Advertisement

ಕೃಷಿ ಭೂಮಿ ಒತ್ತುವರಿ : ಎಕರೆಗೆ 2.8 ಕೋಟಿಗೆ ಬೇಡಿಕೆಯಿಟ್ಟ ರೈತರು

12:23 PM Jan 05, 2022 | Team Udayavani |

ನೆಲಮಂಗಲ : ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಓಬಳಾಪುರ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ 842.17 ಎಕರೆ ಕೃಷಿ ಭೂಮಿ ಒತ್ತುವರಿ ಮಾಡಿಕೊಂಡು ರೈತರ ಬದುಕಿಗೆ ಆಧಾರವಿಲ್ಲದಂತೆ ಮಾಡುತ್ತಿದ್ದಾರೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನಮ್ಮ ಭೂಮಿಯನ್ನು ಒತ್ತುವರಿ ಮಾಡಲು ಬಿಡುವುದಿಲ್ಲ ಎಂದು ರೈತರು ಅಕ್ರೋಶ ವ್ಯಕ್ತಪಡಿಸಿದರು.

Advertisement

ಕೇಂದ್ರ ಸರ್ಕಾರದ ಮಲ್ಟಿ ಮಾಡೆಲ್‌ ಲಾಜಸ್ಟೀಕ್ಸ್‌ ಪಾರ್ಕ್‌ ಯೋಜನೆಗಾಗಿ ಕೆಐಎಡಿಬಿ ವತಿಯಿಂದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿ ಓಬಾಳಪುರ, ದೊಡ್ಡಚನ್ನೋಹಳ್ಳಿ, ಹಾದಿಹೊಸಹಳ್ಳಿ, ಮಾವಿನಕೊಮ್ಮನಹಳ್ಳಿ, ಕಾರೇಹಳ್ಳಿ, ದೊಡ್ಡಬೆಲೆ ಮತ್ತು ಮದ್ದೇನಹಳ್ಳಿ ಗ್ರಾಮಗಳಲ್ಲಿನ 842.17 ಎಕರೆ ಭೂಪ್ರದೇಶಕ್ಕೆ ಭೂ ದರ ನಿಗದಿ ಮಾಡಲು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ರೈತರೊಂದಿಗೆ ಹಮ್ಮಿಕೊಂಡಿದ್ದ ರೈತರ ಜಮೀನಿಗೆ ದರ ನಿಗದಿ ಸಭೆಯಲ್ಲಿ ಮಾತನಾಡಿದರು.

ಕಾಯಂ ಕೆಲಸ ನೀಡಬೇಕು: ಓಬಳಾಪುರ ಗ್ರಾಮದ ರೈತ ಹನುಮಂತೇಗೌಡ್ರು ಮಾತನಾಡಿ, ನಮ್ಮ ಗ್ರಾಮದ ಸುತ್ತಮುತ್ತಲಿನ ಭೂ ಪ್ರದೇಶಕ್ಕೆ ಸರ್ಕಾರಿ ಬೆಲೆಯಂತೆ 60 ಲಕ್ಷ ಮೌಲ್ಯವಿದ್ದು, ಈ ದರದ ನಾಲ್ಕು ಪಟ್ಟು ಹಣ ಮತ್ತು ಕೃಷಿ ಭೂಮಿ ಒತ್ತುವರಿ ಮೂರು ವರ್ಷದ ಇಳುವರಿ ಅಧಿಕ ಹಣ ಸೇರಿ 2.8 ಕೋಟಿ ರೂ. ಎಕರೆಗೆ ನಿಗದಿ ಮಾಡಬೇಕು. ಜಮೀನು ಕಳೆದುಕೊಳ್ಳುವ ರೈತರ ಮಕ್ಕಳಿಗೆ ಅರ್ಹತೆಯ ಆಧಾರದ ಮೇಲೆ ಕೈಗಾರಿಕೆಯಲ್ಲಿ ಕಾಯಂ ಕೆಲಸ ನೀಡಬೇಕು ಎಂದರು.

ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ನಮ್ಮ ಭಾಗದಲ್ಲಿ ಈಗಾಗಲೇ ಕೈಗಾರಿಕಾ ಪ್ರದೇಶ ಹೆಚ್ಚಾಗಿದೆ. ಇದರ ಮಧ್ಯ ಕೃಷಿಭೂಮಿ ಒತ್ತುವರಿ ಮಾಡುವುದು ಬೇಡ ಎಂದ ಅವರು, ಒತ್ತುವರಿ ಮಾಡಿದರೆ ರೈತರಿಗೆ ಸೂಕ್ತದರದಲ್ಲಿ ಹಣ ಸಂದಾಯವಾಗಬೇಕು. ರೈತರ ಮನೆ ಬಾಗಿಲಿಗೆ ಸೌಲಭ್ಯ ಸಿಗುವಂತೆ ಆಗಬೇಕು ಎಂದರು.

ಇದನ್ನೂ ಓದಿ : ಉತ್ತರಪ್ರದೇಶ: ತುಳಸಿಪುರದಲ್ಲಿ ಸಮಾಜವಾದಿ ಪಕ್ಷದ ಮುಖಂಡನ ಹತ್ಯೆ, ಉದ್ವಿಗ್ನ ಪರಿಸ್ಥಿತಿ

Advertisement

ರೈತರ ಬೆಳೆಗೆ ಪರಿಹಾರ ನೀಡಿ : ಮಾಜಿ ತಾಪಂ ಅಧ್ಯಕ್ಷ ಪುಟ್ಟಗಂಗಯ್ಯ ಮಾತನಾಡಿ, ದಾಬಸ್‌ಪೇಟೆ ಭಾಗದಲ್ಲಿ ಕಾರ್ಖಾನೆಗಳಿಗೆ ಭೂಮಿ ಒತ್ತುವರಿ ಮಾಡಿ ತ್ಯಾಜ್ಯ ಘಟಕ ತೆರೆದಿದ್ದಿರಾ ನಮ್ಮ ಗ್ರಾಮಗಳಲ್ಲಿ ವಾಸ ಮಾಡಲು ಆಗದಂತೆ ವಾತವಾರಣ ನಿರ್ಮಾಣವಾಗುತ್ತಿದೆ. ಇದರತ್ತ ಅಧಿಕಾರಿಗಳು ಗಮನಹರಿಸಬೇಕು. ಪರಿಸರ ಮಾಲಿನ್ಯ ತಡೆಯುವಲ್ಲಿ ಕೈಗಾರಿಕೆ ಸೂಕ್ತ ಕಾನೂನು ಜಾರಿ ಮಾಡಬೇಕು ಎಂದರು.

ಮೇವುಗಾಗಿ 100 ಎಕರೆ: ತಾಲೂಕು ಕಿಸಾನ್‌ ಸಂಘದ ಪದಾಧಿಕಾರಿಗಳು ಮಾತನಾಡಿ, ಈಗಾಗಲೇ ರೈತರಿಗೆ ಒತ್ತುವರಿ ಬಿಸಿ ತಟ್ಟಿದೆ. ನಮ್ಮ ಭೂಮಿ ಪಡೆದ ಮೇಲೆ, ಹೈನುಗಾರಿಕೆ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬದವರಿಗೆ ಮೇವು ಬೆಳೆಯಲು 100 ಎಕರೆ ಗೋಮಾಳ ಪ್ರದೇಶವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.

ಬೆಲೆ ನಿಗದಿ ಮಾಡುತ್ತೇವೆ: ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಮಾತನಾಡಿ, ಎಂಎಂಸಿಎಲ್‌ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಭೂಮಿ ಕಳೆದುಕೊಂಡ ಕುಟುಂಬಕ್ಕೆ ಒಂದು ಉದ್ಯೋಗ ಕೊಡಿಸುವ ಸರೋಜಿನಿ ಮಹಿಷಿ ವರದಿ ಹಾಗೂ ಕೇಂದ್ರ ಸರ್ಕಾರದ ನೀತಿ ನಿಯಮಗಳಲ್ಲಿದೆ. ಭೂ ನೋಂದಣಿ ಇಲಾಖೆಯ ಗೈಡ್‌ ಲೈನ್‌ನಂತೆ ರೈತರಿಗೆ ಬೆಲೆ ನಿಗದಿ ಮಾಡುತ್ತೇವೆ.
ಯಾವುದೇ ರೈತರಿಗೂ ಅನ್ಯಾಯವಾಗದಂತೆ ಗಮನಹರಿಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಅರುಳು ಕುಮಾರ್‌, ಕೆಐಎಡಿಬಿ ಜಂಟಿ ನಿದೇರ್ಶಕ ನರೇಂದ್ರ ಬಾಬು, ತಹಶೀಲ್ದಾರ್‌ ಕೆ.ಮಂಜುನಾಥ್‌, ಭೂ ನೋಂದಣೆ ವಿಭಾಗದ ಸಂಗಪ್ಪ, ಲೀಲಾವತಿ, ಎಇ ರಘುರಾಮನ್‌, ಸಿ.ನಟರಾಜು, ಮಹೇಶ್‌, ಶಿವಪ್ರಸಾದ್‌, ಸುದೀಪ್‌, ಮಲ್ಲಿಕಾರ್ಜುನ್‌, ಬಸವಮೂರ್ತಿ, ಸುಂದರ್‌ ರಾಜ್‌, ನಾಗರತ್ನಮ್ಮ, ಪಾರ್ಥಸಾರಥಿ, ಹರೀಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next