Advertisement
“ಉದಯವಾಣಿ” ಕಚೇರಿಯಲ್ಲಿ ಶುಕ್ರವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿ ಕೃಷಿ ಇಲಾಖೆಯಲ್ಲಿ ನಡೆಸಲು ಉದ್ದೇಶಿಸಿರುವ ಮುನ್ನೋಟಗಳ ಬಗ್ಗೆ ಬೆಳಕು ಚೆಲ್ಲಿದರು. ಕೃಷಿ ವಿಮಾ ಪದ್ಧತಿ, ಪರ್ಯಾಯ ಕೃಷಿ ವಿಧಾನ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕೃಷಿ ಪದ್ಧತಿಯಲ್ಲಿ ಆಗಬೇಕಾದ ಬದಲಾವಣೆ, ಕೃಷಿ ವಿಶ್ವವಿದ್ಯಾಲಯಗಳ ಸದ್ಬಳಕೆ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.ಸಂವಾದದ ಪ್ರಮುಖ ಅಂಶಗಳು
ಬೆಂಬಲ ಬೆಲೆ ವ್ಯವಸ್ಥೆಯಲ್ಲಿ ರಚನಾತ್ಮಕ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂ ಚರ್ಚಿಸಿರುವೆ. ಎಷ್ಟೋ ಸಂದರ್ಭದಲ್ಲಿ ಬೆಂಬಲ ಬೆಲೆಯ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬ ಆರೋಪಗಳು ನಮ್ಮೆದುರು ಬರುತ್ತಲೇ ಇರುತ್ತದೆ. ಹೀಗಾಗಿ ಈ ಯೋಜನೆಯ ನೇರ ರೈತರಿಗೆ ಲಭಿಸುವಂತೆ ಮಾಡಲು “ಸ್ಥಿರ ಬೆಲೆ’ ಪದ್ಧತಿ ಜಾರಿಗೊಳಿಸಬೇಕಿದೆ. ಅಂದರೆ ರೈತರಿಗೆ ತಾನು ಬೆಳೆದ ಪ್ರತಿ ಬೆಳೆಗೂ ವರ್ಷಪೂರ್ತಿ ಸ್ಥಿರವಾದ ದರ ಸಿಗಬೇಕು. ದರ ಹೆಚ್ಚಾದಾಗ ಲಾಭವಾಗಬೇಕು, ಕಡಿಮೆಯಾದಾಗ ನಷ್ಟವಾಗಬಾರದು. ಈ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸುವುದಕ್ಕೆ ಚಿಂತನೆ ನಡೆಸಿದ್ದೇವೆ. ಈ ಹಿಂದೆ ಕೃಷಿ ಬೆಲೆ ಆಯೋಗವೂ ಇದೇ ಮಾದರಿಯ ವರದಿ ನೀಡಿದೆ. ನಾವು ಸದ್ಯದಲ್ಲೇ ಕೃಷಿ ಬೆಲೆ ಆಯೋಗವನ್ನು ಪುನರ್ ರಚನೆ ಮಾಡಿ ಹೊಸ ಅಧ್ಯಕ್ಷರ ನೇಮಕ ಮಾಡುತ್ತೇವೆ. ಆ ಸಂದರ್ಭದಲ್ಲಿ ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ.
Related Articles
ಕೃಷಿ ಇಲಾಖೆಯಲ್ಲಿ ಶೇ.57ರಷ್ಟು ಹುದ್ದೆಗಳು ಖಾಲಿ ಇವೆ. ರೈತರಿಗೆ ಮಾಹಿತಿ ಹಾಗೂ ಸೌಲಭ್ಯ ಒದಗಿಸಬೇಕಾದ ತಳ ಹಂತದಲ್ಲೇ ಸಿಬ್ಬಂದಿ ಕೊರತೆ ಹೆಚ್ಚಿದೆ. ಇಲಾಖೆಗೆ ಸಮಗ್ರ ಕಾಯಕಲ್ಪ ಒದಗಿಸಬೇಕಿದ್ದರೆ ನೇಮಕ ಪ್ರಕ್ರಿಯೆ ನಡೆಯಲೇಬೇಕು. ಆದರೆ ಸುಮಾರು 4000 ವಿವಿಧ ವೃಂದದ ಹುದ್ದೆಗಳು ಖಾಲಿ ಇವೆ. ಈಗಿನ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಎಲ್ಲವನ್ನೂ ಭರ್ತಿ ಮಾಡಿಕೊಳ್ಳುವುದು ಅಸಾಧ್ಯ. ಆದರೆ ಈ ವರ್ಷ 1000 ಹುದ್ದೆ ನೇಮಕ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದೇವೆ. ಸದ್ಯದಲ್ಲೇ ಈ ಬಗ್ಗೆ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
Advertisement