Advertisement
ಧಾರವಾಡ ಕೃಷಿ ವಿವಿ ದೇಶದ ವಿವಿಗಳ ಪಟ್ಟಿಯಲ್ಲಿ 7ನೇ ಶ್ರೇಯಾಂಕದಲ್ಲಿದೆ. ಇಲ್ಲಿನ ಸಂಶೋಧನೆಗಳು, ತಳಿ ಸುಧಾರಣೆಗಳು, ಆಧುನಿಕ ಕೃಷಿ ತಂತ್ರಜ್ಞಾನಗಳ ಅನ್ವೇಷಣೆಗಳು ವಿಶ್ವದಾದ್ಯಂತ ಹೆಸರು ಮಾಡಿದ್ದು ಸುಳ್ಳಲ್ಲ. ಆದರೆ ಈ ವರ್ಷದ ಕೃಷಿ ಮೇಳ ವಿಳಂಬವಾಗಿ ಆಗಿದ್ದರಿಂದ ಕೃಷಿಗೆ ಸಂಬಂಧಿಸಿದ ತಾಕುಗಳು, ಪ್ರಾತ್ಯಕ್ಷಿಕೆಗಳು ಮತ್ತು ವಿನೂತನ ತಂತ್ರಜ್ಞಾನದಕೃಷಿ ವಿಚಾರಗಳನ್ನು ಪಸರಿಸುವ ಕಾರ್ಯ ಅಷ್ಟಾಗಿ ನಡೆಯಲಿಲ್ಲ.
Related Articles
Advertisement
ಇಷ್ಟೊದೊಡ್ಡ ಮೇಳದಲ್ಲಿ ವಾಣಿಜ್ಯ ಮತ್ತು ವ್ಯಾಪಾರಕ್ಕೆ ಹೆಚ್ಚಿನ ಪ್ರಾಶಸ್ತÂ ಕಂಡು ಬಂದಿತು. ವರ್ಷದಿಂದ ವರ್ಷಕ್ಕೆ ವ್ಯಾಪಾರ ವಹಿವಾಟು ಹೆಚ್ಚಾಗುತ್ತಿದೆಯೇ ಹೊರತು ನೈಜ ಕೃಷಿಗೆ ಮತ್ತು ಸಣ್ಣ ರೈತನಿಗೆ ಬೇಕಾಗುವ ಕೃಷಿ ವಿಧಾನಗಳು, ಸಲಕರಣೆಗಳು ಮತ್ತು ತಂತ್ರಜ್ಞಾನ ಅಷ್ಟಾಗಿ ಸಿಕ್ಕುತ್ತಿಲ್ಲ. ಹೀಗಾಗಿ ಮುಂದಿನ ವರ್ಷವಾದರೂ ರೈತರಿಗೆ ಹೆಚ್ಚು ಅನುಕೂಲವಾಗುವ ರೀತಿಯಲ್ಲಿ ಮೇಳ ಸಂಘಟನೆಯಾಗಲಿ ಎಂದು ಕೆಲವು ರೈತರು ಸಂಘಟಕರಿಗೆ ಹೇಳಿದ್ದು ವಿಶೇಷವಾಗಿತ್ತು.
5 ಲಕ್ಷಕ್ಕಿಳಿದ ಜನರ ಭೇಟಿ : ಪ್ರತಿವರ್ಷ 12-16 ಲಕ್ಷ ಜನರು ಸೇರುತ್ತಿದ್ದ ಮೇಳಕ್ಕೆ ಈ ವರ್ಷ ಬರೀ 5 ಲಕ್ಷ ಜನರು ಸೇರಿದ್ದಾರೆ. ಹೀಗಾಗಿ ಕೃಷಿ ಮೇಳದ ಕಳೆಯೇ ಹೋಗಿತ್ತು. ಇನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದಿಯಾಗಿ ರೈತ ಮುಖಂಡರು ಕೂಡ ಅಷ್ಟಾಗಿ ಕೃಷಿ ಮೇಳದತ್ತ ಸುಳಿಯಲ್ಲಿಲ್ಲ. ಉದ್ಘಾಟನೆ ಕಾರ್ಯಕ್ರಮವೇ ಕಳೆಗುಂದಿತ್ತು. ಮೊದಲ ದಿನ ಜನರ ಕೊರತೆ ಎದುರಿಸಿದ್ದ ಕೃಷಿ ಮೇಳ ರವಿವಾರ ಮಾತ್ರ ಕೊಂಚ ನಗರವಾಸಿಗಳ ಖರೀದಿ ಭರಾಟೆ ಮತ್ತುಕುಟುಂಬ ಸಮೇತ ಸುತ್ತಾಟದಿಂದ ಕಳೆಕಟ್ಟಿತ್ತು. ಕೊನೆಯ ದಿನ ರೈತರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರಿಂದ ಕೃಷಿ ಮೇಳ ಕಳೆ ಕಟ್ಟಲಿಲ್ಲ
ಸಲಹೆ ಪಡೆದ ರೈತರು : ಕೃಷಿ ವಿವಿಯ ಪ್ರಾಧ್ಯಾಪಕರು ಮತ್ತು ಕೃಷಿ ವಿಜ್ಞಾನಿಗಳು ತಳಿ ಸಂರಕ್ಷಣೆ, ಮಳೆ ಕೊಯ್ಲು, ಬೀಜೋತ್ಪಾದನೆ, ಪೌಷ್ಟಿಕ ಧಾನ್ಯ ಬೆಳೆಯುವುದು, ಹನಿ ನೀರಾವರಿ, ಸಾವಯವ ಕೃಷಿ, ಸಾವಯವ ಕ್ರಿಮಿನಾಶಕಗಳು, ಗೊಬ್ಬರದ ಬಳಕೆ, ಕಡಿಮೆ ವೆಚ್ಚದ ಕೃಷಿ, ಯಂತ್ರೋಪಕರಣ ಬಳಕೆ, ಬೀಜ ವಿತರಣೆ ಸೇರಿದಂತೆ ಅನೇಕ ವಿಷಯಗಳ ಕುರಿತು ಸಲಹೆಗಳನ್ನು ರೈತರಿಗೆ ನೀಡಿದರು. ಸೈನಿಕ ಹುಳು ನಿಯಂತ್ರಣ, ಸಾವಯವ ಕೃಷಿ ಮತ್ತು ಬೀಜೋತ್ಪಾದನೆ ಕುರಿತು ಹೆಚ್ಚು ರೈತರು ಸಲಹೆ ಪಡೆದುಕೊಂಡಿದ್ದು ವಿಶೇಷ. ಇಸ್ರೇಲ್ ಮಾದರಿ ಕೃಷಿ, ನಗರ ಕೃಷಿಯ ಬಗ್ಗೆ ಇಟ್ಟಿದ್ದ ಪ್ರಾತ್ಯಕ್ಷಿಕೆಗಳು ಈ ವರ್ಷದ ಕೃಷಿ ಮೇಳದಲ್ಲಿ ನಗರವಾಸಿಗಳನ್ನು ಸೆಳೆದಿದ್ದು ಸತ್ಯ.
ಅರ್ಥಪೂರ್ಣ ಕೃಷಿ ಮೇಳಕ್ಕೆ ಆಗ್ರಹ : ರೈತರಿಂದ ರೈತರಿಗಾಗಿ ರೈತರಿಗೋಸ್ಕರ ನಡೆಯುವ ಧಾರವಾಡ ಕೃಷಿಮೇಳ ಇಂದು ದೇಶದ ಅಗ್ರಗಣ್ಯ ಮೇಳಗಳಲ್ಲಿ ಸ್ಥಾನ ಪಡೆದುಕೊಂಡಿದ್ದು ಹೆಮ್ಮೆಯ ವಿಚಾರ. ಆದರೆ ಕೃಷಿ ಮೇಳವೇ ವಾಣಿಜ್ಯೀಕರಣಗೊಂಡಿದ್ದು, ಇಡೀ ಕೃಷಿ ಮೇಳದಲ್ಲಿ ಬರೀ ವಸ್ತುಗಳ ಮಾರಾಟದ ಅಂಗಡಿಗಳುಸೇರಿಕೊಂಡಿವೆ. ಖರೀದಿ, ತಿರುಗಣಿಯಲ್ಲಿ ಕುಳಿತು ಖುಷಿ ಪಡುವುದು, ಮಕ್ಕಳಿಗೆ ಆಟಿಕೆ ಕೊಡಿಸುವುದನ್ನು ನೋಡಿದರೆ ಕೃಷಿಮೇಳ ಎಂದರೆ ದೊಡ್ಡ ಜಾತ್ರೆಯಂತೆ ಭಾಸವಾಗುತ್ತಿದೆ. ಕೃಷಿ ವಿವಿ ವ್ಯಾಪ್ತಿಗೆ ಬರುವ ಏಳು ಜಿಲ್ಲೆಯಲ್ಲೂ ವಿಭಿನ್ನ ಹವಾಗುಣ,ಬೆಳೆ ವೈವಿದ್ಯತೆಗಳಿದ್ದು, ಆಯಾ ಪ್ರದೇಶದಲ್ಲಿನ ವಿನೂತನ ಪ್ರಯೋಗ ಮಾಡಿ ಯಶಸ್ಸು ಸಾಧಿಸಿದ ರೈತರನ್ನು ಕೃಷಿ ವಿವಿ ಗುರುತಿಸಿ, ಅವರಿಗೆ ಕೃಷಿಮೇಳದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು. ಇದುಜಾರಿಯಾದರೆ ಕೃಷಿಮೇಳ ನಿಜಕ್ಕೂ ಅರ್ಥಪೂರ್ಣಗೊಳ್ಳುತ್ತದೆ ಎನ್ನುತ್ತಾರೆ ಪ್ರಗತಿಪರ ಕೃಷಿಕರು.
-ಬಸವರಾಜ ಹೊಂಗಲ್