Advertisement

ಭಿಕ್ಷೆ ಬೇಡುವ ಕೈಗಳಿಗೆ ಕೃಷಿ ಕಾರ್ಯ

10:22 PM Dec 04, 2021 | Team Udayavani |

ದಾವಣಗೆರೆ: ಭಿಕ್ಷೆಗಾಗಿ ಅಂಗಲಾಚುತ್ತಿದ್ದ ಕೈಗಳು ಈಗ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿವೆ! ಇಂಥದ್ದೊಂದು ಮಾದರಿ ಬದಲಾವಣೆ ಮೂಲಕ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವವರು ದಾವಣಗೆರೆ ಸಮೀಪದ ತುರ್ಚಘಟ್ಟ ಗ್ರಾಮದ ನಿರಾಶ್ರಿತರ  ಕೇಂದ್ರದ ನಿವಾಸಿಗಳು.  ಇಲ್ಲಿರುವ ಬಹುತೇಕರು  ಕೇಂದ್ರಕ್ಕೆ ಬರುವ ಮೊದಲು ಭಿಕ್ಷೆ ಬೇಡುತ್ತಿದ್ದರು. ಕೇಂದ್ರದಲ್ಲಿ ಆಶ್ರಯ ಪಡೆದ ಬಳಿಕ ಅವರೆಲ್ಲರೂ ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಪಾಠ ಕಲಿಯುತ್ತಿದ್ದಾರೆ.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ತುರ್ಚ ಘಟ್ಟದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಪ್ರಸ್ತುತ  ಮಹಿಳೆಯರಿ ಸಹಿತ 226 ಮಂದಿಯಿದ್ದಾರೆ. ರಾಜ್ಯದವರಲ್ಲದೆ ತಮಿಳುನಾಡು, ಆಂಧ್ರ, ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಲ, ಪಂಜಾಬ್‌ ಸಹಿತ  ವಿವಿಧ ಭಾಗಗಳಿಂದ ಆಗಮಿಸಿದ ನಿರಾಶ್ರಿತರೂ ಇದ್ದಾರೆ.  ಭಿಕ್ಷಾಟನೆ ನಿರ್ಮೂಲ ಹಾಗೂ ನಿರ್ಗತಿಕರಿಗೆ ಆಶ್ರಯ ನೀಡುವ ಉದ್ದೇಶದಿಂದ ತೆರೆಯಲಾಗಿರುವ ಈ ಕೇಂದ್ರ ಅನಾಥರ ಪಾಲಿಗೆ ಅನ್ನಾರೋಗ್ಯ ಧಾಮವಾಗಿದೆ.

ಕೃಷಿ ಕೈಂಕರ್ಯ :

ಈ ಕೇಂದ್ರಕ್ಕೆ ಸೇರಿ ವಾಪಸ್‌ ಹೋಗುವಾಗ ಸ್ವಾವಲಂಬಿ ಬದುಕಿಗೆ ಇವರನ್ನು ಸಿದ್ಧಪಡಿಸಲಾಗುತ್ತದೆ. ಇವರನ್ನು ಕೇಂದ್ರದ 10 ಎಕರೆ ಪ್ರದೇಶದಲ್ಲಿ  ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಕೃಷಿ- ಹೈನುಗಾರಿಕೆ ಕೆಲಸ ಮಾಡಲು ದೈಹಿಕವಾಗಿ ಸಮರ್ಥರಿದ್ದವರು ಹಾಗೂ ಆಸಕ್ತರನ್ನು ಗುರುತಿಸಿ ಅವರನ್ನು ಮಾತ್ರ  ಇದರ‌ಲ್ಲಿ ತೊಡ ಗಿಸಿಕೊಳ್ಳಲಾಗುತ್ತಿದೆ. ಕೇಂದ್ರದ 50ಕ್ಕೂ ಹೆಚ್ಚು ನಿರಾಶ್ರಿತರು ಕೃಷಿ- ಹೈನುಗಾರಿಕೆ ಕೆಲಸದಲ್ಲಿ  ತೊಡಗಿಸಿಕೊಂಡಿದ್ದಾರೆ. ಪರಿಣಾಮವಾಗಿ ಕೇಂದ್ರದ ಸುತ್ತ ಇರುವ ಕೃಷಿ ಭೂಮಿಯಲ್ಲಿ ಟೊಮೆಟೋ, ಮೂಲಂಗಿ, ಹುರುಳಿ, ಸೌತೆಕಾಯಿ, ಬೆಂಡೆಕಾಯಿಯಂಥ ವಿವಿಧ ತರಕಾರಿ ಜತೆಗೆ ಬಾಳೆ, ಸೀತಾಫಲ, ಮಾವು, ಅಡಿಕೆ, ಗುಲಾಬಿ, ಮಾವು, ತೊಗರಿ, ಮೆಣಸು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನೇ ಕೇಂದ್ರದ ಆಶ್ರಿತರ ಊಟಕ್ಕೆ ನೀಡಲಾಗುತ್ತಿದೆ. ಕೇಂದ್ರದಲ್ಲಿ ಏಳೆಂಟು ಹಸುಗಳನ್ನು ಸಾಕಲಾಗುತ್ತಿದೆ.

ಕೇಂದ್ರದ ಕೆಲವು ಸಶಕ್ತರನ್ನು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಆಶ್ರಯ ಪಡೆದವರಲ್ಲಿ ಹಲವರು ಕೃಷಿ ಕೆಲಸದಲ್ಲಿ ತಮಗೆ ಎಷ್ಟು ಸಾಧ್ಯವೋ ಅಷ್ಟು ತೊಡಗಿಸಿಕೊಳ್ಳುತ್ತಾರೆ. ಭಿಕ್ಷುಕರೇ ಹೆಚ್ಚಾಗಿ ಕೇಂದ್ರದಲ್ಲಿ ಆಶ್ರಯ ಪಡೆಯುವುದರಿಂದ ಅವರಲ್ಲಿ ಸ್ವಾವಲಂಬಿ ಜೀವನ ನಡೆಸಲು ಇದು ಪ್ರೇರಣೆಯೂ ಆಗಿದೆ. ಕೇಂದ್ರದಲ್ಲಿ ಅಗರಬತ್ತಿ ತಯಾರಿ ಘಟಕ ಸ್ಥಾಪಿಸುವ ಯೋಚನೆಯೂ ಇದೆ.ನಳಿನಿ ಬಿ., ಪ್ರಭಾರಿ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ತುರ್ಚಘಟ್ಟ, ದಾವಣಗೆರೆ

Advertisement

 

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next