Advertisement
ಹವಾಮಾನ ವೈಪರೀತ್ಯದಿಂದ ಹಿಂದಿನಂತೆ ಮಳೆಗಾಲ ಆರಂಭವಾಗುತ್ತಿಲ್ಲ. ವಾಡಿಕೆಯಂತೆ ಮಳೆ ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬೇಸಗೆಯಲ್ಲೇ ಆರಂಭವಾದರೆ, ಚಳಿಗಾಲದಲ್ಲೂ ಸುರಿಯುತ್ತಿದೆ. ಇದರಿಂದ ರೈತರು, ಜನಸಾಮಾನ್ಯರು ತಮ್ಮ ಕೃಷಿ ಪದ್ಧತಿ ಜತೆಗೆ ಜೀವನವನ್ನು ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
Related Articles
Advertisement
ಈ ಅನಿಶ್ಚಿತ ಮಳೆ ನಷ್ಟದಿಂದ ಪಾರಾಗಲು ರೈತರು ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಮೊದಲನೆದಾಗಿ ಪಾಲಿ ಹೌಸ್‌ನಲ್ಲಿ ಬೇಸಾಯ ಮಾಡುವುದು, ಈ ಬಾರಿ ಪಾಲಿಹೌಸ್‌ನಲ್ಲಿ ಟೊಮೆಟೋ, ಬದನೆ, ಮೆಣಸಿನಕಾಯಿ, ಇತರ ತರಕಾರಿ, ಹೂ ಬೆಳೆದ ರೈತರಿಗೆ ಬಂಪರ್ ಬೆಲೆ ಸಿಕ್ಕಿದೆ. ಹೀಗಾಗಿ, ಪಾಲಿಹೌಸ್‌ನಲ್ಲಿ ಎಲ್ಲ ಬೆಳೆ ಬೆಳೆಯಲಾಗದಿದ್ದರೂ ಸಾಧ್ಯವಿರುವ ಬೆಳೆ ಬೆಳೆದು ರೈತರು ಮಳೆಯಿಂದ ನಷ್ಟದಿಂದ ಪಾರಾಗುವುದರ ಜತೆಗೆ ಆ ಸಮಯದಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು.
ಸಮಗ್ರ ಕೃಷಿ ಪದ್ಧತಿ:
ರಾಜ್ಯದ ಬಹುತೇಕ ರೈತರು ಒಂದೇ ಬೆಳೆಯನ್ನೇ ಬೆಳೆಯುತ್ತಾರೆ. ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದರೆ ಇಡೀ ಬೆಳೆ ನಾಶವಾಗಿ, ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಾರೆ. ಹೀಗಾಗಿ ರೈತರು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಸಾಕಷ್ಟು ಅನುಕೂಲ ಪಡೆಯಬಹುದು. ಈಗ ನೂರು ಮಾವಿನ ಮರ ಬೆಳೆಯುವ ಜಾಗದಲ್ಲಿ ಹತ್ತು ಮಾವಿನ ಜತೆಗೆ ತೆಂಗು, ಅಡಿಕೆ, ಏಕ, ದ್ವಿದಳ ಧಾನ್ಯ, ಸ್ವಲ್ಪ ಮಟ್ಟಿಗೆ ತರಕಾರಿ ಬೆಳೆದುಕೊಂಡರೆ ಅನುಕೂಲವಾಗುತ್ತದೆ. ಇದರ ಜತೆಗೆ ಪೌಲಿó, ಹೈನುಗಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಹಂದಿ, ಕುರಿ, ಜೇನು, ಮೀನು ಸಾಕಣೆ ಹೀಗೆ ರೈತರು ತಮಗೆ ಯಾವುದು ಸೂಕ್ತ ಎನಿಸುತ್ತದೆಯೋ ಅದನ್ನು ಆಯ್ಕೆ ಮಾಡಿಕೊಂಡು ಸಮಗ್ರ ಕೃಷಿ ಪದ್ಧತಿ ಅಳವಡಿ ಕೊಂಡರೆ ಒಂದರಲ್ಲಿ ನಷ್ಟ ಅನುಭವಿಸಿದರೆ, ಮತ್ತೂಂದರಲ್ಲಿ ಹೆಚ್ಚಿನ ಲಾಭ ಪಡೆದು ನಷ್ಟ ಸರಿದೂಗಿಸಿಕೊಳ್ಳಬಹುದು.
ಬಹುವಾರ್ಷಿಕ ಬೆಳೆಗೆ ಆದ್ಯತೆ ನೀಡಿ:
ಇತ್ತೀಚಿಗೆ ಸುರಿದ ಅನಿಶ್ಚಿತ ಮಳೆಯಿಂದ ಹೆಚ್ಚು ನಷ್ಟ ಅನುಭವಿಸಿದ್ದು, ಕೃಷಿ ಬೆಳೆಗಾರರು. ತತ್ಕಾಲಕ್ಕೆ ತೋಟಗಾರಿಕ ಬೆಳೆಗಳಿಗೆ ಅಲ್ಪ ಮಟ್ಟಿನ ತೊಂದರೆ ಆದರೂ ಅದನ್ನು ಮುಂದಿನ ದಿನಗಳಲ್ಲಿ ಸರಿದೂಗಿಸಿಕೊಳ್ಳಬಹುದು. ಆದರೆ ಕೃಷಿ ಬೆಳೆಗಳು ಮಳೆ ಹೆಚ್ಚಾದರೆ ಅಥವಾ ಕಡಿಮೆ ಆದರೆ ಸಂಪೂರ್ಣ ನಾಶವೇ ಆಗುತ್ತದೆ. ಹೀಗಾಗಿ ಅಲ್ಪ ಸ್ವಲ್ಪ ನೀರಾವರಿ ಸೌಲಭ್ಯ ಇರುವವರು, ವಾರ್ಷಿಕ ಬೆಳೆಗಳ ಜತೆಗೆ ಬಹುವಾರ್ಷಿಕ ಬೆಳೆಯನ್ನೂ ಬೆಳೆಯುವುದರಿಂದ ಸ್ವಲ್ಪ ಮಟ್ಟಿಗೆ ಅನುಕೂಲ ಪಡೆಯಬಹುದು.
ಎಲ್ಲರೂ ಒಂದೇ ಬೆಳೆ ಬೆಳೆಯಬಾರದು :
ಶಿವಮೊಗ್ಗ ಜಿಲ್ಲೆಯೊಂದರಲ್ಲೇ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿದ್ದ ಅಡಿಕೆ ಬೆಳೆ, ಈಗ ಲಕ್ಷ ಹೆಕ್ಟೇರ್ ದಾಟಿದೆ. ಹಾಗೆಯೇ ಮೆಕ್ಕೆಜೋಳ, ಶುಂಠಿ ಬೆಳೆಯುವ ಪ್ರದೇಶವೂ ಹೆಚ್ಚಾಗಿದೆ. ಹೀಗಾಗಿ ಎಲ್ಲ ರೈತರು, ಒಂದೇ ಬೆಳೆ ಬೆಳೆಯುವುದರಿಂದ ಹವಾಮಾನ ವೈಪರೀತ್ಯದಿಂದ ಒಮ್ಮೆಲೆ ಎಲ್ಲರೂ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ರೈತರು, ದೂರದೃಷ್ಟಿ, ಬೆಲೆ ಏರುಪೇರು ನೋಡಿಕೊಂಡು ಬೆಳೆ ಬೆಳೆಯುವುದರಿಂದ ಲಾಭ ಪಡೆಯಬಹುದು.
-ಡಾ| ನಾಗರಾಜಪ್ಪ ಅಡಿವೆಪ್ಪ, ಶಿವಮೊಗ್ಗ ಕೃಷಿ ವಿವಿ ಪ್ರಾಧ್ಯಾಪಕ