Advertisement

ಬಬ್ಬೂರಲ್ಲಿ ಆರಂಭವಾಯ್ತು ಕೃಷಿ ಮ್ಯೂಸಿಯಂ!

09:19 AM Mar 08, 2019 | |

ಚಿತ್ರದುರ್ಗ: ರಾಜ್ಯದಲ್ಲಿ ವಾರ್‌ ಮ್ಯೂಸಿಯಂ, ಕಾರ್‌ ಮ್ಯೂಸಿಯಂ, ವಾಸ್ತುಶಿಲ್ಪದ ವಸ್ತು ಸಂಗ್ರಹಾಲಯಗಳಿವೆ. ಧರ್ಮಸ್ಥಳದ ಮಂಜೂಷಾದಂತಹ ವಿವಿಧ ವಸ್ತು ಸಂಗ್ರಹಾಲಯಗಳಿವೆ. ಅದೇ ರೀತಿ ಕೃಷಿ ಪರಿಕರಗಳ ವಸ್ತು ಸಂಗ್ರಹಾಲಯ ಕೂಡ ಆರಂಭಗೊಂಡಿದೆ!  ಹಿರಿಯೂರು ತಾಲೂಕಿನ ಬಬ್ಬೂರು ಫಾರಂ ಆವರಣದಲ್ಲಿರುವ ಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ರೈತರು ಬಳಸುವಂತಹ ಎಲ್ಲ ರೀತಿಯ ವಸ್ತುಗಳ ಸಂಗ್ರಹ ಮಾಡಲಾಗಿದೆ. ನೇಗಿಲು, ಕುಂಟೆ, ಕೂರಿಗೆ ಸೇರಿದಂತೆ ಇತರೆ ಕೃಷಿ ಉಪಕರಣ ಹಾಗೂ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

Advertisement

ಯಾಂತ್ರೀಕರಣ ಯುಗದಲ್ಲಿರುವ ಯುವ ಕೃಷಿಕರಿಗೆ, ತರಬೇತಿ ಕೇಂದ್ರಕ್ಕೆ ಭೇಟಿ ನೀಡುವ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಹಳೆ ಕಾಲದ ಕೃಷಿ ಪರಿಕರಗಳನ್ನು ಪರಿಚಯಿಸುವುದು ಈ ವಸ್ತು ಸಂಗ್ರಹಾಲಯದ ಉದ್ದೇಶ. ಹೀಗಾಗಿ ಮತ್ತಷ್ಟು ಕೃಷಿ ಪರಿಕರಗಳನ್ನು ತಂದು ಜೋಡಿಸುವ ಮೂಲಕ ಅದನ್ನು ಉನ್ನತೀಕರಿಸಲು ಚಿಂತನೆ ನಡೆಸಲಾಗಿದೆ. ಈ ಹಿನ್ನಲೆಯಲ್ಲಿ ರೈತರು, ಸಾರ್ವಜನಿಕರ ಮನೆಯಲ್ಲಿ ಬಳಸದೆ ಮೂಲೆ ಸೇರಿರುವ ಅಥವಾ ಅಟ್ಟಕ್ಕೆ ಏರಿಸಿಟ್ಟಿರುವ ಹಳೆಯ ಕಾಲದ ಕೃಷಿ ಪರಿಕರಗಳನ್ನು ಮ್ಯೂಸಿಯಂಗೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಏನೇನು ಕೊಡಬಹುದು?: ಬೇಸಾಯಕ್ಕೆ ಬಳಸುತ್ತಿದ್ದ ನೇಗಿಲು, ಕೂರಿಗೆ, ಕುಂಟೆ, ಕೊಯ್ಲು ಮಾಡಲು ಬಳಸುತ್ತಿದ್ದ ಕುಡುಗೋಲು, ಕತ್ತಿ, ಮಚ್ಚು, ಅಳತೆಗೆ ಬಳಸುತ್ತಿದ್ದ ಸೇರು, ಪಾವು, ಚಟಾಕು, ಬಳಗ, ಕಂಡಗ, ಕಣ ಮಾಡಲು ಬಳಸುವ ರೋಣಗಲ್ಲು, ಕವಳಗಡ್ಡಿ, ಪ್ರಾಣಿಗಳನ್ನು ಓಡಿಸುವ ಉಪಕರಣಗಳು, ರಾಸುಗಳಿಗೆ ಬಳಸುತ್ತಿದ್ದ ಕೋಡ ಹಣಸು, ಬೆನ್ನ ಮೇಲೆ ಹೊದಿಸುವ ಬಟ್ಟೆ, ಕುಚ್ಚು, ಬಣ್ಣದ ಟೇಪು, ಶಂಖ, ಪುಂಡ ಕುರು, ರಾಸುಗಳನ್ನು ನಿಯಂತ್ರಿಸಲು ಬಳಸುವ ದೊಗ್ಗಾಲಿನ ಕೋಲು, ಮುಳ್ಳಿನ ಮುಖಕವಚ, ಬಾರಕೋಲು, ಕೇರುವ ಮೊರ, ಜಾಲಿಸುವ ವನ್ರಿ (ಜಾಲಾರಿ), ಕುಟ್ಟುವ ಒನಕೆ, ಹಾರೆ, ಬೀಸುವಕಲ್ಲು, ಆಲೆಮನೆಗೆ ಬಳಸುವ ವಸ್ತುಗಳು ಸೇರಿದಂತೆ ಕೃಷಿ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ಪರಿಕರಗಳಿದ್ದರೂ ಮ್ಯೂಸಿಯಂಗೆ ತಂದು ಕೊಡಬಹುದು. ಕೊಡುವ ಪರಿಕರಗಳು ಚಾಲನೆಯಲ್ಲಿರಬೇಕು, ಕೆಲಸ ಮಾಡುತ್ತಿರಬೇಕು ಎಂಬ ನಿಯಮವಿಲ್ಲ. ಅವು ಕೆಟ್ಟು ಹೋಗಿದ್ದರೆ, ಮುರಿದು ಹೋಗಿದ್ದರೆ, ಯಾವುದಕ್ಕೂ ಉಪಯೋಗಕ್ಕೆ ಬಾರದೆ ಆಟಿಕೆ ರೀತಿ ಇದ್ದರೂ ನೀಡಬಹುದಾಗಿದೆ.

ತರಬೇತಿ ಕೇಂದ್ರದಲ್ಲಿ ಎಲ್ಲ ವರ್ಗದ ಜನರಿಗೆ ತರಬೇತಿ ನೀಡಲಾಗುತ್ತದೆ. ಅಂದರೆ ರೈತರು, ರೈತ ಮಹಿಳೆಯರು, ಕೃಷಿ ಇಲಾಖೆಯ ಪ್ರೊಬೆಷನರಿ ಅಧಿಕಾರಿಗಳು, ಕೃಷಿ ಮತ್ತು ಸಂಬಂಧಿತ ಇಲಾಖೆಗಳಲ್ಲಿ ಕೆಲಸ ಮಾಡುವ ತಾಂತ್ರಿಕ ವರ್ಗದವರು, ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆಯುತ್ತಿರುವ, ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಹೀಗೆ ತರಬೇತಿಗೆ ಬರುವಂಥವರಿಗೆ ಹಿಂದಿನ ಕಾಲದಲ್ಲಿ ಎಂಥ ಉಪಕರಣಗಳನ್ನು ಬಳಸುತ್ತಿದ್ದರು ಎಂಬುದನ್ನು ಪರಿಚಯಿಸಲು ಈ ವಸ್ತುಸಂಗ್ರಹಾಲಯದಿಂದ ಅನುಕೂಲವಾಗಲಿದೆ.

ವಿಶೇಷವಾಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಕೃಷಿಯಂತಹ ಪದವಿ ತರಗತಿಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ, ಸಿಇಟಿ ಪರೀಕ್ಷೆ ಇರುತ್ತದೆ. ಅದರಲ್ಲಿ ಒಂದು ವಿಷಯ ಕೃಷಿ ಪರಿಕರಗಳನ್ನು ಗುರುತಿಸುವುದಕ್ಕೆ ಮೀಸಲಿರುತ್ತದೆ. ಹಾಗಾಗಿ ಪ್ರತಿ ವರ್ಷ ಈ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ವಸ್ತು ಸಂಗ್ರಹಾಲಯದ ಮೂಲಕ ಕೃಷಿ ಪರಿಕರಗಳನ್ನು ಪರಿಚಯಿಸಲು ಸಾಧ್ಯವಾಗುತ್ತ¨ 

Advertisement

ಕೃಷಿ ಉಪಕರಣ ತಲುಪಿಸುವುದು ಹೇಗೆ?
ಆಯಾ ಗ್ರಾಮದ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿವೆ. ಅಲ್ಲಿಗೆ ಕೃಷಿ ಪರಿಕರಗಳನ್ನು ತಲುಪಿಸಬಹುದು. ಒಂದು ವೇಳೆ ಗ್ರಾಮಗಳಲ್ಲಿ ಸಂಗ್ರಹವಾಗುವ ಕೃಷಿ ಪರಿಕರಗಳ ಸಂಖ್ಯೆ ಹೆಚ್ಚಾಗಿದ್ದು ಅಥವಾ ದೊಡ್ಡ ಗಾತ್ರ ಪರಿಕರಗಳಾಗಿದ್ದರೆ ಅಂಥ ಗ್ರಾಮಗಳಿಗೆ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಸಂಗ್ರಹಿಸಲಿದ್ದಾರೆ. 

ಸಾರ್ವಜನಿಕರು ಕೃಷಿ
ವಸ್ತು ಸಂಗ್ರಹಾಲಯವನ್ನು ಉನ್ನತೀಕರಿಸಲು ಉದಾರ ಮನಸ್ಸಿನಿಂದ ನೆರವು ನೀಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಕೃಷಿ ಪರಿಕರಗಳನ್ನು ಮ್ಯೂಸಿಯಂಗೆ ತಲುಪಿಸಲು ಸಂಪರ್ಕಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆ ಹೀಗಿದೆ. ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂ, ಹಿರಿಯೂರು ತಾಲೂಕು. ದೂರವಾಣಿ: 08193-289069 ಮೊ: 8277930959/9743871010.

„ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next