್ಲಿ ಈ ಬಾರಿ 700ರಿಂದ 800 ಹೆಕ್ಟೇರ್‌ ಪ್ರದೇಶದಲ್ಲಿ  ಮುಂಗಾರು ಭತ್ತ ಬೆಳೆಯ ಗುರಿಯನ್ನು ಹೊಂದಿದೆ. ಇದರಲ್ಲಿ ಭತ್ತದ ನಾಟಿ ಹಾಗೂ ಬಿತ್ತನೆ ಒಳಗೊಂಡಿದೆ. ಮೇ 9ರಿಂದ ಸುರತ್ಕಲ್‌ ಹೋಬಳಿ ರೈತ ಸಂಪರ್ಕ ಕೇಂದ್ರದಿಂದ ನಾಟಿ ಹಾಗೂ ಬಿತ್ತನೆಗಾಗಿ ಭತ್ತದ ಬೀಜ ವಿತರಿಸಲು ಆರಂಭ ಮಾಡಲಾಗಿದೆ. ಒಟ್ಟು 30 ಕ್ಟಿಂಟಾಲ್‌ ಭತ್ತದ ಬೀಜವನ್ನು ರೈತಸಂಪರ್ಕ ಕೇಂದ್ರದಿಂದ ಈಗಾಗಲೇ ರೈತರಿಗೆ ನೀಡಲಾಗಿದೆ. ಇದರಲ್ಲಿ ಭದ್ರ, ಜಯ ಹಾಗೂ ಉಮಾ ತಳಿಯ ಬೀಜ ತಲಾ 10 ಕ್ವಿಂಟಾಲ್‌ ಸೇರಿದೆ. ರೈತ ಸಂಪರ್ಕ ಕೇಂದ್ರದಲ್ಲಿ  ಇನ್ನೂ 22 ಕ್ವಿಂಟಾಲ್‌ ಬಿತ್ತನೆ ಬೀಜ ಇದೆ.

ಗುರುಪುರ ಹೋಬಳಿಯಲ್ಲಿ 1,700 ಎಕ್ರೆ ನಾಟಿ, ಬಿತ್ತನೆ ಗುರಿ
ಗುರುಪುರ ಹೋಬಳಿಯ ವ್ಯಾಪ್ತಿಯ 28 ಗ್ರಾಮದಲ್ಲಿ ಒಟ್ಟು 1,700 ಎಕರೆ ಭತ್ತದ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈಗಾಗಲೇ ರೈತರು 350 ಎಕರೆ ಪ್ರದೇಶವನ್ನು ನಾಟಿಗಾಗಿ ಉಳುಮೆ ಮಾಡಿದ್ದಾರೆ. 17.5 ಕ್ವಿಂಟಾಲ್‌ ಬಿತ್ತನೆ ಬೀಜ ಕೃಷಿಕರಿಗೆ ಸರಬರಾಜಾಗಿದೆ. ಇನ್ನೂ 100 ಬ್ಯಾಗ್‌ ಜಯ, 25 ಬ್ಯಾಗ್‌ ಉಮಾ ಬಿತ್ತನೆ ಬೀಜ ರೈತಸಂಪರ್ಕ ಕೇಂದ್ರದಲ್ಲಿದೆ. ಸಾಲು ನಾಟಿ, ಮಿಶನ್‌ ನಾಟಿ, ಕೈ ನಾಟಿ ಹಾಗೂ ಬಿತ್ತನೆ ಕಾರ್ಯಕ್ಕೆ ರೈತರು ತಯಾರಾಗಿದ್ದಾರೆ ಎಂದು ಗುರುಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿ.ಎಸ್‌ ಕುಲಕರ್ಣಿ ತಿಳಿಸಿದ್ದಾರೆ.

ಕೆ.ಜಿ.ಗೆ 8 ರೂ. ಸಬ್ಸಿಡಿ  
ರೈತರಿಗೆ ಬಿತ್ತನೆ ಬೀಜ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. 25 ಕೆ.ಜಿ.ಯ ಬಿತ್ತನೆ ಬೀಜಕ್ಕೆ 200 ರೂ.ಸಬ್ಸಿಡಿ ನೀಡಲಾಗುತ್ತದೆ. ಈಗಾಗಲೇ ಮೇಲೆಕ್ಕಾರು, ಚೇಳಾçರುನಲ್ಲಿ  ಉಳುಮೆ ಆರಂಭವಾಗಿದೆ. ಬಯಲು ಪ್ರದೇಶಗಳಲ್ಲಿ ನಾಟಿ ಹಾಗೂ ಬೆಟ್ಟು, ಮಜಲು ಪ್ರದೇಶಗಳಲ್ಲಿ  ನೇರ ಬಿತ್ತನೆಗೆ ರೈತರು ತಯಾರಾಗಿದ್ದಾರೆ. ಹೆಚ್ಚಾಗಿ ಪವರ್‌ ಟಿಲ್ಲರ್‌ ನಲ್ಲಿ ಉಳುಮೆ ಮಾಡಲಾಗುತ್ತಿದೆ.
– ಬಶೀರ್‌, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ಸುರತ್ಕಲ್‌ 

ಹೊಸ ಬೀಜ ಬಿತ್ತನೆ
ಈ ಬಾರಿ ಮುಂಗಾರು ಮಳೆ ಕ್ಲಪ್ತ ಸಮಯಕ್ಕೆ ಆಗಮಿಸಿದೆ. ಕಳೆದ ಬಾರಿ ಮಳೆ ತಡವಾಗಿ ಬಂದ ಕಾರಣ ಭತ್ತದ ಬಿತ್ತನೆಯಲ್ಲಿಯೂ ತಡವಾಗಿತ್ತು.ಈ ಪ್ರದೇಶದಲ್ಲಿ ನಾವು ಹೆಚ್ಚಾಗಿ ಕಜೆ ಜಯವನ್ನು ಬಿತ್ತನೆ ಮಾಡಿ ನಾಟಿ ಮಾಡುತ್ತಿದ್ದೆವು. ಈ ಬಾರಿ ಇಂಡೋ- ಅಮೆರಿಕನ್‌ ಹೊಸ ಹೈಬ್ರಿಡ್‌ ಭತ್ತ ಬಿತ್ತನೆ ಬೀಜವನ್ನು ತರಲಾಗಿದ್ದು ಇದನ್ನು ಬಿತ್ತನೆ ಮಾಡಲಾಗುವುದು.
– ಹೇಮನಾಥ ಶೆಟ್ಟಿ, ಕೃಷಿಕರು

Advertisement

— ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next