ಮುಂಬಯಿ, ಮೇ 22: ಮಳೆಗಾಲಕ್ಕೆ ಮುಂಚಿತವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗುರುವಾರ ಸಭೆ ನಡೆಸಿ ಖಾರಿಫ್ ಕೃಷಿಗೆ ರಾಜ್ಯದ ಸಿದ್ಧತೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ಜೂನ್ 18ರಂದು ಮಾನ್ಸೂನ್ ಮಹಾರಾಷ್ಟ್ರಕ್ಕೆ ಆಗಮಿಸಲಿದೆ ಮತ್ತು ರಾಜ್ಯದ ಒಟ್ಟು ಖಾರಿಫ್ ಪ್ರದೇಶ 140.11 ಲಕ್ಷ ಹೆಕ್ಟೇರ್ ಆಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಈ ಬಾರಿ 140.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬೀನ್ ಮತ್ತು ಹತ್ತಿ ಕೃಷಿ ಉತ್ತೇಜನ ನೀಡಲಾಗುವುದು, ಇದು ಒಟ್ಟು ಖಾರಿಫ್ ಪ್ರದೇಶದ ಶೇ. 60ರಷ್ಟಿದೆ ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಮ್ ಒ) ಪ್ರಕಟಣೆಯಲ್ಲಿ ತಿಳಿಸಿದೆ.
ಲಾಕ್‌ಡೌನ್ ಸಮಯದಲ್ಲಿ 9,68,550 ಕ್ವಿಂಟಾಲ್ ಹಣ್ಣುಗಳು ಮತ್ತು ತರಕಾರಿಗಳನ್ನು ನೇರವಾಗಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗಿದ್ದು, ಇದಕ್ಕಾಗಿ 3,212 ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು. ಖಾರಿಫ್ ಋತುವಿನ ಒಟ್ಟು ಬೀಜಗಳ ಪ್ರಮಾಣ 17.01 ಲಕ್ಷ ಕ್ವಿಂಟಾಲ್ ಆಗಿದ್ದು, ಈ ಪೈಕಿ 54,000 ಮೆಟ್ರಿಕ್ ಟನ್ ಬೀಜಗಳನ್ನು ಸಾಮಾಜಿಕ ಅಂತರದ ಮಾನದಂಡಗಳಿಗೆ ಅನುಸಾರವಾಗಿ ರೈತರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ 410 ಲಕ್ಷ ಕ್ವಿಂಟಾಲ್ ಹತ್ತಿ ಉತ್ಪಾದನೆಯಾಗಿದ್ದು, ಈವರೆಗೆ 344 ಲಕ್ಷ ಕ್ವಿಂಟಾಲ್ ಹತ್ತಿಯನ್ನು ಸಂಗ್ರಹಿಸಲಾಗಿದೆ. ಉಳಿದ ಭಾಗವನ್ನು ಜೂನ್ 20 ರೊಳಗೆ ಖರೀದಿಸ ಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
163 ಹತ್ತಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 2 ಲಕ್ಷ ಕ್ವಿಂಟಾಲ್ ಸಂಗ್ರಹಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಅದು ತಿಳಿಸಿದೆ. ರಾಜ್ಯ ಸರಕಾರದ ಮಹಾತ್ಮಾ ಜ್ಯೋತಿರಾವ್ ಫುಲೆ ಕೃಷಿ ಸಾಲ ಮನ್ನಾ ಯೋಜನೆಯಡಿಯಲ್ಲಿನ 32 ಲಕ್ಷ ಖಾತೆದಾರರ ಪೈಕಿ 19 ಲಕ್ಷ ಖಾತೆಗಳಲ್ಲಿ 12,000 ಕೋಟಿ ರೂ.ಗಳ ಸಾಲ ಮನ್ನಾ ಮೊತ್ತವನ್ನು ಜಮೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಣದ ಕೊರತೆಯಿಂದಾಗಿ ಇನ್ನೂ 11.12 ಲಕ್ಷ ಖಾತೆಗಳ 8,100 ಕೋಟಿ ರೂ. ಪಾವತಿ ಬಾಕಿ ಉಳಿದಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ.
ಸಕಾಲದಲ್ಲಿ ರೈತರಿಗೆ ಸಹಾಯ : ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಮಾತನಾಡಿದ ಠಾಕ್ರೆ, ರೈತರಿಗೆ ಬೆಳೆ ಸಾಲ ನೀಡುವ ವಿಷಯದಲ್ಲಿ ಸರಕಾರ ಆರ್‌ಬಿಐ ಸೂಚನೆಗಳನ್ನು ಅನುಸರಿಸುತ್ತಿದೆ ಎಂದರು. ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಸಮಯದಲ್ಲಿ ರೈತರನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು ಎಂದವರು ಭರವಸೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡಬಹುದಾದ ಉತ್ತಮ ಗುಣಮಟ್ಟದ ಉತ್ಪನ್ನವನ್ನು ಬೆಳೆಯುವತ್ತ ಗಮನ ಹರಿಸಬೇಕು. ಕೋವಿಡ್ -19 ಅನಂತರ ಬಹಳಷ್ಟು ಬದಲಾವಣೆಗಳು ಕಂಡುಬರಲಿವೆ. ಕೃಷಿ ಕ್ಷೇತ್ರವು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದವರು ಹೇಳಿದರು. ನಮ್ಮ ಸರಕಾರ ಶೀಘ್ರದಲ್ಲೇ ಆರು ತಿಂಗಳ ಅಧಿಕಾರವನ್ನು ಪೂರ್ಣಗೊಳಿಸಲಿದೆ. ನಾವು ಉತ್ತಮ ಬಜೆಟ್ ಮಂಡಿಸಿದ್ದೇವೆ. ಆದಾಗ್ಯೂ, ಇದಕ್ಕೆ ಕೆಲವೇ ಸಮಯದಲ್ಲಿ ನಾವು ಕೋವಿಡ್ ವೈರಸ್ ಸಾಂಕ್ರಾಮಿಕ ರೋಗದಲ್ಲಿ ಮುಳುಗಿದ್ದೇವೆ. ದೇಶದ ಆರ್ಥಿಕತೆಯು ಗಂಭೀರ ಅಪಾಯದಲ್ಲಿದೆ ಎಂದರು ಹೇಳಿದರು.