ಮುದಗಲ್ಲ: ಕುಡುಗೋಲು, ಕೊಡಲಿ, ಬೆಡಗಾ,ಕುಂಟೆ ಕುಡ, ತಾಳ, ಪಿಕಾಸಿ, ಗುದ್ದಲಿ, ಚಾಕು, ಕೋತಾ, ಸಲಿಕೆ, ಬಿತ್ತಣಿಕೆ ತಯಾರಿಸುವುದಲ್ಲದೇ, ಹಳೆಯದನ್ನು ಹರಿತಗೊಳಿಸುವ ಕೆಲಸ ವಲಸಿಗ ಕಮ್ಮಾರರಿಂದ ಭರದಿಂದ ನಡೆಯುತ್ತಿದೆ.
ಮುದಗಲ್ಲ ಸಮೀಪದ ಛತ್ತರ, ತಲೇಖಾನ, ನಾಗಲಾಪೂರ, ಉಳಿಮೇಶ್ವರ, ನಾಗರಹಾಳ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರಸ್ತೆ ಬದಿ, ಜನ ಸೇರುವ ಸ್ಥಳ, ಬಸ್ ನಿಲ್ದಾಣಗಳ ಹತ್ತಿರ ತಾತ್ಕಾಲಿಕ ಕುಲುಮೆಗಳನ್ನು ಹಾಕಿಕೊಂಡು ಕೃಷಿಗೆ ಅಗತ್ಯ ಸಲಕರಣೆಗಳನ್ನು ತಯಾರು ಮಾಡಿಕೊಡುತ್ತಿದ್ದಾರೆ.
ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ರಾಜ್ಯಗಳಿಂದ ವಲಸೆ ಬಂದ ಕುಲುಮೆ ಕುಟುಂಬಗಳು ಒಂದಿಷ್ಟು ದಿನ ಇಲ್ಲಿನ ಗ್ರಾಮಗಳಲ್ಲಿ ಟೆಂಟ್ ಹಾಕಿಕೊಂಡು ರೈತರಿಗೆ ಕೃಷಿಗೆ ಬೇಕಾದ ಪರಿಕರಗಳನ್ನು ಸಿದ್ಧಪಡಿಸುತ್ತಾರೆ. ಕೆಲ ರೈತರು ಕುಲುಮೆ ಸ್ಥಳಕ್ಕೇ ಬಂದು ತಮಗೆ ಬೇಕಾಗುವ ಕೃಷಿ ಸಲಕರಣೆಗಳನ್ನು ಖರೀದಿಸಿದರೆ, ಇನ್ನೂ ಕೆಲ ರೈತರು ಮನೆಮನೆಗೆ ತಂದು ಮಾರಾಟ ಮಾರುವವರಿಂದ ಖರೀದಿಸುತ್ತಾರೆ.
ಮಾರಾಟ ಮಾಡಿ ಬರುವ ಹಣದಲ್ಲಿ ವಲಸೆ ಕಮ್ಮಾರರು ತಮ್ಮ ಉಪಜೀವನ ನಡೆಸುತ್ತಾರೆ. ಸಂಚಾರಿ ಜೀವನದಲ್ಲಿಯೇ ತೃಪ್ತಿ ಕಾಣುವ ಕಮ್ಮಾರರು ವರ್ಷದಲ್ಲಿ 9 ತಿಂಗಳು ಸಂಚಾರಿ ಜೀವನದಲ್ಲಿಯೇ ಕಾಲ ಕಳೆಯುತ್ತೇವೆಂದು ಎಂದು ಹೇಳುತ್ತಾರೆ ಮಧ್ಯಪ್ರದೇಶದ ಕಮ್ಮಾರ ಗೊರೇಲಾ ಒಂಕಾರ್ ಸಿಂಗ್. ವಲಸೆ ಕಮ್ಮಾರರು ಕೃಷಿಗೆ ಬೇಕಾದ ಸಲಕರಣೆಗಳನ್ನು ತ್ವರಿತವಾಗಿ ಕೊಡುವುದರಿಂದ ಕೃಷಿಗೆ ಬಹಳಷ್ಟು ಅನುಕೂಲವಾಗಿದೆ ಎನ್ನುತ್ತಾರೆ ಛತ್ತರ ಗ್ರಾಮದ ರೈತ ನಿಂಗಪ್ಪ, ಗೊವಿಂದಪ್ಪ, ವೆಂಕಟೇಶ.
ದೇವಪ್ಪ ರಾಠೊಡ