Advertisement

ಹೆಗಡೆಕಟ್ಟಾ ಸೊಸೈಟಿಯಲ್ಲಿ ಕೃಷಿ ಯಂತ್ರ ಪ್ರಾತ್ಯಕ್ಷಿಕೆ

03:57 PM Jul 22, 2019 | Team Udayavani |

ಶಿರಸಿ: ಹೆಗಡೆಕಟ್ಟಾ ಸೊಸೈಟಿ ಆವಾರದಲ್ಲಿ ಕೃಷಿ ಯಂತ್ರ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ಜರುಗಿತು. ಸೇವಾ ಸಹಕಾರಿ ಸಂಘ ಹೆಗಡೆಕಟ್ಟಾ, ಟಿಎಂಎಸ್‌ ಶಿರಸಿ ಮತ್ತು ಹೆಗಡೆ ಆಗ್ರೋಟೆಕ್‌ ಕಡ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ರೈತರಿಗಾಗಿ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ನಡೆಯಿತು.

Advertisement

ಇಲ್ಲಿನ ಜಡ್ಡಿಮನೆಯ ರವೀಂದ್ರ ಹೆಗಡೆ ಅವರ ತೋಟದಲ್ಲಿ ಅಡಕೆಗೆ ಕೆಳಗಿನಿಂದಲೇ ಮದ್ದು ಸಿಂಪಡಣೆ ಮಾಡುವ ಹೆಗಡೆ ಆಗ್ರೋಟೆಕ್‌ ಅವರಿಂದ ನಿರ್ಮಿತ ಟೆಲಿಸ್ಕೋಪಿಕ್‌ ದೋಟಿ, ಬ್ಯಾಟರಿ ಚಾಲಿತ ಪವರ್‌ ಸ್ಪ್ರೇಯರ್‌ ಮತ್ತು ಹಾಲು ಕರೆಯುವ ಯಂತ್ರದ ಬಗ್ಗೆ ರೈತರಿಗೆ ಸವಿವರವಾದ ಮಾಹಿತಿ ನೀಡಲಾಯಿತು.

ನೆಲದಿಂದಲೇ ಅರವತ್ತು ಹಾಗೂ ಎಂಭತ್ತು ಅಡಿ ಎತ್ತರದವರೆಗೆ ಮದ್ದನ್ನು ಸಿಂಪಡಿಸಲು ಈ ಯಂತ್ರದಿಂದ ಸಾಧ್ಯ. ಒಂದು ಬಾರಿ ಆರರಿಂದ ಎಂಟು ಡ್ರಮ್‌ಗಳ ವರೆಗೆ ಮದ್ದನ್ನು ಸಿಂಪಡಿಸುವಷ್ಟು ಬ್ಯಾಟರಿ ಶಕ್ತಿಯುತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು. ದರಕು ಬರಗುವ ಸಲಕರಣೆ, ಸಸ್ಯ ಬೀಜ ಹಾಗೂ ಬೀಜ ಬಿತ್ತುವ ಟ್ರೇ ಅಲ್ಲದೆ ಇನ್ನೂ ಅನೇಕ ಕೃಷಿ ಯಂತ್ರ ಸಾಧನಗಳು ರೈತರ ಗಮನ ಸೆಳೆದವು.

ಟಿಎಂಎಸ್‌ ಕೃಷಿ ತಜ್ಞ ಡಾ| ಕಿಶೋರ ಹೆಗಡೆ ಮಾತನಾಡಿ, ಬೋರ್ಡೋ ಮಿಶ್ರಣವನ್ನು ತಯಾರಿಸುವ ಹಾಗೂ ಸಿಂಪಡಣೆ ಮಾಡುವ ವಿಧಾನವನ್ನು ರೈತರಿಗೆ ತಿಳಿಸಿದರು. ಪ್ರಸಕ್ತ ಸಾಲಿನಲ್ಲಿ ಕಡಿಮೆ ಮಳೆಯಾದರೂ ಕೊಳೆ ರೋಗ ಕಂಡು ಬರುತ್ತಿರುವ ಬಗ್ಗೆ ವಿವರಿಸಿದ ಅವರು, ಕಳೆದ ವರ್ಷದ ಫಂಗಸ್‌ ಈ ವರ್ಷವೂ ಬಾಧಿಸಿದೆ ಎಂದರು. ರೈತ ಸೇವೆಯ ವಿಷಯದಲ್ಲಿ ಮುಂಚೂಣಿಯಲ್ಲಿದ್ದು, ಸಹಕಾರ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತ ಗಮನ ಸೆಳೆದಿರುವ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಟಿಎಂಎಸ್‌ ಉಪಾಧ್ಯಕ್ಷರೂ ಆಗಿರುವ ಎಂ.ಪಿ. ಹೆಗಡೆ ಕೊಟ್ಟೇಗದ್ದೆ ತಮ್ಮ ಸಂಘದ ರೈತರಿಗೆ ಹಾಗೂ ಸಾರ್ವಜನಿಕರಿಗೆ ತಜ್ಞರಿಂದ ಬೇಕಾದ ಮಾಹಿತಿ ದೊರಕಿಸಿಕೊಟ್ಟರು. ಸಂಘವು ಈ ಮಾದರಿಯ ಕಾರ್ಯಕ್ರಮ ಪ್ರತಿವರ್ಷ ನಡೆಸುತ್ತ ಬಂದಿದೆ ಎಂದು ಅಭಿಪ್ರಾಯಪಟ್ಟರು.

ಕೃಷಿ ಯಂತ್ರ ಪ್ರಾತ್ಯಕ್ಷಿಕೆಯಲ್ಲಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ನಿರ್ದೇಶಕ ಗುರುಪಾದ ಹೆಗಡೆ ಅಮಚಿಮನೆ, ರತ್ನಾಕರ ನಾಯ್ಕ ಬಬ್ಬೀಸರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಹೆಗಡೆ ಹಾಗೂ ಸಂಘದ ನಿರ್ದೇಶಕರು ಕೃಷಿ ಸಲಹೆಗಾರ ಗುರುಮೂರ್ತಿ ಹೆಗಡೆ ಮತ್ತು ಟಿಎಂಎಸ್‌ ಸಿಬ್ಬಂದಿ ನಾಗರಾಜ ಹೆಗಡೆ ಮತ್ತಿತರರು ಇದ್ದರು. ಸುಮಾರು ಐವತ್ತಕ್ಕೂ ಹೆಚ್ಚು ರೈತರು ಪ್ರಾತ್ಯಕ್ಷಿಕೆ ಪ್ರಯೋಜನ ಪಡೆದುಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next