Advertisement

ಕೃಷಿ ತಿದ್ದುಪಡಿ ಕಾಯ್ದೆವಾಪಸ್‌: ರೈತರ ವಿಜಯೋತ್ಸವ

06:17 PM Nov 20, 2021 | Team Udayavani |

ಗದಗ: ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವುದನ್ನು ಸ್ವಾಗತಿಸಿ ಕರ್ನಾಟಕ ರೈತ ಸೇನೆ ನೇತೃತ್ವದಲ್ಲಿ ರೈತರು ಶುಕ್ರವಾರ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

Advertisement

ರೈತ ಸೇನೆ ರಾಜ್ಯಾಧ್ಯಕ್ಷ ಶಂಕ್ರಣ್ಣ ಅಂಬಲಿ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ಉದ್ದೇಶಿಸಿದ್ದ ಮೂರು ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನಗಳಾಗಿದ್ದವು. ಅವುಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪಂಜಾಬ್‌ ಭಾಗದ ರೈತರು ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ನಡೆಸಿದ್ದರು. ಅವರಿಗೆ ಧ್ವನಿಯಾಗಿ ದೇಶಾದ್ಯಂತ ರೈತರು ಬೀದಿಗಿಳಿದಿದ್ದರಿಂದ ಕೇಂದ್ರ ಸರಕಾರ ರೈತರಿಗೆ ತಲೆ ಬಾಗಿದೆ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಸ್ವಾಗತಾರ್ಹ ಎಂದು ಹೇಳಿದರು.

ಈ ಹೋರಾಟದಲ್ಲಿ ಮಡಿದ ರೈತರ ಕುಟುಂಬಗಳಿಗೆ ಸರಕಾರ ಪರಿಹಾರ ಕಲ್ಪಿಸಬೇಕು. ರೈತರನ್ನು ಉಗ್ರರು, ಗೂಂಡಾಗಳು ಎಂದು ಅವಮಾನಿಸಿರುವುದಕ್ಕೆ ಬಿಜೆಪಿ ನಾಯಕರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಸೇನೆ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲೆಯ ಪ್ರಮುಖರಾದ ವಿ.ವೈ.ಹರ್ಲಾಪುರ, ಪಿಸಿ.ಬೆಟಗೇರಿಮಠ, ಅಂದಾನಪ್ಪ ಚಿಂಚಲಿ, ಬಿ.ವೈ.ಪೂಜಾರ, ಶಿವಪ್ಪ, ಯಲ್ಲಪ್ಪ ತಳವಾರ, ರೇವಣ್ಣ ಪೂಜಾರ, ಬಸಪ್ಪ ಹಾವೇರಿ, ಸಿದ್ದಪ್ಪ ಮಾಳೂರ, ಜಯಪ್ಪ ಶಿರೂರ, ಚನ್ನಬಸಪ್ಪ ಬೆಳದಟ್ಟಿ, ರಾಮಪ್ಪ ಅಣ್ಣಿಗೇರಿ ಮತ್ತಿತರರು ಪಾಲ್ಗೊಂಡಿದ್ದರು.

ಮೂರು ಕೃಷಿ ಕಾಯ್ದೆಯಿಂದ ಕರಾಳ ದಿನವಾಗಿದ್ದ ಭಾರತ ದೇಶದ ರೈತರಿಗೆ ಇಂದು ಸ್ವಾತಂತ್ರ್ಯ ಸಿಕ್ಕಿದಂತಾಗಿದೆ. ಸತತ ಒಂದು ವರ್ಷ ಹೋರಾಟ ಮಾಡಿದ
ಪರಿಣಾಮ ದೇಶದ ರೈತರಿಗೆ ನ್ಯಾಯ ಸಿಕ್ಕಿದೆ. ಈ ಹೋರಾಟದಲ್ಲಿ 670ಕ್ಕೂ ಅಧಿಕ ರೈತರು ಹುತಾತ್ಮರಾಗಿದ್ದಾರೆ. ಆದರೆ, ಆರಂಭದಲ್ಲಿ ಯಾವುದಕ್ಕೂ ಮಣಿಯದೇ ಜಗ್ಗದೆ, ಬಗ್ಗದೆ ಇದ್ದ ಕೇಂದ್ರ ಸರಕಾರ, ಕೊನೆಗೂ ರೈತರ ಹೋರಾಟಕ್ಕೆ ತಲೆಬಾಗಿದೆ. ಈ ನಿರ್ಣಯ ಮೊದಲೇ ತೆಗೆದುಕೊಂಡಿದ್ದರೆ ರೈತರ ಸಾವು, ನೋವುಗಳು ಸಂಭವಿಸುತ್ತಿರಲಿಲ್ಲ.

ವಿಠಲ ಗಣಾಚಾರಿ,
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ

Advertisement

ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಈ ಕಾಯ್ದೆ ವಿರುದ್ಧದ ಹೋರಾಟ ದಿಲ್ಲಿಯಿಂದ ಹಳ್ಳಿ ವರೆಗೂ ತಲುಪಿತ್ತು. ಈ ಪ್ರತಿಭಟನೆಯಲ್ಲಿ ಅನೇಕ ಸಾವು, ನೋವುಗಳು ಸಂಭವಿಸಿವೆ. ಮೃತ ರೈತರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸಲು ರೈತರೊಂದಿಗೆ ಚರ್ಚೆ ಮಾಡಬೇಕು.
ವಿಶ್ವನಾಥ ಖಾನಾಪೂರ,
ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next