Advertisement

ಪಠ್ಯ ಅಧ್ಯಯನದೊಂದಿಗೆ ವಿದ್ಯಾರ್ಥಿಗಳಿಗೆ ಕೃಷಿ ಪಾಠ

11:45 PM Jul 30, 2019 | mahesh |

ಅರಂತೋಡು: ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗದ್ದೆಯಲ್ಲಿ ನೇಜಿ ನೆಟ್ಟು ಹಾಡು ಕೇಳುತ್ತಾ ಕೆಸರಿನಲ್ಲಿ ಕುಣಿಯುತ್ತಾ ಖುಷಿಪಟ್ಟರು.

Advertisement

ಹಲವು ವರ್ಷಗಳ ಹಿಂದೆ ಎಲ್ಲಿ ನೋಡಿದರೂ ಹಸುರು ಗದ್ದೆಗಳು ಕಾಣಸಿಗುತ್ತಿದ್ದವು. ಗದ್ದೆಯಲ್ಲಿ ಎತ್ತು ಕೋಣಗಳನ್ನು ಕಟ್ಟಿ ಭೂಮಿ ಉಳುವುದು ನೋಡುವುದೊಂದು ಚಂದವಾಗಿತ್ತು. ರೈತನು ಭೂಮಿ ಉಳುವಾಗ ಹೊರಡಿಸುವ ದನಿ, ನೇಜಿ ನೆಡುವಾಗ ಹೇಳುವ ಹಾಡು ಕೇಳುವುದೇ ಮನಸ್ಸಿಗೆ ತುಂಬಾ ಮುದ ನೀಡುತ್ತಿತ್ತು. ಇಂತಹ ಆಹ್ಲಾದಕರ ಕ್ಷಣ ಕಾಣ ಸಿಗುವುದು ಈಗ ಅಪರೂಪವಾಗುತ್ತಿದೆ. ಬೆರಳೆಣಿಕೆಯ ರೈತರು ಮಾತ್ರ ಒಂದೆರಡು ಗದ್ದೆಗಳನ್ನು ಇರಿಸಿಕೊಂಡು ಬೇಸಾಯ ಮಾಡುತ್ತಿದ್ದಾರೆ.

ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕ ವೈ.ಎ. ಆನಂದ ಅವರ ತಂಡದವರು ಸ್ಕೌಟ್ ವಿದ್ಯಾರ್ಥಿಗಳಿಗೆ ಗದ್ದೆಯನ್ನು ತೋರಿಸಿ ನೇಜಿ ನೆಡುವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಆಲೋಚಿಸಿದರು. ಇದಕ್ಕೆ ಅವರಿಗೆ ತತ್‌ಕ್ಷಣ ತೋಚಿದ್ದು ನೆರೆಯ ಹರಿಪ್ರಸಾದ್‌ ಕಲ್ಲುಗದ್ದೆ ಅವರ ಗದ್ದೆ. ಅವರೊಡನೆ ಮಾತನಾಡಿಕೊಂಡು ಹರಿಪ್ರಸಾದ್‌ ಅವರ ಗದ್ದೆಗೆ ಸ್ಕೌಟ್ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋದರು.

ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಹಾಗೂ ಯಾಂತ್ರೀಕೃತ ನಾಟಿ ಮಾಡುವ ಬಗ್ಗೆ ತರಬೇತಿ ನೀಡಲಾಯಿತು. ಸ್ಥಳೀಯ ಮಹಿಳೆ ನೇಜಿ ಹಾಡು ಹಾಡಿದರು. ಹರಿಪ್ರಸಾದ್‌ ಹಾಗೂ ಮನೆಯವರು ಹೊಲದಲ್ಲಿ ನೀರಿನ ಸಂಗ್ರಹ, ಪಕ್ಕದಲ್ಲಿ ನಿರ್ಮಿಸಿದ ಇಂಗುಗುಂಡಿ, ಅದರಿಂದ ಆಗುವ ಪ್ರಯೋಜನ, ನಾಟಿಯ ಅಂತರ, ಭತ್ತದ ತಳಿಗಳು ಇತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ವಿದ್ಯಾಥಿಗಳು ಗದ್ದೆಯಲ್ಲಿ ನಾಟಿಯ ಪ್ರಾಯೋಗಿಕ ಪಾಠ ಕಲಿತು ನೇಜಿ ನೆಟ್ಟು ಖುಷಿ ಪಟ್ಟರು. ಸಹ ಶಿಕ್ಷಕರಾದ ಮನೋಜ್‌ ಹಾಗೂ ಸಂದೇಶ್‌ ಸಹಕರಿಸಿದರು.

ಪ್ರೇರಣೆ ಸಿಕ್ಕಿದೆ

ನಾಟಿ ಕೆಲಸ ತುಂಬಾ ಖುಷಿ ನೀಡಿತ್ತು. ನೇಜಿ ನೆಡುವಾಗ ಹಾಡುವ ಹಾಡು ಕೇಳಿ ತುಂಬಾ ಖುಷಿ ಪಟ್ಟೆ. ಅಲ್ಲಿನ ಪ್ರೇರಣೆಯಿಂದಾಗಿ ಅವರು ನಿರ್ಮಿಸಿದ ಇಂಗುಗುಂಡಿ ನೋಡಿಕೊಂಡು ತನ್ನ ಮನೆಯ ಪಕ್ಕ ಇಂಗುಗುಂಡಿ ನಿರ್ಮಿಸಿದ್ದೇನೆ. ನಾನು ನೇಜಿ ನೆಟ್ಟು ಬೇಸಾಯ ಮಾಡಬಲ್ಲೆ. – ಅಭಿಜಿತ್‌ ನಾಟಿ ತರಬೇತಿ ಪಡಕೊಂಡ ವಿದ್ಯಾರ್ಥಿ

ಕುಚಲಕ್ಕಿ ಮಾಹಿತಿ

ವಿದ್ಯಾರ್ಥಿಗಳು ನಾಟಿಯ ಪ್ರಾಯೋಗಿಕ ತರಬೇತಿ ಪಡೆದುಕೊಂಡು ನೇಜಿ ನೆಟ್ಟರು. ಕೆಲವು ವಿದ್ಯಾರ್ಥಿಗಳು ಕುಚಲಕ್ಕಿ ಹಾಗೂ ಬೆಳ್ತಿಗೆ ಅಕ್ಕಿ ಬೇರೆ ಬೇರೆ ತೆನೆಯಲ್ಲಿ ಬೆಳೆಯುತ್ತದೆ ಎಂದುಕೊಂಡಿದ್ದರು. ಈ ನಾಟಿಯ ಪ್ರಾತ್ಯಕ್ಷಿಕೆಯ ಅನಂತರ ಅವರು ಕುಚಲಕ್ಕಿ ಮಾಡುವ ಬಗ್ಗೆ ತಿಳಿದುಕೊಂಡಿದ್ದರು. – ವೈ. ಆನಂದ ಮುಖ್ಯ ಶಿಕ್ಷಕರು
Advertisement

Udayavani is now on Telegram. Click here to join our channel and stay updated with the latest news.

Next