Advertisement

ಗದ್ದೆಗಳಲ್ಲಿ ಕೃಷಿ ಕ್ರಾಂತಿ

11:49 PM May 11, 2019 | mahesh |

ಸಂಪೂರ್ಣ ಹಟ್ಟಿ ಗೊಬ್ಬರವನ್ನು ಬಳಸಿ ಸಾವಯವ ಕೃಷಿ ಕಾರ್ಯ ನಡೆಸಿ ಉತ್ತಮ ಫ‌ಸಲನ್ನು ಪಡೆಯುತ್ತಿದ್ದಾರೆ ಇಲ್ಲೊಬ್ಬರು ಯಶಸ್ವಿ ಕೃಷಿಕರು. ಉಡುಪಿ ಜಿಲ್ಲೆಯ ಬೆಳ್ಳೆ ಗ್ರಾಮದ ದಿಂಡಿಬೆಟ್ಟು ಗಂಗಾಧರ ಆಚಾರ್ಯ ಅವರೇ ಸಾವಯವ ಗೊಬ್ಬರ ಬಳಸಿ ಭತ್ತದ ಬೆಳೆ ಬೆಳೆಸಿ ಯಶಸ್ಸು ಕಂಡವರು.

Advertisement

ಸುಮಾರು 2 ಎಕ್ರೆಯಲ್ಲಿ ಭತ್ತದ ಕೃಷಿ ನಡೆಸುವ ಮೂಲಕ ಅವರು ಕೃಷಿ ಪ್ರೀತಿಯನ್ನು ಮೆರೆದಿದ್ದಾರೆ. ಒಟ್ಟು ಸುಮಾರು 10 ಎಕ್ರೆ ಭೂಮಿಯನ್ನು ಹೊಂದಿರುವ ಅವರು 6 ಎಕ್ರೆಯಲ್ಲಿ ಅಡಿಕೆ, ತೆಂಗು ತೋಟವನ್ನು ಮಾಡಿದ್ದು, 2 ಎಕ್ರೆ ಸ್ಥಳವನ್ನು ಹಟ್ಟಿ ಗೊಬ್ಬರದ ಸೊಪ್ಪಿಗಾಗಿ ಉಳಿಸಿಕೊಂಡು ಬಂದಿದ್ದಾರೆ. ಉಳಿದಂತೆ 2 ಎಕ್ರೆ ಪ್ರದೇಶದಲ್ಲಿ ಒಂದು ಬೆಳೆಯಾಗಿ ಭತ್ತದ ಕೃಷಿಯನ್ನು ಪತ್ನಿ ಸಂಧ್ಯಾ, ಮಕ್ಕಳಾದ ಶ್ರವಣ್‌, ಶ್ರೇಯಸ್‌ ಜತೆಗೂಡಿ ಮುನ್ನಡೆಸುತ್ತಾ ಬಂದಿದ್ದಾರೆ. ರಾಸಾಯನಿಕ ಗೊಬ್ಬರವನ್ನು ಇವರು ಬಳಸುವುದಿಲ್ಲ.

ಗದ್ದೆಯನ್ನು ನಾಟಿಗಿಂತ 15 ದಿನಗಳ ಮೊದಲು ಹಟ್ಟಿ ಗೊಬ್ಬರವನ್ನು ಹಾಕಿ ಉಳುಮೆ ನಡೆಸುವ ಅವರು ನಾಟಿಗಿಂತ 5 ದಿನದ ಮುನ್ನ ಸುಣ್ಣವನ್ನು ಬಳಸಿ ಉಳುಮೆ ನಡೆಸುತ್ತಾರೆ. ನಾಟಿಯ ದಿನ ಉಳುಮೆ ನಡೆಸಿ ಮತ್ತೆ ನಾಟಿ ಕಾರ್ಯ ಮುಂದುವರೆಸುತ್ತಾರೆ.

ಕಾಡು ಪ್ರಾಣಿ ಹಾವಳಿ
ಕೃಷಿ, ತೋಟಗಾರಿಕಾ ಬೆಳೆಯಲ್ಲಿ ನಿಸ್ಸೀಮರಾಗಿರುವ ಗಂಗಾಧರ ಆಚಾರ್ಯರು ತನ್ನೆಲ್ಲ ಕೃಷಿ ಚಟುವಟಿಕೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿದೆ. ಮಂಗಗಳ ಮತ್ತು ನವಿಲಿನ ಉಪಟಳ ವಿಪರೀತವಾಗಿದೆ ಎಂದವರು ಹೇಳುತ್ತಾರೆ.

ಕರಾವಳಿಯಲ್ಲಿ ಬಹುತೇಕ ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಬಲು ಅಪರೂಪವೆನ್ನುವಂತೆ ಕೃಷಿಯನ್ನು ಪ್ರೀತಿಸುವ ಮೂಲಕ ಗಂಗಾಧರ ಆಚಾರ್ಯ ಅವರು ತನ್ನ ಆಹಾರಕ್ಕಾಗಿ ಸ್ವಾವಲಂಬಿ ಕಾರ್ಯದಲ್ಲಿ ಮುನ್ನಡೆಯುತ್ತಿದ್ದಾರೆ. ಕೃಷಿ ಭೂಮಿಯನ್ನು ಬರಡಾಗಿಸಿದ ಕೃಷಿಕರು ಮತ್ತೆ ಕೃಷಿ ಪ್ರೇಮವನ್ನು ತೋರ್ಪಡಿಸಿದರೆ ಕೃಷಿ ಗದ್ದೆಗಳು ಮತ್ತೆ ಹಸುರಾಗಿ ಕಂಗೊಳಿಸ‌ಬಹುದು.

Advertisement

ಹಿರಿಯರ ಶ್ರಮದ ಫ‌ಲ
ಕೃಷಿ ಚಟುವಟಿಕೆಗಳಿಗೆ 18 ಜನ ಸಾಂಪ್ರದಾಯಿಕ ಕೃಷಿ ಕೂಲಿ ಕಾರ್ಮಿಕರನ್ನು ಬಳಸಿ ಬೇಸಾಯ ನಡೆಸುವ ಅವರು ತನ್ನ ತಂದೆ ಶ್ಯಾಮರಾಯ ಆಚಾರ್ಯರ ಅಂದಿನ ಕಾಲದ ಕೃಷಿಯಲ್ಲಿನ ಶ್ರಮವನ್ನು ನೆನಪಿಸುತ್ತಿದ್ದು, ಹಿರಿಯರಿಂದ ನಡೆದು ಬಂದ ಕೃಷಿಯನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವ ಸದುದ್ದೇಶದಿಂದ 3 ಬೆಳೆಗಳ ಬದಲಿಗೆ ಕನಿಷ್ಠ 1 ಬೆಳೆಯಾದರೂ ಬೆಳೆಯುತ್ತಿದ್ದಾರೆ.

ಕುಲಕಸುಬನ್ನೂ ಮರೆತಿಲ್ಲ
ಧಾರ್ಮಿಕ ಕಾರ್ಯದಲ್ಲೂ ಮುಂಚೂಣಿ ಯಲ್ಲಿರುವ ಅವರು ಅದರೊಂದಿಗೆ ಕೃಷಿ ಕಾಯಕವನ್ನು ಮರೆತಿಲ್ಲ. ಕುಲಕಸುಬಾದ ಚಿನ್ನದ ಕೆಲಸದಲ್ಲೂ ತೊಡಗಿ ಕೊಂಡಿದ್ದಾರೆ.

-   ವಿಜಯ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next