Advertisement

ಹವಾಮಾನ ಮುನ್ಸೂಚನೆ ವರದಾನ 

11:53 AM Feb 15, 2019 | |

ಧಾರವಾಡ: ಅಕಾಲಿಕ ಮಳೆ, ಸಿಡಿಲು, ನೆರೆ ಹಾವಳಿ, ಆಲಿಕಲ್ಲು, ಮಳೆಗಳಿಂದಾಗಿ ಕೃಷಿಕರು ಬೆಳೆ ನಷ್ಟದಿಂದ ಹಾನಿ ಅನುಭವಿಸುತ್ತಿದ್ದಾರೆ. ಕೃಷಿಕರಿಗೆ, ಕೃಷಿ ಕಾರ್ಯನಿರತರಿಗೆ ಸಕಾಲಕ್ಕೆ ಅಗತ್ಯ ಮಾಹಿತಿ ಮತ್ತು ಮುಂಜಾಗ್ರತಾ ಕ್ರಮಗಳನ್ನು ತಿಳಿಸಲು ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ. ಇದು ಉತ್ತರ ಕರ್ನಾಟಕ ರೈತರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಸಚಿವ ಡಾ| ಹರ್ಷವರ್ಧನ ಹೇಳಿದರು.

Advertisement

ಕೃಷಿ ವಿಶ್ವವಿದ್ಯಾಲಯ ಆವರಣದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸ್ಥಾಪಿಸಿರುವ ಉತ್ತರ ಕರ್ನಾಟಕ ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ನೂತನ ಕೇಂದ್ರದಿಂದ ಪ್ರತಿ ರೈತರಿಗೆ ಹವಾಮಾನ ಬದಲಾವಣೆ, ವೈಪರೀತ್ಯಗಳ ಕುರಿತು ಕಾಲಕಾಲಕ್ಕೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಾಗುತ್ತದೆ. ಮಾಧ್ಯಮಗಳ ಸಹಾಯದಿಂದ ಕೃಷಿ ಕಾರ್ಯಗಳಿಗೆ ಅಗತ್ಯವಿರುವ ಹವಾಮಾನ ವರದಿಯನ್ನು ಸಕಾಲಕ್ಕೆ ಪ್ರಚುರಪಡಿಸಲಾಗುತ್ತದೆ ಎಂದು ಹೇಳಿದರು.

ಹವಾಮಾನ ವೈಪರೀತ್ಯಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಜಾನುವಾರುಗಳು, ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಇಂತಹ ನಷ್ಟಗಳನ್ನು ಕಡಿಮೆ ಮಾಡಲು ಸಮಯಕ್ಕನುಗುಣವಾಗಿ ಮುನ್ನೆಚ್ಚರಿಕೆಯನ್ನು ಸರ್ಕಾರ ಮತ್ತು ರೈತರಿಗೆ ಸೂಕ್ತ ಮಾಧ್ಯಮದಿಂದ ತಲುಪಿಸಲು ಈ ಕೇಂದ್ರದಿಂದ ಕ್ರಮವಹಿಸಲಾಗುತ್ತದೆ ಎಂದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ, ಕೃಷಿಕರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಕೃಷಿ ಸಮ್ಮಾನ ಮೂಲಕ ಸಣ್ಣ ಮತ್ತು ಮಧ್ಯಮ ರೈತರಿಗೆ ಪ್ರತಿ ವರ್ಷ ಆರು ಸಾವಿರ ನೀಡುವ ಕ್ರಮ ಕೈಗೊಂಡಿದೆ. ಬಿತ್ತನೆ ಕೊಯ್ಲು ಸಂದರ್ಭಗಳಲ್ಲಿ ರೈತರಿಗೆ ಆರ್ಥಿಕ ಸಹಾಯವಾಗಲಿ ಎಂಬ ಸದುದ್ದೇಶದಿಂದ ಈ ಯೋಜನೆ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸಹಾಯಧನ ಮೊತ್ತ ಹೆಚ್ಚಳವಾಗುತ್ತದೆ. ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರದಿಂದ ರೈತರಿಗೆ ಸಕಾಲಕ್ಕೆ ಹವಾಮಾನದ ನಿಖರ ಮಾಹಿತಿ ನೀಡುವ ಮೂಲಕ ಕೃಷಿ ಕಾರ್ಯಗಳಿಗೆ ನೆರವಾಗಲಿದೆ ಎಂದು ಹೇಳಿದರು.

ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ| ಎಂ.ಬಿ. ಚಟ್ಟಿ ಮಾತನಾಡಿದರು. ಭಾರತೀಯ ಭೂವಿಜ್ಞಾನ ಮಂತ್ರಾಲಯದ ಕಾರ್ಯದರ್ಶಿ ಡಾ| ಎಂ.ಎನ್‌. ರಾಜೀವ್‌, ಭಾರತ ಹವಾಮಾನ ಇಲಾಖೆ ಮಹಾನಿರ್ದೇಶಕ ಡಾ| ಕೆ.ಜೆ. ರಮೇಶ, ಡಾ| ಜಿ.ಎನ್‌. ಶ್ರೀನಿವಾಸ ರೆಡ್ಡಿ, ಡಾ| ಎಸ್‌. ಬಾಲಚಂದ್ರನ್‌, ಡಾ| ಕೆ.ಕೆ. ಸಿಂಗ್‌, ಕೃಷಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯರು, ಪ್ರಾಧ್ಯಾಪಕರು, ಪಾಲಿಕೆ ಸದಸ್ಯರು, ರೈತರು, ರೈತ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Advertisement

ದೇವೇಗೌಡರ ಬಗ್ಗೆ ಪ್ರೀತಂಗೌಡ ಮಾತನಾಡಿದ್ದರೆ ಅದು ತಪ್ಪು. ಇದೇ ವೇಳೆ ಪ್ರೀತಂಗೌಡ ಮನೆ ಮೇಲೆ ಜೆಡಿಎಸ್‌ ಕಾರ್ಯಕರ್ತರು ದಾಳಿ ಮಾಡಿದ್ದು ಕೂಡ ತಪ್ಪು. ಇದನ್ನು ಸಿಎಂ, ದೇವೇಗೌಡ ಮತ್ತು ರೇವಣ್ಣ ತಪ್ಪು ಅಂತಾ ಹೇಳಲಿ.
ಪ್ರಹ್ಲಾದ ಜೋಶಿ, ಸಂಸದ

ಕಾಲ್‌ಸೆಂಟರ್‌ ಮೂಲಕ ಮಾಹಿತಿಯನ್ನು ರೈತರಿಗೆ ಮುಟ್ಟಿಸುವ ಮತ್ತು ಹೆಚ್ಚಿನ ನಿಖರತೆಯಿಂದ ಹವಾಮಾನ ಮುನ್ಸೂಚನೆ, ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಕೃಷಿಕರಿಗೆ ತಲುಪಿಸಲು ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ನೆರವಾಗಲಿದೆ.
ಡಾ| ಹರ್ಷವರ್ಧನ,
ಕೇಂದ್ರ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next