Advertisement

ವ್ಯವಸಾಯದ ಬದುಕೇ ಸಾಕಾಗೈತೆ!

05:57 AM Jan 14, 2019 | |

ದಾವಣಗೆರೆ: ಮಕ್ಕಳು ಸ್ನಾನ ಮಾಡದೇ ಶಾಲೆಗೆ ಹೋಗ್ತಾರೆ… ವ್ಯವಸಾಯದ ಬದುಕೇ ಸಾಕಾಗೈತೆ… ಬೆಳೆ ವಿಮಾ ಯೋಜನೆ ಏನೇನೂ ಉಪಯೋಗಿಲ್ಲ… ನೀರು ಕೊಟ್ರೆ ನಿಮ್ಮ ಪರಿಹಾರ-ಸಾಲಮನ್ನಾ ಯಾವ್ದೂ ಬ್ಯಾಡ…ಬೀಜ, ಗೊಬ್ಬರ, ಬೇಸಾಯದ ದುಡ್ಡು ಕೂಡ ಸಿಗಲ್ಲ ಅಂದ್ರೆ ನಾವ್‌ ಜೀವನ ಹೆಂಗ್‌ ಮಾಡ್ಬೇಕು…

Advertisement

ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಅಧ್ಯಯನ ಹಾಗೂ ಪರಿಹಾರ ಕುರಿತು ಕೈಗೊಂಡಿರುವ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲಿಸಲು ಭಾನುವಾರ ದಾವಣಗೆರೆ ಹಾಗೂ ಜಗಳೂರು ತಾಲೂಕಿನ ಆಯ್ದ ಹಳ್ಳಿ ಹಾಗೂ ಹೊಲಗಳಿಗೆ ಭೇಟಿ ನೀಡಿ, ಪರಿಶೀಲಿಸಿದ ಕೃಷಿ ಸಚಿವ ಶಿವಶಂಕರ ರೆಡ್ಡಿ ಅಧ್ಯಕ್ಷತೆಯ ಬೆಂಗಳೂರು ವಿಭಾಗದ ಸಚಿವ ಸಂಪುಟ ಉಪಸಮಿತಿ ಮುಂದೆ ರೈತರು, ಗ್ರಾಮಸ್ಥರು ಹೇಳಿದ ಬೇಸರದ ಮಾತುಗಳಿವು.

ಬರ ಪರಿಹಾರಕ್ಕಾಗಿ ಸಚಿವರ ದಂಡೇ ಬರಲಿದೆ ಎಂಬ ಹಿನ್ನೆಲೆಯಲ್ಲಿ ಎಂದಿನಂತೆ ಹೂವಿನ ಹಾರಗಳೊಂದಿಗೆ ಕಾದಿದ್ದ ಮಂದಿ ಸಚಿವರನ್ನು ಬರಮಾಡಿಕೊಂಡು ತಮ್ಮ ಅಳಲು ತೋಡಿಕೊಂಡರು.

ಸಚಿವರಾದ ವೆಂಕಟರಮಣಪ್ಪ, ಡಿ.ಸಿ.ತಮ್ಮಣ್ಣ, ಎಸ್‌.ಆರ್‌. ಶ್ರೀನಿವಾಸ್‌ ಒಳಗೊಂಡ ಕೃಷಿ ಸಚಿವ ಶಿವಶಂಕರ ರೆಡ್ಡಿ ನೇತೃತ್ವದ ತಂಡ ಬೆಳಗ್ಗೆ 9-30ರ ಸುಮಾರಿಗೆ ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ, ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಪೂರೈಕೆಗೆ ಚಾಲನೆ ನೀಡಿದಾಗ, ಅಲ್ಲಿನ ಗ್ರಾಮಸ್ಥರು ಸಚಿವರಿಗೆ ಸಮಸ್ಯೆ ಬಿಚ್ಚಿಟ್ಟರು.

ಸ್ವಾಮಿ, ಕುಡಿಯಲು ನೀರಿಲ್ಲ. ದೂರದ ಹೊಲ, ಹೆಬ್ಟಾಳು ಸೇರಿದಂತೆ ಬೇರೆ ಬೇರೆ ಹಳ್ಳಿಗಳಿಂದ ನೀರು ತರುತ್ತೇವೆ. ದನ ಕರುಗಳಿಗೂ ನೀರು-ಮೇವು ಒದಗಿಸುವುದು ಬಹಳ ಕಷ್ಟವಾಗಿದೆ. ಕಳೆದ 9 ತಾರೀಕಿನಿಂದ ಟ್ಯಾಂಕರ್‌ನಲ್ಲಿ ನೀರು ಬರ್ತಿದೆ. ಪ್ರತಿದಿನ 7 ಟ್ಯಾಂಕರ್‌ ನೀರು ಇಡೀ ಊರಿಗೆ ಕೊಡ್ತಾರೆ. ಮನೆಯೊಂದಕ್ಕೆ 6 ಕೊಡ ನೀರು ಸಿಗ್ತದೆ. ನಮ್ಮೂರಲ್ಲಿ ಕೆರೆ, ಹೊಂಡ ಕೂಡ ಇಲ್ಲ. ಮಕ್ಕಳು ದಿನವೂ ಸ್ನಾನ ಮಾಡದೇ ಶಾಲೆಗೆ ಹೋಗ್ತಾರೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು. ಗ್ರಾಮದ ಮುಖಂಡರು ಸಹ ನೀರಿನ ತೀವ್ರ ಸಮಸ್ಯೆ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

Advertisement

ಅಲ್ಲಿಂದ ಜಗಳೂರು ತಾಲೂಕಿನ ಬಿದರಕೆರೆ ಹೋಬಳಿಯ ನಿಬ್ಗೂರಿನ ರೈತ ಗುರುಸಿದ್ದಪ್ಪ ಎಂಬುವವರ ಜಮೀನಿಗೆ ಭೇಟಿ ನೀಡಿದ ಸಚಿವರ ತಂಡ, ಈರುಳ್ಳಿ ಬೆಳೆ ವೀಕ್ಷಿಸಿತು. ಆಗ ರೈತ ಗುರುಸಿದ್ದಪ್ಪ, ಕಳೆದ ಬಾರಿ ಸೈನಿಕ ಹುಳು ಬಾಧೆಯಿಂದ ಬೆಳೆ ನಷ್ಟವಾಯಿತು. ಈ ಬಾರಿ 1.5 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಮಳೆ ಇಲ್ಲದೆ ಗಡ್ಡೆ ದೊಡ್ಡದಾಗಲಿಲ್ಲ. ರೇಟ್ ಬೇರೆ ಕುಸಿದಿದೆ. ಹಾಗಾಗಿ ಸಿಗುವ ಸಣ್ಣ ಸಣ್ಣ ಗಡ್ಡೆ ಕಿತ್ತರೆ ಕೂಲಿ ಕೂಡ ಸಿಗಲ್ಲ. ಮೇಲಾಗಿ ಪ್ಯಾಕೇಟ್ವೊಂದಕ್ಕೆ 80 ರೂ. ಬಾಡಿಗೆ ಕೊಡಬೇಕು. ಮಾರುಕಟ್ಟೆಗೆ ಕೊಂಡೊಯ್ದರೆ ಆ ಬಾಡಿಗೆ ಸಹ ಸಿಗಲ್ಲ. ಅದಕ್ಕೆ ಸುಮ್ಮನೆ ಬಿಟ್ಟಿದ್ದೇವೆ ಎಂದರು.

ಇನ್ನು ಫಸಲ್‌ ಬಿಮಾ ಯೋಜನೆ ರೈತರಿಗೆ ಯಾವುದೇ ಪ್ರಯೋಜನ ಆಗಲ್ಲ. ಮಳೆ ಆದಾಗ ರೈತರು ಹೊಲದಲ್ಲಿ ಬಿತ್ತನೆ ಮಾಡಿಲ್ಲ ಎಂಬುದಾಗಿ ವರದಿ ಕೊಟ್ಟಿರುವ ಅಧಿಕಾರಿಗಳು, ಬಿತ್ತನೆ ಮಾಡದ ಹೊಲದಲ್ಲಿ ಹೆಚ್ಚು ಇಳುವರಿ ಬಂದಿದೆ ಎಂದು ವರದಿ ಕೊಟ್ಟಿದ್ದರಿಂದ ಫಸಲ್‌ ಬಿಮಾ ಯೋಜನೆ ಪರಿಹಾರ ದೊರೆಯಲಿಲ್ಲ. ನನ್ನ ಜಮೀನಿನಲ್ಲಿ ಈಗ ಈರುಳ್ಳಿ ಇದೆ. ಆದರೆ, ಅಧಿಕಾರಿಗಳು ಮೆಕ್ಕೆಜೋಳ ಅಧಿಕ ಇಳುವರಿ ಇದೆ ಎಂದು ವರದಿ ನೀಡಿದ್ದಾರೆ. ಇದೇ ರೀತಿ ಹಲವಾರು ಜಮೀನುಗಳಲ್ಲಿನ ಬೆಳೆಗಳ ಬಗ್ಗೆಯೂ ಇದೇ ರೀತಿ ವರದಿ ನೀಡಿರುವುದರಿಂದ ರೈತರಿಗೆ ಯಾವುದೇ ಪರಿಹಾರ ಸಿಗದೆ ಅನ್ಯಾಯ ಆಗಿದೆ ಎಂದು ರೈತ ಬಸವರಾಜಪ್ಪ ದೂರಿದರು.

ಎಕರೆಗೆ ಒಂದು ಕ್ವಿಂಟಲ್‌ ಕಡ್ಲೆ ಸಿಗಲ್ಲ. ಕಿತ್ತರೆ ಕೂಲಿ ಕೊಡೋಕೆ ದುಡ್ಡು ಆಗಲ್ಲ. ತುಂಬಾ ನಷ್ಟ ಆಗಿದೆ ನಮಗೆ ಪರಿಹಾರ ಕೊಡಿ ಎಂದು ವೀರೇಶ್‌ ಎಂಬಾತ ಸಚಿವರ ಬಳಿ ತನ್ನ ಗೋಳು ಹೇಳಿದ. ಈ ಭಾಗದಲ್ಲಿ ಸಿಗುವ ನೀರಲ್ಲಿ ಪ್ಲೊರೈಡ್‌ ಅಂಶ ಶೇ. 70 ಇರುತ್ತದೆ. ಆ ನೀರು ದನ ಕರುಗಳು ಸಹ ಕುಡಿಯಲ್ಲ. ಬೆಳೆ ಇಳುವರಿ ಬರಲ್ಲ. ಹಾಗಾಗಿ ಸಂಗೇನಹಳ್ಳಿ ಕೆರೆಯಿಂದ ಈ ಭಾಗಕ್ಕೆ ನೀರು ಒದಗಿಸಲು ಕ್ರಮ ವಹಿಸುವಂತೆ ಮನವಿ ಮಾಡಿದ.

ನಂತರ ತೋರಣಗಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಮ್ಮಾಪುರ ಕೆರೆಯಲ್ಲಿ ನರೇಗಾ ಯೋಜನೆಯಡಿ ಹೊಳೆತ್ತುವ ಕಾಮಗಾರಿ ವೀಕ್ಷಿಸಿದ ಸಚಿವರ ತಂಡಕ್ಕೆ ಅಲ್ಲಿನ ಗ್ರಾಮಸ್ಥರು, ಮುಖಂಡರು, ಅಪ್ಪರ್‌ ಭದ್ರಾ ಯೋಜನೆ ಮೊದಲಿನ ನಕ್ಷೆ ಪ್ರಕಾರ ಅನುಷ್ಠಾನಗೊಳಿಸಿದರೆ ಈ ಭಾಗಕ್ಕೆ ನೀರು ದೊರೆಯಲಿದೆ. ಪರಿಷ್ಕೃತ ನಕ್ಷೆ ಪ್ರಕಾರ ನೀರು ಸಿಗಲ್ಲ. ಆದ್ದರಿಂದ ಮೊದಲಿದ್ದ ನಕ್ಷೆ ಪ್ರಕಾರವೇ ಆ ಯೋಜನೆ ಜಾರಿಗೊಳಿಸಬೇಕೆಂದು ಕೋರಿದರು.

ಸಚಿವರ ತಂಡದೊಂದಿಗೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಅಶ್ವತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌, ತೋಟಗಾರಿಕೆ ಉಪ ನಿರ್ದೇಶಕ ಟಿ.ಆರ್‌. ವೇದಮೂರ್ತಿ, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಸಚಿವ ಸಂಪುಟ ಉಪಸಮಿತಿ ಇನ್ನಿಬ್ಬರು ಸದಸ್ಯರಾದ ಡಿ.ಕೆ. ಶಿವಕುಮಾರ್‌ ಹಾಗೂ ಎಂ.ಟಿ.ಬಿ ನಾಗರಾಜ್‌ ಇಂದಿನ ಪ್ರವಾಸದಲ್ಲಿ ಪಾಲ್ಗೊಂಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next