Advertisement

ಉಳ್ತೂರು: ಕೃಷಿ ಭೂಮಿ ಆವರಿಸುತ್ತಿದೆ ಅಂತರಗಂಗೆ

06:00 AM Jul 03, 2018 | Team Udayavani |

ತೆಕ್ಕಟ್ಟೆ: ಕೆದೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಲ್ತೂರು,ಉಳ್ತೂರು ಭಾಗಗಳಲ್ಲಿ ಅಂತರಗಂಗೆ ಸಮಸ್ಯೆ ತೀವ್ರವಾಗಿದ್ದು ಈ ಭಾಗದ ನೂರಾರು ಎಕರೆ ಕೃಷಿ ಭೂಮಿಯನ್ನು ಆವರಿಸಿರುವ ಪರಿಣಾಮ ಕೃಷಿಕರು ಕಂಗಾಲಾಗಿದ್ದಾರೆ.

Advertisement

ಏನಿದು ಅಂತರಗಂಗೆ ? 
ನೀರಿನ ಮೇಲೆ ತೇಲುವ ಜಲಕಳೆ. ಆಲಂಕಾರಿಕವಾಗಿಯೂ ಬಳಸುತ್ತಾರೆ. ಈ ಗಿಡ ನೀರಿನಲ್ಲಿ ತೇಲಿಕೊಂಡಿದ್ದರೆ, ಬೇರುಗಳನ್ನು ಕೆಳಭಾಗಕ್ಕೆ ಬಿಟ್ಟಿರುತ್ತದೆ.  ವಾಟರ್‌ ಲೆಟ್ಯೂಸ್‌ (Water lettuce) ಅಥವಾ ಅಂತರಗಂಗೆ ಎಂದು ಕರೆಯಲಾಗುತ್ತದೆ. ಇದರ ಮೂಲ ನೈಲ್‌ ನದಿಯ ತಟವಾಗಿದ್ದು, ಅಲ್ಲಿಂದ ವಿಶ್ವಾದ್ಯಂತ ಹರಡಿದೆ. ಈ ಗಿಡ ಆಮ್ಲಜನಕ ಹಾಗೂ ಸೂರ್ಯನ ಬೆಳಕು ನೀರಿನ ಆಳಕ್ಕೆ ಇಳಿಯದಂತೆ ತಡೆಯುವ ಮೂಲಕ ನೀರಿನಲ್ಲಿರುವ ಮೀನುಗಳು ಹಾಗೂ ಇತರ ಜಲಚರಗಳ ಸಾವಿಗೂ ಕಾರಣವಾಗುತ್ತದೆ.
  
ಎಲ್ಲೆಲ್ಲಿ ಸಮಸ್ಯೆ?
ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಲ್ಯಾಡಿ, ಮಾಲಾಡಿ, ಕುದ್ರುಬೈಲು ಹಾಗೂ ಕೆದೂರು ಗ್ರಾಮ ಪಂಚಾಯತ್‌ನ ಹಲ್ತೂರು ಬೈಲು, ಉಳ್ತೂರು  ಮೂಡುಬೆಟ್ಟು ಪ್ರದೇಶಗಳ ನೂರಾರು ಎಕರೆಯಲ್ಲಿ ಅಂತರಗಂಗೆ ಆವರಿಸಿದೆ. ಮಳೆಗಾಲದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಇವುಗಳ ಹರಡುವಿಕೆ ತೀವ್ರವಾಗುತ್ತದೆ. ಗದ್ದೆಗಳಲ್ಲಿ ನಾಟಿ ಮಾಡಿದ ಸಸಿಗಳ ಮೇಲೆ ಬಂದೆರಗುವುದರಿಂದ ಕೃಷಿ ನಾಶವಾಗುತ್ತದೆ.
  
ಹೊಳೆ ಸಾಲು ಹೂಳೆತ್ತಬೇಕು
ಹಲ್ತೂರು ಬೈಲು, ಉಳ್ತೂರು  ಮೂಡುಬೆಟ್ಟು ಸೇರಿದಂತೆ ಅಂತರಗಂಗೆ ಈಗಾಗಲೇ ವ್ಯಾಪಕವಾಗಿ ಕೃಷಿಭೂಮಿಯನ್ನು ವ್ಯಾಪಿಸಿದೆ. ಹಲೂ¤ರಿನ ಹುಣ್ಸೆಕಟ್ಟೆಯಿಂದ ತೆಂಕಬೆಟ್ಟಿನ ಬಟ್ಟೆಕೆರೆ ಬೈಲಿನ ವರೆಗೆ ಹೊಳೆ ಸಾಲನ್ನು ಹೂಳೆತ್ತಬೇಕು. ಇದರಿಂದ ನೀರಿನ ಒಳ ಹರಿವು ಹೆಚ್ಚಾದಾಗ ಗ್ರಾಮದಲ್ಲಿ ಕೃಷಿಕರ ಪಾಲಿಗೆ ಕಂಟಕವಾಗಿದ್ದ ಅಂತರಗಂಗೆ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಂಡು ಕೊಳ್ಳಲು ಸಾಧ್ಯವಿದೆ ಎನ್ನುವುದು ಸ್ಥಳೀಯ ಕೃಷಿಕ ಪ್ರತಾಪ್‌ ಶೆಟ್ಟಿ  ಅವರ ಅಭಿಪ್ರಾಯ.

ವೆಂಟೆಡ್‌ ಡ್ಯಾಂ 
ಸರಿಯಿಲ್ಲದೇ ಹಬ್ಬಿದ ಕಳೆ 

ಉಳ್ತೂರು  ಸೇತುವೆ ಸಮೀಪದಲ್ಲಿ ಹೊಳೆ ಸಾಲಿಗೆ ಅಡ್ಡಲಾಗಿ ಸುಮಾರು ರೂ.47 ಲಕ್ಷದ ವೆಚ್ಚದಲ್ಲಿ ಹೊಸ ವೆಂಟೆಡ್‌ ಡ್ಯಾಂ,  ಬೆಟ್ಟಂಗಿ ಬೈಲ್‌ನಲ್ಲಿ ಹಳೆಯದಾದ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಆದರೆ ಇದಕ್ಕೆ ಬೇಕಾದ ಹಲಗೆಗಳು ಸಮರ್ಪಕವಾಗಿಲ್ಲದೇ ಕಳೆ ಹಬ್ಬಲು ಕಾರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  

ನಿಯಂತ್ರಣ ಹೇಗೆ? 
ಈ ಕಳೆಯ ನಿಯಂತ್ರಣ ಮಳೆಗಾಲಕ್ಕೆ ಮೊದಲೇ ಆಗಬೇಕು. ಕಳೆಯನ್ನು ಸಂಪೂರ್ಣವಾಗಿ ಮೇಲೆತ್ತಿ ಹೂಳಬೇಕಾಗುತ್ತದೆ. ನೀರು ಹೆಚ್ಚು ಮಲಿನವಾಗದಂತೆ ತಡೆದು ಕಳೆನಾಶಕಗಳನ್ನು ಸಿಂಪಡಿಸಬೇಕು. ಇದರೊಂದಿಗೆ ಸಿರಟೊಬ್ಯಾಗಸ್‌ ಸಾಲ್ವೆನಿಯಾ ಎಂಬ ದುಂಬಿಯಿಂದ ಕಳೆಯ ನಿಯಂತ್ರಣ ಸಾಧ್ಯವಿದೆ.  

ಹೊಳೆ ಹೂಳೆತ್ತಿ 
ಬೇಸಗೆಯಲ್ಲಿ ಹಲ್ತೂರಿನಿಂದ ಕೊçಕೂರಿನ ವರೆಗೆ ಹೊಳೆ ಹೂಳೆತ್ತಿದಾಗ ಗ್ರಾಮದಲ್ಲಿ ಉದ್ಭವಿಸಿರುವ ಕಳೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
– ಪ್ರಶಾಂತ್‌ ಶೆಟ್ಟಿ ಉಳ್ತೂರು,
ಸದಸ್ಯರು , ಗ್ರಾ.ಪಂ. ಕೆದೂರು

Advertisement

ವಿಷಕಾರಿ ಎಲೆ
ಪ್ರತಿ ವರ್ಷದಂತೆ ಅಂತರಗಂಗೆಯ ಜತೆಗೆ ಮುಳ್ಳು ಜಾತಿಯ ವಿಷಕಾರಿ ಎಲೆ ಹೊಂಡದಲ್ಲಿ ಅಲ್ಲಲ್ಲಿ ಬೆಳೆದು ನಿಂತು ಕೃಷಿ ಭೂಮಿಯನ್ನು ಆವರಿಸುತ್ತಿದೆ. ಇಲ್ಲಿನ ಹೊಳೆಸಾಲುಗಳನ್ನು ಹೂಳೆತ್ತಿದರೆ ಅಂತರಗಂಗೆ ಸಮಸ್ಯೆಗೂ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
– ಸಾಧಮ್ಮ ಶೆಟ್ಟಿ , 
ಹಿರಿಯ ಕೃಷಿಕರು, ಉಳ್ತೂರು 

– ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next