ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ರೈತರು ಹೋರಾಟ ನಡೆಸುತ್ತಿದ್ದು, ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ಹಳ್ಳಿಯಾನ ಜಾಗೃತಿ ನಡೆಸಲಾಗುವುದು ಎಂದು ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಿ ರೈತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡ ಹಳ್ಳಿಯಾನ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಈ ಭಾಗದ ರೈತರು ಸ್ಪಂದನೆ ನೀಡುತ್ತಿಲ್ಲ. ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ರೈತರು ನಿರಂತರವಾಗಿ ಹೋರಾಡುತ್ತಿದ್ದಾರೆ. ಗುಜರಾತ್, ಹರಿಯಾಣ, ರಾಜಸ್ಥಾನ ಸೇರಿದಂತೆ ಬಹುತೇಕ ರಾಜ್ಯಗಳಿಂದ ಹಳ್ಳಿಯ ರೈತರು ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲ ರಾಜ್ಯಗಳಿಂದ ಪ್ರತಿಯೊಬ್ಬ ರೈತರು ಈ ಹೋರಾಟಕ್ಕೆ ಸಾಥ್ ನೀಡಬೇಕು ಎಂದರು.
ರೈತ ವಿರೋಧಿ ಧೋರಣೆ ತಾಳಿರುವ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಮುಂದಿನ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ತಕ್ಕ ಉತ್ತರ ನೀಡಬೇಕು. ರೈತರ ಮೂರು ಕಾಯ್ದೆಗಳ ಬಗ್ಗೆ ಹಳ್ಳಿಯಲ್ಲಿರುವ ಪ್ರತಿಯೊಬ್ಬ ರೈತರಿಗೆ ಮನವರಿಕೆ ಮಾಡಬೇಕು. ದೆಹಲಿ ರೈತರ ಹೋರಾಟ ಒಂದು ವರ್ಷ ಕಳೆಯುತಿದ್ದರೂ ಆಡಳಿತರೂಢ ಬಿಜೆಪಿಗೆ ಕಾಣಿಸದಿರುವುದು ನಿಜಕ್ಕೂ ದುರ್ದೈವ ಎಂದರು. ಈ ಸಂದರ್ಭದಲ್ಲಿ ಜಿಂದಪ್ಪ, ಮಾರೆಪ್ಪ ಹರಿವಿ, ಎಂ.ಆರ್.ಬೇರಿ, ಖಾಜಾ ಅಸ್ಲಂ ಸೇರಿ ಅನೇಕರಿದ್ದರು.