Advertisement

835 ಎಕರೆ ಹಡಿಲು ಭೂಮಿಯಲ್ಲಿ ನಳನಳಿಸುತ್ತಿದೆ ಭತ್ತ ಕೃಷಿ

09:17 PM Aug 17, 2021 | Team Udayavani |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಡಿಲು ಭೂಮಿಗಳಲ್ಲಿನ ಹುಲ್ಲುಗಂಟಿಗಳ ಜಾಗದಲ್ಲಿ ಭತ್ತದ ಸಸಿಗಳು ನಳನಳಿಸುತ್ತಿವೆ. 2021-22ನೇ ಸಾಲಿನ ಖಾರಿಫ್‌ ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 835 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಬೆಳೆ ಕಂಗೊಳಿಸುತ್ತಿದೆ.

Advertisement

ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,731 ಎಕರೆ ಹಡಿಲು ಭೂಮಿಯನ್ನು ಗುರುತಿಸಲಾಗಿತ್ತು. ಇದರಲ್ಲಿ 876 ಎಕರೆಯನ್ನು ಭತ್ತದ ಬೆಳೆಗೆ ಆಯ್ಕೆ ಮಾಡಿ 836 ಎಕರೆಯಲ್ಲಿ ಭತ್ತ ಕೃಷಿ ಮಾಡಲಾಗಿದೆ. ಕಳೆದ ಬಾರಿ ಪ್ರಗತಿಪರ ರೈತರು, ಸ್ವಯಂಸೇವಾ ಸಂಸ್ಥೆಗಳು, ಆಸಕ್ತ ಯುವಕರು ಹಡಿಲು ಭೂಮಿಯಲ್ಲಿ ಭತ್ತ ಕೃಷಿಯ ಬಗ್ಗೆ ಉತ್ಸುಕತೆ ತೋರಿದ್ದು, 500 ಎಕರೆಗೂ ಅಧಿಕ ಹಡಿಲು ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲಾಗಿತ್ತು. ಈ ಬಾರಿಯೂ ಹಡಿಲು ಬಿದ್ದಿರುವ ಗದ್ದೆಗಳಲ್ಲಿ ಭತ್ತದ ಬೆಳೆಗೆ ಉತ್ತೇಜಿಸುವ ಕಾರ್ಯವನ್ನು ಹೆಚ್ಚಿನ ರೀತಿಯಲ್ಲಿ ಹಮ್ಮಿಕೊಳ್ಳಲು ಕೃಷಿ ಇಲಾಖೆ ನಿರ್ಧರಿಸಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಜನಪ್ರತಿನಿಧಿಗಳು ಕೂಡ ಹೆಚ್ಚಿನ ಉತ್ಸುಕತೆ ತೋರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಪ್ರತಿಯೊಂದು ವಿಧಾನಸಭೆ ಕ್ಷೇತ್ರದಲ್ಲೂ ಅಲ್ಲಿನ ಶಾಸಕರು, ಪ್ರಗತಿಪರ ರೈತರು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಆಸಕ್ತ ಯುವಕರನ್ನು ತೊಡಗಿಸಿಕೊಂಡು ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿದ್ದರು.

11,070 ಹೆಕ್ಟೇರ್‌ ಕೃಷಿ  :

ಜಿಲ್ಲೆಯಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ 11,070 ಹೆ.ಭತ್ತ ಬೆಳೆ ಗುರಿ ಇರಿಸಲಾಗಿದ್ದು, ಈ ವರೆಗೆ 10,073 ಹೆಕ್ಟೇರ್‌ನಲ್ಲಿ ಕೃಷಿ ಮಾಡಲಾಗಿದೆ. ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಂಗಳೂರು ತಾಲೂಕಿನಲ್ಲಿ ಹೆ. 5,700 ಗುರಿಯ ಬದಲಿಗೆ 5,954 ಹೆ. ಬಂಟ್ವಾಳದಲ್ಲಿ 3,020ಹೆ.ನಲ್ಲಿ 1,821, ಬೆಳ್ತಂಗಡಿಯಲ್ಲಿ 1,800 ಹೆ.ನಲ್ಲಿ 1,669, ಪುತ್ತೂರಿನಲ್ಲಿ 350 ಹೆ.ನಲ್ಲಿ 402, ಸುಳ್ಯದಲ್ಲಿ 200 ಹೆ. ಗುರಿಯ ಬದಲಿಗೆ 236 ಹೆಕ್ಟೇರ್‌ನಲ್ಲಿ ಭತ್ತ ಬೆಳೆಸಲಾಗಿದೆ. ಆಗಸ್ಟ್‌ ತಿಂಗಳ ಅಂತ್ಯದವರೆಗೆ ಖಾರಿಫ್‌ ಬೆಳೆ ಅವಧಿ ಇದ್ದು ಇದಕ್ಕೆ ಇನ್ನು ಒಂದಷ್ಟು ಹೆಕ್ಟೇರ್‌ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020 ಮುಂಗಾರು ಹಂಗಾಮಿನಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿತ್ತು. ವಾರ್ಷಿಕ ಒಟ್ಟು ಗುರಿ 10,260 ಹೆಕ್ಟೇರ್‌ ಗುರಿಯನ್ನು ದಾಟಿ 11,228.6 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.

ಭತ್ತ ಕೃಷಿ; ತಾಲೂಕುವಾರು ಅಂಕಿ-ಅಂಶ :

ಭತ್ತ ಕೃಷಿ; ತಾಲೂಕುವಾರು ಅಂಕಿ-ಅಂಶ

ತಾಲೂಕು           ಗುರುತಿಸಿರುವ ಹಡಿಲು ಭೂಮಿ  ಭತ್ತದ

ಬೆಳೆಗೆ ಆಯ್ಕೆ     ಬೆಳೆದ ಪ್ರದೇಶ

ಮಂಗಳೂರು     1,015 ಎಕರೆ        625 ಎಕರೆ           602 ಎಕರೆ

ಬಂಟ್ವಾಳ           205         112.5     85

ಬೆಳ್ತಂಗಡಿ           390         75           70

ಪುತ್ತೂರು            97.5        47.5        62.5

ಸುಳ್ಯ    20           15           15

ಈ ಬಾರಿಯೂ ದ.ಕ. ಜಿಲ್ಲೆಯ ಹಡಿಲು ಭೂಮಿಗಳಲ್ಲಿ ಭತ್ತದ ಬೆಳೆಯಲ್ಲಿ ಉತ್ತಮ ಪ್ರಗತಿ ದಾಖಲಾಗಿದೆ. ಪ್ರತಿಯೊಂದು ತಾಲೂಕಿನಲ್ಲೂ ಹಡಿಲು ಭೂಮಿ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ವ್ಯಕ್ತವಾಗಿತ್ತು. ಸಚಿವರು ಕೂಡ ಇದಕ್ಕೆ ನೇತೃತ್ವ ನೀಡಿದ್ದು, ಪ್ರಗತಿಪರ ಕೃಷಿಕರು, ಸ್ವಯಂಸೇವಾ ಸಂಸ್ಥೆಗಳು, ಶಾಸಕರು, ಜನಪ್ರತಿನಿಧಿಗಳು ಹಡಿಲು ಭೂಮಿ ಕೃಷಿಗೆ ಪ್ರೇರೇಪಣೆ ನೀಡಿದ್ದಾರೆ. ಇದಲ್ಲದೆ ಖಾರಿಫ್‌ನಲ್ಲಿ ಜಿಲ್ಲೆಗೆ ನಿಗದಿಪಡಿಸಿದ್ದ ಗುರಿಯಲ್ಲಿ ಉತ್ತಮ ಸಾಧನೆ ದಾಖಲಾಗಿದೆ.ಡಾ| ಸೀತಾ,ಕೃಷಿ ಜಂಟಿ ನಿರ್ದೇಶಕರು

 

 ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next