ಬೆಳಗಾವಿ: ಕಳೆದ ವರ್ಷದ ಪ್ರಕೃತಿ ವಿಕೋಪದಿಂದ ಉಂಟಾದ ಅಪಾರ ಹಾನಿಯಿಂದ ಇನ್ನೂ ರೈತರು ಚೇತರಿಸಿಕೊಂಡಿಲ್ಲ. ಅಷ್ಟರಲ್ಲಿ ಮಹಾಮಾರಿ ಕೋವಿಡ್ 19 ಒಕ್ಕರಿಸಿದ್ದರಿಂದ ಈ ಸಮುದಾಯದ ನೆಮ್ಮದಿಯನ್ನೇ ಕಸಿದುಕೊಂಡಿದೆ.
ಉತ್ತಮ ಮಳೆಯಿಂದ ಕೈತುಂಬಾ ಬೆಳೆ ಕಂಡಿರುವ ರೈತರಿಗೆ ಅದರ ಲಾಭ ಪಡೆದುಕೊಳ್ಳುವ ಅದೃಷ್ಟ ಇಲ್ಲ. ಒಳ್ಳೆಯ ಬೆಳೆ ನೋಡಿ ಆನಂದ ಪಡುವಂತಿಲ್ಲ. ಬದಲಾಗಿ ಹೊಲದಲ್ಲಿ ರಾಶಿ-ರಾಶಿಯಾಗಿ ಕಾಣುತ್ತಿರುವ ಬೆಳೆ ಮಾರಾಟವಾಗದೆ ನಾಶವಾಗುತ್ತಿರುವುದನ್ನು ನೋಡಿ ಕಣ್ಣೀರು ಬರುತ್ತಿದೆ. ಅನೇಕ ಕಡೆ ಸ್ವತಃ ರೈತರೇ ಅಸಹಾಯಕರಾಗಿ ತಮ್ಮ ಬೆಳೆಯ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಬೆಳೆನಾಶ ಮಾಡಿದ್ದಾರೆ. ಇಷ್ಟೆಲ್ಲಾ ನಷ್ಟ ಅನುಭವಿಸಿ ನೆಮ್ಮದಿ ಕಳೆದುಕೊಂಡಿದ್ದರೂ ಕೃಷಿ ಚಟುವಟಿಕೆ ಮಾತ್ರ ನಿಂತಿಲ್ಲ. ಬದಲಾಗಿ ಜೂನ್‌ದಿಂದ ಆರಂಭವಾಗುವ ಮುಂಗಾರು ಹಂಗಾಮಿಗೆ ಅದರ ಮಧ್ಯೆ ಬರುವ ಅಡ್ಡ ಮಳೆಗೆ ಈಗಿನಿಂದಲೇ ಜಮೀನು ಹದ ಮಾಡಿಕೊಳ್ಳುವ ಕೆಲಸ ಭರದಿಂದ ನಡೆದಿದೆ.
ಸವದತ್ತಿ, ರಾಮದುರ್ಗ, ಬೈಲಹೊಂಗಲ ಮೊದಲಾದ ಕಡೆಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆದಿವೆ.ಲಾಕ್‌ಡೌನ್ ಆದೇಶದ ಪರಿಣಾಮ ಜಾಗೃತಿಯಿಂದ ಕೃಷಿ ಕೆಲಸ ಆರಂಭ ಮಾಡಿದ್ದಾರೆ. ಹೊಲದಲ್ಲೂ ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಭೂಮಿ ಹದ ಮಾಡುತ್ತಿದ್ದಾರೆ. ಜಮೀನು ಹದ ಮಾಡಿಕೊಳ್ಳುವ ಕಾರ್ಯ ಬಹುತೇಕ ಕಡೆ ಆರಂಭವಾಗಿದೆ. ಎಲ್ಲಿಯೂ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿಲ್ಲ. ಆದರೆ ಮೊದಲಿನ ಉತ್ಸಾಹ ರೈತರಲ್ಲಿ ಕಾಣುತ್ತಿಲ್ಲ. ಎಷ್ಟೇ ಕಷ್ಟ ಇದ್ದರೂ ಹೊಲದ ಕೆಲಸ ಬಿಡುವಂತಿಲ್ಲ. ಮೊದಲು ಮಳೆ ಈಗ ಕೋವಿಡ್ 19 ವೈರಸ್ ನಮ್ಮನ್ನು ಹಿಂಡಿ ಹಿಪ್ಪಿ ಮಾಡಿದೆ. ನಷ್ಟದ ಮೇಲೆ ನಷ್ಟವಾಗುತ್ತಿದೆ. ಸರಕಾರವೂ ನೆರವಿಗೆ ಧಾವಿಸಲಿಲ್ಲ. ಮುಂದಿನ ದಾರಿ ಕಾಣಿಸುತ್ತಿಲ್ಲ ಎಂದು ರಾಮದುರ್ಗದ ರೈತ ಮಲ್ಲಿಕಾರ್ಜುನ ಹೊಸಮನಿ ನೋವಿನಿಂದ ಹೇಳಿದರು.
ಈಗ ಲಾಕ್‌ಡೌನ್ ಇರುವದರಿಂದ ನಮಗೆ ಬೀಜ ಹಾಗೂ ಗೊಬ್ಬರವನ್ನು ತರುವದು ದೊಡ್ಡ ಸಮಸ್ಯೆಯಾಗಿದೆ. ವಾಹನ ಸಂಚಾರ ಸಮಸ್ಯೆ ಇದೆ. ಯಾವುದೇ ಕಾರಣಕ್ಕೂ ಮುಂಗಾರು ಹಂಗಾಮು ವಿಳಂಬ ಮಾಡುವಂತಿಲ್ಲ. ಸಕಾಲಕ್ಕೆ ಬಿತ್ತನೆ ಆಗಲೇಬೇಕು. ಆದ್ದರಿಂದ ಸರಕಾರ ರೈತ ಸಂಪರ್ಕ ಕೇಂದ್ರದ ಬದಲು ಗ್ರಾಮ ಮಟ್ಟದಲ್ಲಿ ಇಲ್ಲವೇ ಪಂಚಾಯತ್‌ಗಳಲ್ಲಿ ಬೀಜ ಹಾಗೂ ಗೊಬ್ಬರದ ವಿತರಣೆ ಮಾಡಬೇಕು ಎಂಬುದು ರೈತರ ಆಗ್ರಹ.
ಮುಂದಿನ ತಿಂಗಳಲ್ಲಿ ಬಿತ್ತನೆ ಕಾರ್ಯಕ್ಕೆ ಚಾಲನೆ ಸಿಗಲಿದೆ. ಜಿಲ್ಲೆಯಲ್ಲಿ ಈ ಬಾರಿ 63,650 ಕ್ವಿಂಟಲ್ ವಿವಿಧ ಬಿತ್ತನೆ ಬೀಜಗಳ ಬೇಡಿಕೆ ಇದೆ. ಅದರಲ್ಲಿ ಸೋಯಾಬಿನ್ ಬೀಜವೊಂದಕ್ಕೆ 45 ಸಾವಿರ ಕ್ವಿಂಟಲ್ ಬೇಡಿಕೆ ಬಂದಿದೆ. ಉಳಿದಂತೆ ಮೆಕ್ಕೆಜೋಳ 12 ಸಾವಿರ ಕ್ವಿಂಟಲ್, ಭತ್ತ 2,500 ಕ್ವಿಂಟಲ್, ಜೋಳ 700 ಕ್ವಿಂಟಲ್, ಶೇಂಗಾ 400 ಕ್ವಿಂಟಲ್, ಸಜ್ಜೆ-600 ಕ್ವಿಂಟಲ್, ಹೆಸರು-1,100 ಕ್ವಿಂಟಲ್ ಹಾಗೂ ಉದ್ದು-500 ಕ್ವಿಂಟಲ್ ಬೀಜಗಳ ಬೇಡಿಕೆ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಉಪನಿರ್ದೆಶಕ ಎಚ್.ಡಿ. ಕೋಳೇಕರ. ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ಸಹ ಯಾವುದೇ ಕೊರತೆ ಇಲ್ಲ. ಸೆಪ್ಟಂಬರ್‌ವರೆಗೆ 2.44 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಬೇಕು. ಈಗ ನಮ್ಮಲ್ಲಿ 1.10 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಜಿಲ್ಲೆಯ 35 ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜ ಹಾಗೂ ರಸಗೊಬ್ಬರದ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರಕಾಪಾಡಿಕೊಂಡು ರೈತರಿಗೆ ಕೃಷಿ ಪರಿಕರಗಳು ಮತ್ತು ಬೀಜ-ಗೊಬ್ಬರಗಳನ್ನು ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಒಟ್ಟು 1,435 ಕೃಷಿ ಪರಿಕರಗಳ ಅಂಗಡಿಗಳಿಗೆ ಪಾಸ್ ವಿತರಿಸಲಾಗಿದೆ ಎಂದು ಉಪನಿರ್ದೇಶಕ ಕೊಳೇಕರ ಹೇಳಿದರು.
ಕೋವಿಡ್ 19 ವೈರಸ್ ನಿಯಂತ್ರಿಸಲು ಜಾರಿಗೆ ಮಾಡಲಾಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ, ಮತ್ತಿತರ ಸಾಮಗ್ರಿಗಳ ಪೂರೈಕೆ ಅಥವಾ ಸಾಗಾಣಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ. ಎಲ್ಲ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ. ರೈತರೂ ಸಹ ಇದನ್ನು ಪಾಲಿಸುತ್ತಿದ್ದಾರೆ.
– ಜಿಲಾನಿ ಮೊಖಾಶಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಹಂಗಾಮು ಸಿದ್ಧತೆ ಆರಂಭವಾಗಿದೆ. ಸಾಕಷ್ಟು ನಷ್ಟವಾಗಿದ್ದರೂ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಬೀಜ ಹಾಗೂ ಗೊಬ್ಬರದ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ರೈತರಿಗೆ ಬೀಜ ಹಾಗೂ ಗೊಬ್ಬರವನ್ನು ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಪೂರೈಸಬೇಕು. –
ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ಅಧ್ಯಕ
-ಕೇಶವ ಆದಿ