ಯಳಂದೂರು: ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಆದರ್ಶ ಶಾಲೆಯ ಹಿಂಭಾಗದಲ್ಲಿರುವ ವ್ಯವಸಾಯದ ಜಮೀನಿನಲ್ಲಿ ಬಳಿ ನಾಟಿ ಮಾಡಲು ರೈತರು ಸಿದ್ಧಗೊಳಿಸಿಕೊಂಡಿದ್ದ ಭತ್ತದ ಗದ್ದೆಗೆ ಕಾಲುವೆಯ ನೀರು ಹರಿದು ಹೋಗದೆ ಗದ್ದೆಯಲ್ಲೇ ನಿಂತಿದ್ದು 60ಕ್ಕೂ ಹೆಚ್ಚು ಎಕರೆ ಕೃಷಿ ಭೂಮಿಯಲ್ಲಿ ನೀರು ನಿಂತಿದ್ದು ಸಣ್ಣ ರೈತರು ಈ ಬಾರಿ ವ್ಯವಸಾಯವನ್ನೇ ಮಾಡದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ದುಗ್ಗಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಲ್ಲಹಳ್ಳಿ ಕೆರೆಯ ಬದಿಯಲ್ಲಿರುವ 50 ರಿಂದ 60ಕ್ಕೂ ಹೆಚ್ಚು ಎಕರೆ ಪ್ರದೇಶದ ಜಮೀನಿನ ನೂರಾರು ಸಣ್ಣ ರೈತರು ಭತ್ತದ ಫಸಲನ್ನು ಬೆಳೆಯಲು ತಮ್ಮ ಜಮೀನನ್ನು ಹಸನು ಮಾಡಿಕೊಂಡಿದ್ದರು. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಜೋರು ಮಳೆ ಸುರಿದಿದ್ದು ನೀರು ಜಮೀನಿನಲ್ಲೇ ನಿಂತಿದೆ. ಅಲ್ಲದೆ ಈ ಭಾಗದಲ್ಲಿರುವ ಕಬಿನಿ ಕಾಲುವೆಯಲ್ಲಿ ನೀರು ಬಿಡಲಾಗಿದ್ದು ಈ ನೀರು ಸಹ ಜಮೀನಿಗೆ ತುಂಬಿರುವುದರಿಂದ ಭತ್ತವನ್ನು ನಾಟಿ ಮಾಡಲು ಹಾಕಿದ್ದ ಪೈರುಗಳು ಕೊಳೆಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಮಾರಕವಾದ ಕಾಲುವೆಹೂಳು: ಈ ಭಾಗದ ಜಮೀನುಗಳು ಕೆರೆ ಹಾಗೂ ಕಾಲುವೆಯ ತಳ ಭಾಗದಲ್ಲಿದೆ. ಕಾಲುವೆಯಲ್ಲಿ ಹೂಳು ತುಂಬಿರುವುದರಿಂದ ಇಲ್ಲಿ ನೀರು ಬಿಟ್ಟರೆ ಇದು ನೇರವಾಗಿ ಕಾಲುವೆಯಲ್ಲಿ ಹರಿಯದೆ ಹೊರಕ್ಕೆ ಹರಿಯುತ್ತದೆ. ಹಾಗಾಗಿ ಇಡೀ ನೀರೆಲ್ಲಾ ತಗ್ಗು ಪ್ರದೇಶದಲ್ಲಿರುವ ಜಮೀನಿಗೆ ನುಗ್ಗುತ್ತದೆ. ಈ ಸಮಸ್ಯೆ ಪ್ರತಿ ವರ್ಷವೂ ಇರುತ್ತದೆ. ಕಳೆದ ಬಾರಿ ಮಳೆ ಅಭಾವದಿಂದ ಕೆರೆಯಲ್ಲಿ ನೀರಿರಲಿಲ್ಲ. ಅಲ್ಲದೆ ಕಾಲುವೆಯಲ್ಲೂ ನೀರು ಹರಿದಿರಲಿಲ್ಲ. ಈಗ ಮಳೆಯೂ ಆಗಿದ್ದು ಕೆರೆಯಲ್ಲಿ ನೀರಿದ್ದು, ಕಾಲುವೆಯಲ್ಲೂ ನೀರು ಹರಿಯುತ್ತಿದೆ. ಆದರೆ ಹೂಳು ತುಂಬಿರುವ ಕಾಲುವೆಯಲ್ಲಿ ನೀರು ಹರಿಯದೆ ರೈತರ ಭತ್ತದ ಜಮೀನಿಗೆ ನೀರು ನುಗ್ಗಿದೆ. ಈಗಾಗಲೇ ಭತ್ತದ ಒಟ್ಟಿನ ಮನೆಗಳಲ್ಲಿ ನೀರು ನಿಂತಿದ್ದು ಪೈರೆಲ್ಲಾ ಕೊಳೆಯುತ್ತಿದೆ. ನೀರು ಜಮೀನಿನಲ್ಲೇ ನಿಂತಿದ್ದು ವ್ಯವಸಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲುವೆ ಹೂಳೆತ್ತಿ ಎಂದು ಹಲವು ಬಾರಿ ಮನವಿ ಮಾಡಿದ್ದರು. ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯದಿಂದ ಈ ಸಮಸ್ಯೆ ಉಂಟಾಗಿದೆ ಎಂಬುದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರಿಗೆ ನಿರಾಸೆ: ಈ ಬಾರಿ ಕಬಿನಿ ಜಲಾಶಯದಲ್ಲಿ ನೀರು ತುಂಬಿರುವ ಹಿನ್ನೆಲೆಯಲ್ಲಿ ಕಬಿನಿ ಕಾಲುವೆಯಲ್ಲಿ ನೀರು ಬಿಡಲಾಗಿತ್ತು. ಅಲ್ಲದೆ ಮಳೆಯೂ ಆಗಾಗ ಸುರಿದಿದ್ದರಿಂದ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ರೈತರು ಇದ್ದರು. ಇದಕ್ಕಾಗಿ ಕಳೆದ ಒಂದು ತಿಂಗಳಿಂದಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಭೂಮಿ ಹದ ಮಾಡಿ ಭತ್ತದ ಪೈರುಗಳನ್ನು ನಾಟಿ ಮಡಲು ಒಟ್ಟಿನ ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಕೆಲವೆಡೆ ಪೈರುಗಳನ್ನು ನಾಟಿ ಮಾಡಲಾಗಿತ್ತು. ಆದರೆ ದಿಢೀರ್ ಅಂತ ಕಾಲುವೆ ಮೂಲಕ ಅಪಾರ ಪ್ರಮಾಣ ನೀರು ಗದ್ದೆಗಳಿಗೆ ನುಗ್ಗಿದ್ದರಿಂದ ಪೈರೆಲ್ಲಾ ಕೊಚ್ಚಿ ಹೋಗಿದ್ದು ಈ ಭಾಗದ 60 ಎಕರೆ ಭೂಮಿ ಜಲಾವೃತವಾಗಿದೆ. ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಈ ಭಾಗದ ರೈತರಾದ ದುಗ್ಗಹಟ್ಟಿ ಶಿವಣ್ಣ ಬಿಳಿಗಿರಿ ರವರ ಆರೋಪ.
ಕಳೆದ ವರ್ಷ ಮಳೆ ಇಲ್ಲದೆ ವ್ಯವಸಾಯವನ್ನೇ ಮಾಡಿಲ್ಲ. ಈ ಬಾರಿ ಉತ್ತಮ ಮಳೆಯಾಗಿದೆ. ಕಾಲುವೆಯಲ್ಲೂ ನೀರು ಹರಿಯುತ್ತಿದೆ. ನಮ್ಮ ಜಮೀನು ತಗ್ಗು ಪ್ರದೇಶ ದಲ್ಲಿದ್ದು ನೀರು ಇಲ್ಲೇ ನಿಂತಿದ್ದು ಭತ್ತದ ಪೈರನ್ನು ಹಾಕಿದ್ದು ಇದು ಕೊಳೆಯುತ್ತಿದೆ. ಕಾಲುವೆಯಲ್ಲಿ ಹೂಳು ತುಂಬಿದ್ದು ನೀರು ಸರಿಯಾಗಿ ಹರಿಯದಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದ್ದು ಸಂಬಂಧಪಟ್ಟವರು ಈಗಲಾದರೂ ಸೂಕ್ತ ಕ್ರಮ ವಹಿಸಬೇಕು.
–ಬಲ್ಲಶೆಟ್ಟಿ ಮೆಳ್ಳಹಳ್ಳಿ, ರೈತ
ಕಾಲುವೆಯಲ್ಲಿ ಹೂಳು ತುಂಬಿರುವುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಇಲ್ಲಿ ಜಮೀನಿಗೆ ನೀರು ತುಂಬಿರುವ ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಈ ವಿಷಯವನ್ನು ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲಾಗುವುದು.
–ಜಯಪ್ರಕಾಶ್, ತಹಶೀಲ್ದಾರ್, ಯಳಂದೂರು