Advertisement

ಕೃಷಿ ಯಂತ್ರಗಳಾದ ನಿರುಪಯುಕ್ತ ವಸ್ತುಗಳು

09:08 PM Sep 17, 2021 | Team Udayavani |

ವಿಶೇಷ ವರದಿ-ಕುಂದಾಪುರ: ಈ ಕೃಷಿಕನ ಬೇಸಾಯದ ಭೂಮಿಗೆ ಹೋದರೆ ಒಬ್ಬ ಎಂಜಿನಿಯರ್‌ನ ಕೆಲಸದ ಮನೆಗೆ ಹೋದಂತೆ ಭಾಸವಾಗುತ್ತದೆ. ಮಾರಾಟಕ್ಕೆ ಅಲ್ಲದಿದ್ದರೂ ತಮ್ಮದೇ ಉಪಯೋಗಕ್ಕೆ ಇವರು ಮಾಡಿಕೊಂಡ ಆವಿಷ್ಕಾರಗಳು, ಸಿದ್ಧಪಡಿಸಿದ ಪರಿಕರಗಳು ಮಾರುಕಟ್ಟೆ ದರಕ್ಕಿಂತ ಅಗ್ಗದ್ದಾಗಿವೆ. ಕೃಷಿಕರ ಕೈಗೆಟುಕುವ ದರದಲ್ಲಿ ಕೃಷಿ ಉಪಯೋಗಿ ಯಂತ್ರಗಳನ್ನು ಸಿದ್ಧಪಡಿಸುವಲ್ಲಿ ಇವರು ಸಿದ್ಧಹಸ್ತರು.
ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ ಕುಳಂಜೆ ಗುಂಡುಕೊಡ್ಲು ಬಾಬು ನಾಯ್ಕ ಅವರು 40 ಸಾವಿರ ರೂ.ಗಳಿಗಿಂತ ಕಡಿಮೆ ವೆಚ್ಚ ದಲ್ಲಿ ತಯಾರಿಸಿದ ಭತ್ತ ಕಟಾವು ಯಂತ್ರ, ರಿಕ್ಷಾದ ಎಂಜಿನ್‌ ಬಳಸಿಕೊಂಡು ಸಿದ್ಧಪಡಿಸಿದ ಯಂತ್ರ ಚಾಲಿತ ಕೈಗಾಡಿ, ಬಾವಿಯ ಮಣ್ಣು ಮೇಲೆತ್ತುವ ಯಂತ್ರ ಹೀಗೆ ನಿರುಪಯುಕ್ತ ವಸ್ತುಗಳನ್ನು ಬಳಸಿಕೊಂಡು ಅದಕ್ಕೆ ಹೊಸ ಜೀವ ಕೊಡುವ ಗ್ರಾಮೀಣ ಎಂಜಿನಿಯರ್‌.

Advertisement

ಮಿನಿ ಟಿಪ್ಪರ್‌
ತನ್ನದೇ ಆಟೋ ರಿಕ್ಷಾವನ್ನು ಗುಜರಿಗೆ ಹಾಕಲು ಹೋದಾಗ ಅಲ್ಲಿ ಹೇಳಿದ ಬೆಲೆ ಕೇಳಿ ಅದನ್ನು ಮರಳಿ ಮನೆಗೆ ತಂದು ಸುಸ್ಥಿತಿಯ ಬಿಡಿಭಾಗಗಳನ್ನು ಬಳಸಿಕೊಂಡು ಅದಕ್ಕೊಂದು ನವಜೀವ ನೀಡಲು ಸಿದ್ಧವಾದರು. ಕೃಷಿಕನಾದ್ದರಿಂದ ಕೃಷಿಕರ ಸಮಸ್ಯೆ, ಸವಾಲುಗಳ ಅರಿವಿರುವುದರಿಂದ ತೋಟಕ್ಕೆ ಗೊಬ್ಬರ, ಮಣ್ಣು ಸಾಗಿಸಲು ಒಂದು ಯಂತ್ರ ಚಾಲಿತ ಕೈಗಾಡಿ ಮಾಡುವ ನಿರ್ಣಯಕ್ಕೆ ಬಂದರು. ಎಂಜಿನಿಯರಿಂಗ್‌ ವರ್ಕ್‌ ಶಾಪ್‌ನಲ್ಲಿ ಟೆಂಪೋ ವಿನ್ಯಾಸಗೊಳಿಸಿ, ಆಟೋದ ಎಂಜಿನ್‌ ಜೋಡಿಸಿ, ಗೇರ್‌, ಬ್ರೇಕ್‌ಗಳ ಜೋಡಣೆ ಮಾಡಿದರು. ಒಳ್ಳೆಯ ಫಲಿತಾಂಶವಾಗಿ ಮಿನಿ ಟಿಪ್ಪರ್‌ನಂತಹ ಈ ಆಧುನಿಕ ಕೈಗಾಡಿ ಮೂಡಿತು. 25 ಬುಟ್ಟಿಯಷ್ಟು ಮಣ್ಣನ್ನು ಏಕಕಾಲಕ್ಕೆ ಸಾಗಿಸಲು, ಕಿರಿದಾದ ದಾರಿಯಲ್ಲಿಯೂ ಕೂಡ ಗೊಬ್ಬರ ಇತ್ಯಾದಿಗಳನ್ನು ಸಾಗಿಸಲು ಅನುಕೂಲವಾಗುತ್ತದೆ. ಏರು ಪ್ರದೇಶಕ್ಕೂ ಕೂಡ ಸಾಗುವ ಮೂಲಕ ರೈತಸ್ನೇಹಿ ಆವಿಷ್ಕಾರದಲ್ಲಿ ಯಶ ಕಂಡರು.

ಇದನ್ನೂ ಓದಿ:ಮೂರನೇ ಅಲೆ ಭೀತಿ : ಮುಂಬೈನಲ್ಲಿ ಅನಧಿಕೃತ “3ನೇ ಡೋಸ್‌’ ದರ್ಬಾರ್‌

ಭತ್ತ ಕಟಾವು ಯಂತ್ರ
ಭತ್ತ ಕಟಾವು ಯಂತ್ರವನ್ನು ಕೇವಲ 40 ಸಾವಿರ ರೂ. ವೆ ಚ್ಚ ದಲ್ಲಿ ಸಿದ್ಧಪಡಿಸುವುದು ಕಷ್ಟದ ಮಾತು. ಆದರೆ ಬಾಬು ನಾಯ್ಕರು ಅದನ್ನು ಸಾಧಿಸಿದ್ದಾರೆ. ರಿಕ್ಷಾದ ಎಂಜಿನ್‌ ಬಳಸಿ ವಿವಿಧ ನಿರುಪಯುಕ್ತ ವಸ್ತುಗಳನ್ನು ಅಳವಡಿಸಿಕೊಂಡು, ಸ್ಟೀಲ್‌ ಶೀಟ್‌ ಹಾಗೂ ಹೊಸ ಟೈರ್‌ಗಳನ್ನು ಖರೀದಿಸಿ ಯಥಾವತ್ತು ಕಟಾವು ಯಂತ್ರ ಸಿದ್ಧ ಪಡಿಸಿದ್ದಾರೆ. ಮಾಮೂಲಿ ಕಟಾವು ಯಂತ್ರಗಳಿಂತ ಪರಿಣಾಮಕಾರಿಯಾಗಿ ಈ ಯಂತ್ರ ಕೆಲಸ ಮಾಡುವುದನ್ನು ಕಂಡುಕೊಂಡಿದ್ದಾರೆ.

ಮಣ್ಣೆತ್ತುವ ಯಂತ್ರ
ಬಾವಿಯಿಂದ ಮಣ್ಣು ಮೇಲೆತ್ತುವ ಈಗ ಇರುವ ಯಂತ್ರವನ್ನು ಇನ್ನಷ್ಟು ಸರಳಗೊಳಿಸಿದ್ದಾರೆ. ಒಬ್ಬರು ಕುಳಿತು ಅವರ ನಿರ್ವಹಣೆ ಮಾಡುವ ಈ ಯಂತ್ರದಲ್ಲಿ ಸರಳವಾದ ವಿನ್ಯಾಸ ರೂಪಿಸಿದ್ದು, ಮಣ್ಣು ಎತ್ತುವಿಕೆಯಲ್ಲಿ ವೇಗ ಹಾಗೂ ಕಾರ್ಯದಕ್ಷತೆ ಹೊಂದಿದೆ.

Advertisement

ಕೃಷಿಕ
ಕೋನೋ ವೀಡರ್‌ ಅನ್ನು ಕೂಡ ತನ್ನು ಚಮತ್ಕಾರದಲ್ಲಿ ವಿನ್ಯಾಸಗೊಳಿಸಿ ಹಲವು ಮಂದಿ ಸ್ನೇಹಿತರಿಗೆ ನೀಡಿದ್ದಾರೆ. ಕೃಷಿ ಪೂರಕವಾದ ಪರಿಕರಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಕೃಷಿಕರಾಗಿರುವ ಬಾಬು ನಾಯ್ಕರು ಸುಧಾರಿತ ಕೃಷಿಯ ಬಗ್ಗೆಯೂ ಆಸಕ್ತರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ಯಂತ್ರಶ್ರೀ ಭತ್ತ ನಾಟಿ ಮಾಡಿದ್ದಾರೆ. ಅಡಿಕೆ, ತೆಂಗು, ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.


ಬೆರಗು ಮೂಡಿಸುವ ಕೌಶಲ
ಬಾಬು ನಾಯ್ಕ ಅವರ ಯಾಂತ್ರಿಕ ಜ್ಞಾನ ಕೌಶಲ ಬೆರಗು ಮೂಡಿಸುತ್ತದೆ. 8ನೇ ತರಗತಿಯ ತನಕ ಓದಿರುವ ಬಾಬು ನಾಯ್ಕರು ಯಂತ್ರಗಳ ಕಾರ್ಯನಿರ್ವಹಣೆ, ಪ್ರತಿಯೊಂದು ಬಿಡಿಭಾಗಗಳ ಪಾತ್ರಗಳ ಬಗ್ಗೆ ಅನುಭವದ ಮೂಲಕವೇ ತಿಳಿದುಕೊಳ್ಳುತ್ತಾರೆ. ಕಡಿಮೆ ಖರ್ಚಿನಲ್ಲಿ ಅವರಲ್ಲಿ ಯಂತ್ರಗಳು ಸಿದ್ಧಗೊಳ್ಳುತ್ತವೆ.
-ಚೇತನ್‌, ತಾಲೂಕು ಕೃಷಿ ಅಧಿಕಾರಿ, ಎಸ್‌ಕೆಡಿಆರ್‌ಡಿಪಿ

ಇನ್ನಷ್ಟು ಮಾಡಬೇಕು
ತಂತ್ರಜ್ಞಾನದ ಹಾದಿಯಲ್ಲಿ ಕಡಿಮೆ ಖರ್ಚಿನಲ್ಲಿ ಗರಿಷ್ಠ ಕಾರ್ಯಸಾಧಿಸುವ ಸರಳ ಯಂತ್ರಗಳ ಆವಿಷ್ಕಾರಕ್ಕೆ ನನ್ನ ಮನಸ್ಸು ಸದಾ ತುಡಿಯುತ್ತಾ ಇರುತ್ತದೆ. ಯಾವುದೇ ಕೃಷಿ ಉಪಕರಣಗಳು ರೈತರ ಕೈಗೆಟುಕುವಂತೆ ಇರಬೇಕು, ಹಾಗಾಗಿ ಇನ್ನಷ್ಟು ಆವಿಷ್ಕಾರಗಳು ನಡೆಯಬೇಕು. ನಾನೂ ಅಂತಹ ಗುರಿ ಹೊಂದಿದ್ದೇನೆ.
-ಬಾಬು ನಾಯ್ಕ ಕುಳುಂಜೆ
ಕೃಷಿ ಯಂತ್ರ ಸಂಶೋಧಕ

Advertisement

Udayavani is now on Telegram. Click here to join our channel and stay updated with the latest news.

Next