Advertisement

ಅಧಿಕಾರಿಗಳಿಂದ ಕೃಷಿ ಉಪಕರಣ ಮಾರಾಟ

11:44 AM Jun 09, 2019 | Suhan S |

ಸವಣೂರು: ಕೃಷಿ ಇಲಾಖೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಸರ್ಕಾರದ ವಿವಿಧ ಯೋಜನೆಗಳಡಿ ರೈತರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಿಲ್ಲ, ರೈತರಿಗೆ ಸಿಗಬೇಕಾದ ಕೃಷಿ ಉಪಕರಣಗಳನ್ನು ಅಧಿಕಾರಿಗಳು ಮಾರಿಕೊಳ್ಳುತ್ತಿದ್ದಾರೆ ಎಂದು ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ಆರೋಪಿಸಿದರು.

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ, ಸಭೆಯಲ್ಲಿ ಸರ್ಕಾರದ ಯೋಜನೆಯಡಿ ಕೃಷಿ ಉಪಕರಣ ಪಡೆಯಲು ಅರ್ಜಿ ಸಲ್ಲಿಸಿ ವಿಫಲರಾದ ರೈತರ ಪಟ್ಟಿಯನ್ನು ಸಭೆಯಲ್ಲಿ ಪ್ರದರ್ಶಿಸುವ ಮೂಲಕ ಕೃಷಿ ಇಲಾಖೆಯ ಅಕಾರಿಯನ್ನು ತರಾಟೆ ತೆಗೆದುಕೊಂಡರು.

ಸಹಾಯಕ ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಅಧಿಕಾರಿ ಪಿ.ಆರ್‌.ಕಲಾಲ ವರದಿ ಸಲ್ಲಿಸಲು ಮುಂದಾಗುತ್ತಿದ್ದಂತೆ ಅವರನ್ನು ತಡೆದ ತಾಪಂ ಅಧ್ಯಕ್ಷ ಸುಬ್ಬಣ್ಣವರ, ಸರ್ಕಾರದ ಯೋಜನೆಯಡಿ ರೈತರಿಗೆ ಕೃಷಿ ಸಾಮಗ್ರಿಗಳನ್ನು ಹಣ ಪಡೆದು ವಿತರಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಅಧಿಕಾರಿಗಳು ಮನಬಂದತೆ ರೈತರ ಆಯ್ಕೆ ಪ್ರಕ್ರಿಯೆ ಪಟ್ಟಿಯನ್ನು ತಯಾರಿಸುವುದನ್ನು ಬಿಟ್ಟು, ಪಾರದರ್ಶಕವಾಗಿ ಹಾಗೂ ನ್ಯಾಯ ಸಮ್ಮತವಾಗಿ ಆಯ್ಕೆಗೊಳಿಸಬೇಕು. ರೈತರಿಗೆ ಸಮರ್ಪಕ ಮಾಹಿತಿ ನೀಡಿ ಸರ್ಕಾರದ ಯೋಜನೆಗಳನ್ನು ನೀಡುವ ಮೂಲಕ ಅವರಿಗೆ ಸಹಕಾರ ನೀಡಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಕಳೆದ ಸಾಲಿನಲ್ಲಿ ವಿತರಿಸಲಾದ ಬಿತ್ತನೆ ಬೀಜ ಹಾಗೂ ಗೊಬ್ಬರದ ಕುರಿತು ಮಾಹಿತಿ ಕೇಳಿದರೂ ಸಹ ಈ ವರೆಗೂ ನೀಡಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಹೀಗಾದರೆ, ನೀವು ಸಭೆಗೆ ಬರುವುದಾದರೂ ಯಾತಕ್ಕೆ? ಈ ಕುರಿತು ನಿಮ್ಮ ವರ್ತನೆ ವಿರುದ್ಧ ಜಿಲ್ಲಾ ಕಚೇರಿಗೆ ಪತ್ರ ಬರೆಯುವ ಮೂಲಕ ವಿವರಣೆಯನ್ನು ನೀಡಲಾಗುತ್ತದೆ ಎಂದು ಎಚ್ಚರಿಸಿದರು.

Advertisement

ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಸರಸ್ವತಿ ಗಜಕೋಶ ವರದಿ ಸಲ್ಲಿಸಿ, ತಾಲೂಕಿನ ವಸತಿ ನಿಲಯಗಳಿಗೆ ಹಾಗೂ ಶಿಷ್ಯ ವೇತನಕ್ಕಾಗಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ, ವಿದ್ಯಾರ್ಥಿಗಳು ಸರ್ಕಾರದ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸಹಕಾರವನ್ನು ನೀಡಬೇಕು ಎಂದು ಕೋರಿದರು.ಈ ಕುರಿತು ಹೆಚ್ಚಿನ ಮಾಹಿತಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ ಇಲಾಖೆ ವರದಿ ಸಲ್ಲಿಸಿ, ಪಟ್ಟಣದ ಅಂಬೇಡ್ಕರ್‌ ನಗರದ ಪ್ರಾಥಮಿಕ ಶಾಲೆ ಹಾಗೂ ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದಲ್ಲಿ ಪ್ರಸಕ್ತ ಸಾಲಿನಿಂದ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಆರಂಭಿಸಲಾಗುತ್ತಿದೆ. ಶಾಲೆಯಲ್ಲಿ 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಸರ್ಕಾರದಿಂದ ನಿರ್ದೇಶನ ಇದ್ದು, ಅವಶ್ಯಕತೆಗಿಂತ ಹೆಚ್ಚಿನ ಮಕ್ಕಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ, ಲಾಟರಿ ಮೂಲಕ ಮಕ್ಕಳನ್ನು ಆಯ್ಕೆಗೊಳಿಸಲು ತಿರ್ಮಾನಿಸಲಾಗಿದೆ. ತಾಲೂಕಿನಲ್ಲಿ ಶೇ. 96 ರಷ್ಟು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆಯನ್ನು ಕೈಗೊಳ್ಳಲಾಗಿದೆ. ಸೈಕಲ್, ಶೂ, ಸಾಕ್ಸ್‌ ಮುಂದಿನ 2 ತಿಂಗಳಲ್ಲಿ ವಿತರಿಸಲಾಗುವುದು ಎಂದರು.

ಪಡಿತರ ಚೀಟಿ ವಿತರಣೆಯನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಬಡವರು ಸರ್ಕಾರದ ಯೋಜನೆಗಳನ್ನು ಪಡೆಯಲು ಪರದಾಡುವಂತಾಗಿದೆ. ಕೂಡಲೇ ಈ ಕುರಿತು ಸೂಕ್ತ ಕ್ರಮವನ್ನು ಕೈಗೊಂಡು ಪಡಿತರ ಚೀಟಿ ವಿತರಣೆಯನ್ನು ಆರಂಭಿಸಲು ಆಹಾರ ನಿರೀಕ್ಷಕ ಬಿ.ಪಿ.ಸಂಕಣ್ಣವರ ಅವರಿಗೆ ಸೂಚಿಸಲಾಯಿತು.

ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ವರದಿಯನ್ನು ಸಲ್ಲಿಸಿದರು.

ತಾಪಂ ಇಒ ಎಸ್‌.ಎಂಡಿ. ಇಸ್ಮಾಯಿಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next